News Kannada
Friday, December 09 2022

ಬೆಂಗಳೂರು ನಗರ

ಬೆಂಗಳೂರಿಗೆ ಬೇಕಿದೆ ಸುಸ್ಥಿರ ಸಾರಿಗೆ ವ್ಯವಸ್ಥೆ: ಗ್ರೀನ್ ಪೀಸ್ ಇಂಡಿಯಾ ಆಗ್ರಹ

Photo Credit : By Author

ಬೆಂಗಳೂರು: ನಗರದಲ್ಲಿ ಈ ತಿಂಗಳ ಆರಂಭದಲ್ಲಿ ಸುರಿದ ಭಾರೀ ಮಳೆ, ನಗರಕ್ಕೆ ಮತ್ತು ನಾಗರೀಕರಿಗೆ ಉಂಟು ಮಾಡಿರುವ ಅಗಾಧ ನಷ್ಟದ ಹಿನ್ನಲೆಯಲ್ಲಿ, ಪ್ರವಾಹ ನಿಯಂತ್ರಣಕ್ಕೆ ದೀರ್ಘಾವಧಿಯ ಹಾಗು ಸುಸ್ಥಿರ ಪರಿಹಾರ ಕ್ರಮಗಳನ್ನು ರೂಪಿಸುವಂತೆ ಸರ್ಕಾರವನ್ನು ಗ್ರೀನ್ ಪೀಸ್ ಇಂಡಿಯಾ ಆಗ್ರಹಿಸಿದೆ. ಈ ಸಂಬಂಧ ಅದು ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ತೆರೆದ ಪತ್ರವನ್ನು ಬರೆದಿದೆ.

“ನಿರ್ದಿಷ್ಟವಾಗಿ ಹವಾಮಾನ ವೈಪರೀತ್ಯಗಳು ಸಾಮಾನ್ಯ ಎನ್ನುವಂತಾಗಿರುವ ಈ ಕಾಲಘಟ್ಟದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಗ್ರೀನ್ ಪೀಸ್ ಉದ್ದೇಶಿಸಿದೆ. ಇದರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಈ ಬಿಕ್ಕಟ್ಟಿಗೆ ಸ್ಥಳೀಯವಾಗಿ ಕೈಗೊಳ್ಳಬೇಕಾದ ಪರಿಹಾರೋಪಾಯಗಳ ಕುರಿತು ಚರ್ಚಿಸಲು ಜನಪ್ರತಿನಿಧಿಗಳನ್ನು, ನಾಗರಿಕರನ್ನು ಮತ್ತು ವಿವಿಧ ವಲಯದ ಹೂಡಿಕೆದಾರರನ್ನು ಚರ್ಚೆಗೆ ಆಹ್ವಾನಿಸುತ್ತದೆ,” ಎಂದು ಸಂಘಟನೆ ತಿಳಿಸಿದೆ.

ಬೆಂಗಳೂರು ಪ್ರಸ್ತುತ ತೀವ್ರತರದ ಸವಾಲನ್ನು ಎದುರಿಸುತ್ತಿದೆ. ಆದರೆ ಇದಕ್ಕೆ ನಗರದ ಅಭಿವೃದ್ಧಿ ಪಾಲುದಾರರ ಪ್ರತಿಕ್ರಿಯೆ ಸೂಕ್ತವಾಗಿ ದಾಖಲಾಗುತ್ತಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ ಸೆಪ್ಟೆಂಬರ್ ಮೊದಲ ವಾರಗಳಲ್ಲಿ ಬೆಂಗಳೂರಿನಲ್ಲಿ ಸುರಿದ ಮಹಾ ಮಳೆ ಮತ್ತು ಪ್ರವಾಹದಿಂದಾಗಿ 2,000 ಮನೆಗಳು ಜಲಾವೃತಗೊಂಡವು ಮತ್ತು 22,000 ವಾಹನಗಳಿಗೆ ಹಾನಿಯುಂಟಾಗಿದೆ. ಇದರ ಮಧ್ಯೆ ನಿರ್ಲಕ್ಷಕ್ಕೊಳಗಾದ ನೂರಾರು ಸಮುದಾಯಗಳು ಎದುರಿಸುತ್ತಿರುವ ಕಷ್ಟಗಳು, ಅವರ ಚೂರು ಪಾರು ಕೂಡಿಟ್ಟ- ಉಳಿತಾಯ ಮಾಡಿದ ಹಣ ಮತ್ತು ವಸ್ತುಗಳಿಗೆ ಉಂಟಾದ ಹಾನಿಗಳು ಇನ್ನೂ ಅಧಿಕೃತ ಲೆಕ್ಕಕ್ಕೆ ಸಿಕ್ಕಿಲ್ಲ. ಅವರಲ್ಲಿ ಅನೇಕರು ತಮ್ಮ ಜೀವನೋಪಾಯ ಮತ್ತು ಆಶ್ರಯಗಳನ್ನು ಕಳೆದುಕೊಂಡಿದ್ದಾರೆ. ಈ ಬಿಕ್ಕಟ್ಟಿನ ಮಧ್ಯೆ, ಐಪಿಸಿಸಿ ( IPCC) ವರದಿ 2022, ಭಾರತದಲ್ಲಿ ಮಳೆ ಹೆಚ್ಚು ನಿರಂತರವಾಗಿ ಮತ್ತು ಅನಿಯಮಿತವಾಗಿ ಸುರಿಯುವದರೊಂದಿಗೆ ಪ್ರವಾಹಕ್ಕೆ ಕಾರಣವಾಗಲಿದೆ ಎಂದಿದೆ. ಇದರೊಂದಿಗೆ ಈ ಅಧಿಕ ಮಳೆಯಿಂದಾಗಿ ಪ್ರಸ್ತುತ ಸಂಭವಿಸಿದ್ದಕ್ಕಿಂತಲೂ ಶೇಕಡಾ 20 ರಷ್ಟು ಹೆಚ್ಚಿನ ಮಳೆಹಾನಿಗಳು ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದೆ,” ಎಂದು ಸಂಘಟನೆ ತಿಳಿಸಿದೆ.

“ಎಲಿವೇಟೆಡ್/ಎತ್ತರಿಸಿದ ಹೆದ್ದಾರಿಗಳನ್ನು ನಿರ್ಮಿಸುವ ಸರ್ಕಾರದ ಇತ್ತೀಚಿನ ಘೋಷಣೆಯು ವಾತಾವರಣದಲ್ಲಿ ಇಂಗಾಲದ ಅಂಶವನ್ನು ಅಧಿಕವಾಗಿಸುತ್ತದೆ ಮತ್ತು ಇದು ಒಳಗೊಳ್ಳುವಿಕೆ ಆಧಾರಿತ ಪರಿಹಾರವೂ ಅಲ್ಲ. ಇಂತಹ ನೀತಿಗಳು ಹವಾಮಾನ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಮತ್ತು ಇದರೊಂದಿಗೆ ನಗರದ ಬಸ್-ಆಧಾರಿತ ಸಾರಿಗೆ (ಬಸ್ಸುಗಳು ಜನರಿಗೆ ದೈನಂದಿನ ಸಂಚಾರ ವ್ಯವಸ್ಥೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ) ಯನ್ನು ಮತ್ತು ಮೋಟಾರುರಹಿತ ಸಾರಿಗೆ-ಆಧಾರಿತ ಪರಿಹಾರ (ಸೈಕ್ಲಿಂಗ್ ಮತ್ತು ವಾಕಿಂಗ್ ಮುಂತಾದವು) ಗಳನ್ನು ಮತ್ತು ಬಳಕೆದಾರರು ತಮ್ಮ ಕೊನೆಯ ನಿಲ್ದಾಣವನ್ನು (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಸಂಪರ್ಕಿಸುವ ವ್ಯವಸ್ಥೆಯನ್ನು ನಿರ್ಲಕ್ಷಿಸುವುದರೊಂದಿಗೆ ಇದನ್ನು ಅಳಿವಿನ ಅಂಚಿಗೆ ದೂಡುವ ಅಪಾಯವೂ ಇದೆ,” ಎಂದು ಸಂಘಟನೆ ಎಚ್ಚರಿಸಿದೆ.

2011 ರ ಜನಗಣತಿಯ ದತ್ತಾಂಶವು ಬೆಂಗಳೂರಿನ ಜನಸಂಖ್ಯಾ ಸಾಂದ್ರತೆಯು ಕಳೆದ ದಶಕದಲ್ಲಿ ಶೇಕಡಾ 47 ರಷ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ.

See also  ಬಂಟ್ವಾಳ: ಬಿಸಿಎಂ ವಿದ್ಯಾರ್ಥಿ ನಿಲಯದ ಪಿಯುಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಗ್ರೀನ್ ಪೀಸ್ ಇಂಡಿಯಾದ ಕ್ಯಾಂಪೇನ್ ಮ್ಯಾನೇಜರ್ ಅವಿನಾಶ್ ಕುಮಾರ್ ಚಂಚಲ್ ಪ್ರಕಾರ , “ಪ್ರಸ್ತುತ ಹವಾಮಾನ ಬದಲಾವಣೆಯ ಪರಿಣಾಮವು ಹಿಂದೆಂದಿಗಿಂತಲೂ ಹೆಚ್ಚು ಗೋಚರಿಸುತ್ತಿದೆ. ಪ್ರವಾಹಗಳು, ಇದ್ದಕ್ಕಿದ್ದಂತೆ ಸುರಿವ ಮಳೆ ಮತ್ತು ಬಿಸಿಗಾಳಿಗಳಂತಹ ಹವಾಮಾನ ವೈಪರೀತ್ಯಗಳು ಭಾರತದ ನಗರಗಳಾದ್ಯಂತ ಅವುಗಳ ತೀವ್ರತೆಯನ್ನು ಮತ್ತು ಪ್ರಮಾಣವನ್ನು ಹೆಚ್ಚಿಸುತ್ತಿವೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹವು ಹವಾಮಾನ ವೈಪರೀತ್ಯದ ತೀವ್ರತೆಯ ಉದಾಹರಣೆ. ಆದರೆ ಅಂತಹ ಘಟನೆಗಳನ್ನು ಎದುರಿಸಲು ನಗರ ಸನ್ನದ್ಧವಾಗಿರಲಿಲ್ಲ ಎಂಬುದು ದುರದೃಷ್ಟಕರ ಸಂಗತಿ. ಪ್ರಸ್ತುತ ನಾವು ಹವಾಮಾನ ವೈಪರೀತ್ಯಗಳನ್ನು ಎದುರಿಸಿಯೂ ಸದೃಡವಾಗಿ ನಿಲ್ಲಬಲ್ಲ ನಗರಗಳನ್ನು ನಿರ್ಮಿಸುವ ಸಮಯ ಸನ್ನಿಹಿತವಾಗಿದೆ. ಆದರೆ ರಾಜ್ಯ ಸರ್ಕಾರವು ಈ ಬಿಕ್ಕಟ್ಟನ್ನು ಹೆಚ್ಚು ಫ್ಲೈಓವರ್ಗಳು ಅಥವಾ ಎಲಿವೇಟೆಡ್ ಕಾರಿಡಾರ್ಗಳನ್ನು ನಿರ್ಮಿಸಲು ಬಳಸದಿರುವುದು ಕೂಡ ಅಷ್ಟೇ ಮುಖ್ಯ ಅದು ಸಮರ್ಥನೀಯವಲ್ಲ. ಈ ಪ್ರಸ್ತಾವನೆ ನಗರ ಮತ್ತು ನಾಗರೀಕರಿಗೆ ಪ್ರತಿಕೂಲವಾಗಿದೆ.

ಸಾಮಾಜಿಕವಾಗಿ ಪ್ರಯೋಜನಕಾರಿಯಾಗಿರುವ ಮೂಲಸೌಕರ್ಯಗಳನ್ನು ನಿರ್ಮಿಸುವುದು ಮತ್ತು ಖಾಸಗಿ ವಾಹನಗಳಿಗೆ ಪ್ರಾಮುಖ್ಯತೆ ನೀಡುವುದಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಸಾರಿಗೆಯನ್ನು ಮತ್ತು ಸಾರ್ವಜನಿಕ ಸಾರಿಗೆಗಾಗಿ ರಸ್ತೆಯಲ್ಲಿ ಹೆಚ್ಚಿನ ಸ್ಥಳವನ್ನು ಬಿಟ್ಟುಕೊಡುವುದು ಈ ಸಮಯದ ಅಗತ್ಯವಾಗಿದೆ. ”

ಗ್ರೀನ್ ಪೀಸ್ ಇಂಡಿಯಾ ನಗರದ ವಿವಿಧ ಅಭಿವೃದ್ಧಿ ಪಾಲುದಾರರು/ಹೂಡಿಕೆದಾರರ ಮುಂದೆ ಈ ಬೇಡಿಕೆಗಳನ್ನಿಡುತ್ತದೆ. ಅವುಗಳೆಂದರೆ ಪ್ರಸ್ತಾವಿತ ಮೂರು-ಪದರದ ಹೆದ್ದಾರಿಗಳ ನಿರ್ಮಾಣ ಯೋಜನೆಗಳನ್ನು ಅವುಗಳ ಸುಸ್ಥಿರವಲ್ಲದ ಮತ್ತು ಸೀಮಿತ ಉದ್ದೇಶದ ಕಾರಣದಿಂದ ಸರ್ಕಾರವು ಸ್ಥಗಿತಗೊಳಿಸಬೇಕು. ಹೊಸ ಹೆದ್ದಾರಿಗಳು ಚತುಷ್ಚಕ್ರ ವಾಹನಗಳ ಸಂಚಾರವನ್ನು ಕೇಂದ್ರೀಕರಿಸಿದೆ. ಇದರ ಬದಲು ಸರ್ಕಾರವು ತನ್ನ ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಮರುಹೂಡಿಕೆ ಮಾಡುವತ್ತ ಗಮನಹರಿಸಬೇಕು.

ಐ ಐ ಟಿ ಇ ಎಸ್ (ITeS), ಬಿಪಿಒ (BPO) ಮತ್ತು ಇತರ ಕಂಪನಿಗಳು ಮತ್ತು ಬೆಂಗಳೂರಿನ ಟೆಕ್ ಪಾರ್ಕ್ಗಳು ಕಡ್ಡಾಯವಾದ ಹೊಂದಾಣಿಕೆಯ ( ಫ್ಲೆಕ್ಸಿಬಲ್) ವೃತ್ತಿ ನಿಯಮಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಕಂಪನಿಗಳು ಸೈಕಲ್ಗಳ ಮೂಲಕ ಮತ್ತು ಸಾರ್ವಜನಿಕ ರಸ್ತೆ ಸಾರಿಗೆಯ ಮೂಲಕ ವೃತ್ತಿಸ್ಥಳಕ್ಕೆ ಪ್ರಯಾಣಿಸುವ ಉದ್ಯೋಗಿಗಳನ್ನು ಪ್ರೋತ್ಸಾಹಿಸಬೇಕು. ಕರ್ನಾಟಕ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಸ್ಥಳೀಯ ಹವಾಮಾನ ಆಧಾರಿತ ಹವಾಮಾನ ಕ್ರಿಯಾ ಯೋಜನೆಗಳನ್ನು ಸ್ಪಷ್ಟವಾದ ಕಾಲಮಿತಿಯೊಂದಿಗೆ ಮತ್ತು ನಾಗರಿಕರೊಂದಿಗೆ ನಿಕಟ ಸಮಾಲೋಚನೆಯೊಂದಿಗೆ ಕಾರ್ಯಗತಗೊಳಿಸಲು ಸಾಕಷ್ಟು ಸಂಪನ್ಮೂಲ ಮತ್ತು ಬೆಂಬಲವನ್ನು ಒದಗಿಸಬೇಕು.

ಸರ್ಕಾರ ಮತ್ತು ನಾಗರಿಕರು ಸಸ್ಯ ಮತ್ತು ಪ್ರಾಣಿಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮತ್ತು ಅದರ ಪ್ರಕೃತಿ-ಆಧಾರಿತ ವಿಪತ್ತನ್ನು ಎದುರಿಸುವ ಸಾಮರ್ಥ್ಯವನ್ನು ನಿರ್ಮಿಸಲು ಕರ್ನಾಟಕದ ನೈಸರ್ಗಿಕ ಸಂಪನ್ಮೂಲಗಳನ್ನು (ಜಲಮೂಲಗಳು, ಹಸಿರು ಹೊದಿಕೆ ಇತ್ಯಾದಿ) ಸಂರಕ್ಷಿಸಬೇಕು, ಪುನರುಜ್ಜೀವನಗೊಳಿಸಬೇಕು ಮತ್ತು ರಕ್ಷಿಸಲು ಸಹಾಯ ಮಾಡಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12429
Bhavana S.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು