ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧದ ರಾಜಕೀಯ ಅಭಿಯಾನವಾಗಿ ಬೆಂಗಳೂರಿನಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಲು ಮುಂದಾದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿದರು.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪೇ ಸಿಎಂ ಪೋಸ್ಟರ್ ಅಂಟಿಸಲು ಮುಂದಾದ ವೇಳೆ, ಪೋಸ್ಟರ್ ಕಸಿದುಕೊಂಡ ಪೊಲೀಸರು, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸಂವಹನ ಮತ್ತು ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಮತ್ತಿತರ ಮುಖಂಡರು ಬೆಂಗಳೂರಿನ ರೇಸ್ ಕೋರ್ಸ್ ಸಮೀಪ ಪೇ ಸಿಎಂ ಪೋಸ್ಟರ್ ಅಂಟಿಸಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನೆ ನಿರತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು ಎಂದು ಕಾಂಗ್ರೆಸ್ ತಿಳಿಸಿದೆ.