News Kannada
Thursday, November 30 2023
ಬೆಂಗಳೂರು ನಗರ

ಬೆಂಗಳೂರು: ಎಎಪಿಯಿಂದ ನೆರೆಪೀಡಿತ ಪ್ರದೇಶಗಳ ಪರಿಶೀಲನೆ

Bengaluru: Prithvi Reddy, Bhaskar Rao led by AAP to inspect flood-hit areas
Photo Credit : News Kannada

ಬೆಂಗಳೂರು, ಸೆ.7: ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ನೇತೃತ್ವದಲ್ಲಿ ಪಕ್ಷದ ತಂಡವು ಬೆಂಗಳೂರಿನ ಯಮಲೂರು, ಬೆಳ್ಳಂದೂರು ಮುಂತಾದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ರಾಜಕಾಲುವೆ ಒತ್ತುವರಿಗಳನ್ನು ಪರಿಶೀಲಿಸಿ ಮಾತನಾಡಿದ ಪೃಥ್ವಿ ರೆಡ್ಡಿ, “ಬೆಂಗಳೂರಿನ ರಸ್ತೆ ಸುಧಾರಣೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಿಸಲು ನೀರಾವರಿ ತಜ್ಞ ಕ್ಯಾ. ರಾಜಾರಾವ್ ನೇತೃತ್ವದ ಸಮಿತಿಯು ಹಲವು ವರ್ಷಗಳ ಹಿಂದೆಯೇ ವರದಿ ನೀಡಿದೆ. ಇದನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಹೈಕೋರ್ಟ್ ಕೂಡ ಸೂಚಿಸಿದೆ. ಆದರೂ ಅನುಷ್ಠಾನಕ್ಕೆ ಬಂದಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಇಚ್ಛಾಶಕ್ತಿ ತೋರಿ ಈ ವರದಿ ಅನುಷ್ಠಾನಗೊಳಿಸಲು ಮುಂದಾಗಬೇಕು. ವ್ಯವಸ್ಥಿತವಾಗಿ ರಾಜಕಾಲುವೆಗಳನ್ನು ನಿರ್ವಹಣೆ ಮಾಡಲು ಹಾಗೂ ಅವುಗಳ ಒತ್ತುವರಿ ತೆರವುಗೊಳಿಸಲು ಪ್ರತ್ಯೇಕ ಆಯೋಗದ ಆವಶ್ಯಕತೆಯಿದೆ. ರಾಜ್ಯ ಸರ್ಕಾರವು ಶೀಘ್ರವೇ ಆಯೋಗ ರಚಿಸಬೇಕು” ಎಂದು ಹೇಳಿದರು.

“ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನವನ್ನು ಸಿಎಂ ಬಸವರಾಜ್‌ ಬೊಮ್ಮಾಯಿಯವರು ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ಕೂಡ ಇದೇ ತಪ್ಪು ಮಾಡಿದ್ದರು. ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಇದನ್ನೂ ಸಮರ್ಥವಾಗಿ ನಿಭಾಯಿಸುವುದು ಅಸಾಧ್ಯ. ಆದ್ದರಿಂದ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಜ್ಞಾನವಿರುವವರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನವನ್ನು ಬೊಮ್ಮಾಯಿಯವರು ಬಿಟ್ಟುಕೊಡಬೇಕು. “ನೆರೆಯಿಂದ ಆವೃತವಾಗಿರುವ ಬೆಂಗಳೂರಿನ ಅನೇಕ ಕುಟುಂಬಗಳಿಗೆ ಹೊರಗಿನ ಸಂಪರ್ಕ ಸಾಧ್ಯವಾಗುತ್ತಿಲ್ಲ. ಅವರನ್ನು ಮನೆಯಿಂದ ಹೊರತಂದು ತಾತ್ಕಾಲಿಕ ಪುನರ್ವಸತಿ ಕಲ್ಪಿಸಲು ತ್ವರಿತಗತಿಯಲ್ಲಿ ಕಾರ್ಯಾಚರಣೆ ಆರಂಭಿಸಬೇಕು” ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.

ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಮಾತನಾಡಿ, “ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿಗೆ 2022ರ ಜೂನ್‌ ತಿಂಗಳಿನಲ್ಲಿ 1500 ಕೋಟಿ ರೂಪಾಯಿಯನ್ನು ಸರ್ಕಾರವು ಬಿಬಿಎಂಪಿಗೆ ಬಿಡುಗಡೆ ಮಾಡಿದೆ. ಆದರೆ ರಾಜಕಾಲುವೆಗಳು ಮಾತ್ರ ಶೋಚನೀಯ ಸ್ಥಿತಿಯಲ್ಲಿವೆ. ಆ ಭಾರೀ ಮೊತ್ತದ ಹಣ ಏನಾಯಿತು ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ. ಬಿಬಿಎಂಪಿ ರಿಯಲ್‌ ಎಸ್ಟೇಟ್‌ ಮಾಫಿಯಾಕ್ಕೆ ಜಲಮೂಲಗಳನ್ನು ಧಾರೆ ಎರೆದು ಕೊಟ್ಟಿದ್ದನ್ನು ಎ.ಟಿ.ರಾಮಸ್ವಾಮಿ ಸಮಿತಿಯ ವರದಿಯು ಸ್ಪಷ್ಟವಾಗಿ ತಿಳಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1,848 ಎಕರೆಯಷ್ಟು ಕೆರೆ ಅಂಗಳ ಪ್ರದೇಶ ಒತ್ತುವರಿಯಾಗಿದೆ ಎಂದು ಈ ವರದಿ ತಿಳಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಲವು ಕೆರೆಗಳ ದಡದಲ್ಲೇ ಬಡಾವಣೆಗಳನ್ನು ನಿರ್ಮಿಸಿ ಹಣ ಮಾಡಿಕೊಂಡಿದೆ. ಇದರ ಪರಿಣಾಮವನ್ನು ಇಂದು ನಗರದ ಸಮಸ್ತ ನಾಗರಿಕರು ಅನುಭವಿಸಬೇಕಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಬೆಂಗಳೂರಿನ ಪ್ರವಾಹದ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆಹಾರ ವಿತರಣೆ, ಜಲಾವೃತವಾಗಿರುವ ಕಟ್ಟಡದಿಂದ ಜನರನ್ನು ಹೊರ ತರುವುದು, ಮುಳುಗಿರುವ ಕಾರನ್ನು ಮೇಲೆತ್ತಲು ಸಹಾಯ ಮಾಡುವುದು ಮುಂತಾದ ನಾನಾ ರೀತಿಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗಿಗಳು ಸಕಾಲಕ್ಕೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಐ.ಟಿ. ಕಂಪನಿಗಳು ನೂರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತು ಅವುಗಳು ಬೇರೆ ರಾಜ್ಯಗಳಿಗೆ ವಲಸೆ ಹೋದರೆ ಕರ್ನಾಟಕಕ್ಕೆ ಅನೇಕ ರೀತಿಯ ನಷ್ಟವಾಗಲಿದೆ” ಎಂದು ಭಾಸ್ಕರ್‌ ರಾವ್‌ ಹೇಳಿದರು.

See also  ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ತಲೆ ಕಡಿಯುತ್ತೇನೆಂದ ಅಪರಿಚಿತ!

ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಮೋಹನ್ ದಾಸರಿ, ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಚನ್ನಪ್ಪ ಗೌಡ ನೆಲ್ಲೂರು, ಅಶೋಕ್‌ ಮೃತ್ಯುಂಜಯ ,ಮುನೀಂದ್ರ ಡಾ.ಕೇಶವ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು