News Kannada
Monday, September 25 2023
ಬೆಂಗಳೂರು ನಗರ

ಸಾಂಟ್ರೋ ರವಿ ಜತೆ ಬಿಜೆಪಿ ಸಚಿವರ ಸಂಪರ್ಕ; ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಹೆಚ್.ಡಿ.ಕುಮಾರಸ್ವಾಮಿ

New Project 19 1
Photo Credit : News Kannada

ಬೆಂಗಳೂರು: 2018ರ ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಯಾರನ್ನೆಲ್ಲ ಬಳಕೆ ಮಾಡಿಕೊಳ್ಳಲಾಯಿತು? ಬಾಂಬೆಗೆ ಹೋದವರ ಮೋಜು ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದರು ಯಾರು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿ ಅವರು; ಮೈಸೂರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿರುವ ಸಾಂಟ್ರೋ ರವಿ ಹಾಗೂ ರಾಜ್ಯ ಬಿಜೆಪಿ ಸರಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲೆಬೇಕು ಎಂದು ಆಗ್ರಹಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ, ಇಲ್ಲಿ ಅವರು ದಮ್ಮು ತಾಕತ್ತು ತೋರಿಸಲಿ ಎಂದು ಟಾಂಗ್ ನೀಡಿದರು ಮಾಜಿ ಮುಖ್ಯಮಂತ್ರಿಗಳು.

ಕರ್ನಾಟಕವನ್ನು ಉಳಿಸುವುದು, ರಕ್ಷಣೆ ಮಾಡುವುದು ಜೆಡಿಎಸ್ ಪಕ್ಷದಿಂದ ಸಾಧ್ಯ ಇಲ್ಲ ಎಂದು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ರಾಜ್ಯವು ಬಿಜೆಪಿ ನಾಯಕರಿಂದ ಉಳಿಯಲು ಸಾಧ್ಯವಿಲ್ಲ. ಈ ಸರಕಾರದ ಮಂತ್ರಿಗಳ ಹಣೆಬರಹ ಇಲ್ಲಿದೆ ನೋಡಿ ಎಂದು ಸಾಂಟ್ರೋ ರವಿ ಜತೆ ಪೋಸು ಕೊಟ್ಟಿರುವ ಮಂತ್ರಿಗಳ ಚಿತ್ರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು.

ಸಾಂಟ್ರೋ ರವಿ ಎಂಬಾತ ಅನೇಕ ಸಚಿವರ ಜತೆ ನಂಟು ಹೊಂದಿದ್ದಾನೆ. ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ. ಆದರೆ, ಶಿಕ್ಷಣ ಸಚಿವ ನಾಗೇಶ್ ಅವರ ಜತೆ ಅದೇಗೆ ಹೋಗಿ ಫೋಟೋ ತೆಗೆಸಿಕೊಂಡನೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಅಚ್ಚರಿ ವ್ಯಕ್ತಪಡಿಸಿದರು.

17 ಸಚಿವರತ್ನ ಬೊಟ್ಟು ಮಾಡಿದ ಮಾಜಿ ಸಿಎಂ:

ಸಾಂಟ್ರೋ ರವಿ ಜತೆ ಬಿಜೆಪಿ ಸರಕಾರದ ಯಾವ ಮಂತ್ರಿ ಸಂಪರ್ಕದಲ್ಲಿ ಇಲ್ಲ ಕೇಳಿ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿಗಳು, 17 ಜನ ಮಂತ್ರಿಗಳು ತಮ್ಮ ವಿರುದ್ಧ ಸುದ್ದಿವಾಹಿನಿಗಳಲ್ಲಿ ಕೆಲ ವಿಷಯಗಳನ್ನು ಪ್ರಸಾರ ಮಾಡಬಾರದು ಎಂದು ಕೋರ್ಟ್ ನಿಂದ ತಡೆಯಾಜ್ಞೆ ತಂದರಲ್ಲ, ಬಾಂಬೆಗೆ ಇಲ್ಲಿಂದ ಶಾಸಕರನ್ನು ಮೋಜು ಮಾಡಲು ಕರೆದುಕೊಂಡು ಹೋದರಲ್ಲ, ಈ ಢೋಂಗಿ ಬಿಜೆಪಿ ಎಲ್ಲರಿಗೂ, ಗೌರವ ಕೊಡುವ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರಲ್ಲ, ಹಾಗಾದರೆ, ನನ್ನ ನೇತೃತ್ವದ ಮೈತ್ರಿ ಸರಕಾರ ತೆಗೆಯಲು ಕೆಲವರನ್ನು ಕರೆದುಕೊಂಡು ಹೋದರಲ್ಲ, ಆ ವ್ಯಕ್ತಿ ಯಾರು? ಎಂದು ಪ್ರಶ್ನಿಸಿದರು ಮಾಜಿ ಮುಖ್ಯಮಂತ್ರಿಗಳು.

ನನ್ನ ಸರಕಾರವನ್ನು ತೆಗೆಯಲು ಎಲ್ಲಾ ರೀತಿಯ ವಾಮಮಾರ್ಗಗಳನ್ನು ಅನುಸರಿಸಲಾಯಿತು. ಈಗ ಮಾತನಾಡಲ್ಲ, ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿಕೊಂಡು ಬಂದ ಮೇಲೆ ವಿವರವಾಗಿ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

See also  ಕೋಲಾರ: ದಲಿತ ಮಹಿಳೆಯರಿಗೆ ಡಿಸಿಎಂ ಸ್ಥಾನ ಮೀಸಲಿಡುತ್ತೇನೆ- ಹೆಚ್.ಡಿ. ಕುಮಾರಸ್ವಾಮಿ

ಸಿಎಂ ದಮ್ಮು ತಾಕತ್ತು ತೋರಿಸಲಿ:

ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಬೇಕು. ಸದಾ ದಮ್ಮು ತಾಕತ್ತು ಬಗ್ಗೆ ಮಾತನಾಡುವ ಇವರು, ಸಾಂಟ್ರೋ ರವಿ ಮತ್ತು ತಮ್ಮ ಸಂಪುಟದ ಸಚಿವರ ನಡುವೆ ಇರುವ ಸಂಬಂಧದ ಬಗ್ಗೆ ತನಿಖೆಗೆ ಆದೇಶ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಅವರು ಸವಾಲು ಹಾಕಿದರು.

ಸಾಂಟ್ರೋ ರವಿ ಎನ್ನುವ ಈ ವ್ಯಕ್ತಿ ಯಾರು? ಈ ಸರಕಾರದಲ್ಲಿ ಯಾರೊಂದಿಗೆ ಈತನ ಸಂಪರ್ಕ ಇದೆ. ಈತನ ಬಗ್ಗೆ ಮಾಹಿತಿಯನ್ನು ರಹಸ್ಯವಾಗಿಡಿ ಎಂದು ಯಾರಿಗೆ ಸೂಚನೆ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು ಕುಮಾರಸ್ವಾಮಿ ಅವರು.

ಈ ವ್ಯಕ್ತಿ ಮೇಲೆ ಎಷ್ಟಿದೆ ಕೇಸ್ ಗಳು ಇವೆ? ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. 1995ರಿಂದಲೂ ಈತನ ಮೇಲೆ ಕೆಸುಗಳಿವೆ. ಮೈಸೂರು, ಬೆಂಗಳೂರುನಲ್ಲಿ ಎಷ್ಟೋ ಕೇಸ್ ಇವೆ? ಕಳೆದ ತಿಂಗಳವರೆಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಇವನಿಗೆ ಕೊಠಡಿ ಕೊಟ್ಟವರು ಯಾರು? ಕೊಠಡಿ ಕೊಡುವಂತೆ ಯಾರು ಶಿಫಾರಸು ಮಾಡಿದ್ದರು? ಇದೆಲ್ಲವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಕುಮಾರಕೃಪದಲ್ಲಿ ಕೂತು ಈತ ಭಾರೀ ವ್ಯವಹಾರ ನಡೆಸಿದ್ದಾನೆ. ಇವನ ಹಿಂದೆ ಅಡಗಿ ಕೂತಿರುವ ಅಸಲಿ ವ್ಯಕ್ತಿ ಯಾರು? ಪೊಲೀಸ್ ಅಧಿಕಾರಿಗೆ ಇವನು ಮೊಬೈಲ್ ಕರೆ ಮಾಡಿ, ನಾಳೆ ಬಂದು ನೋಡು ಅಂತ ಹೇಳುತ್ತಾನೆ. ತನ್ನ ಸರ್ ಎಂದು ಕರೆಯುವಂತೆ ಆ ಪೊಲೀಸ್ ಅಧಿಕಾರಿಗೆ ತಾಕೀತು ಮಾಡುತ್ತಾನೆ. ಇದೆಲ್ಲಾ ದಾಖಲೆ ಇದೆ ಎಂದು ಸ್ಪೋಟಕ ಮಾಹಿತಿಯನ್ನು ಕುಮಾರಸ್ವಾಮಿ ಅವರು ಬಹಿರಂಗ ಮಾಡಿದರು.

ರೀ ಏನು ತಿಳಿದುಕೊಂಡಿದ್ದೀರಾ? ಸ್ವತಃ ಮುಖ್ಯಮಂತ್ರಿಯೇ ನನ್ನನ್ನು ಸರ್ ಅಂತ ಕರೀತಾರೆ. ನೀನು ಸರ್ ಅಂತಿಲ್ಲ ಅಂತ ಆ ಪೊಲೀಸ್ ಅಧಿಕಾರಿಗೆ ಸಾಂಟ್ರೋ ರವಿ ಅನ್ನುವನ್ನು ಧಮ್ಕಿ ಹಾಕುತ್ತಾನೆ ಎಂದರೆ ಈ ಸರಕಾರದ ಮಾನ ಮರ್ಯಾದೆ ಎಲ್ಲಿಗೆ ಬಂದು ನಿಂತಿದೆ ಎನ್ನುವುದನ್ನು ಜನರು ಊಹೆ ಮಾಡಬಹುದು. ಇದು ಸರ್ಕಾರವಾ? ಇವರ ಕರ್ನಾಟಕವನ್ನ ರಕ್ಷಣೆ ಮಾಡುವವರು ಎಂದು ಅವರು ಕಿಡಿ ಕಾರಿದರು.

ಕಳೆದ ಒಂದು ತಿಂಗಳಿಂದ ಮಾತ್ರ ಅವನು ಎಲ್ಲಾ ನಿಲ್ಲಿಸಿದ್ದಾನೆ. ದಲಿತ ಕುಟುಂಬದ ಹೆಣ್ಣು ಮಗಳು ಇವನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇಂಥವನ ಹೆಗಲ ಮೇಲೆ ಕೇಸರಿ ಟವೆಲ್ ಹಾಕಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ನಮ್ಮ ಮೇಲೆ ಟ್ರೋಲ್ ಮಾಡ್ತಾರಲಾ ಬಿಜೆಪಿ ಸೋಷಿಯಲ್ ಮೀಡಿಯಾವರು, ದಮ್ಮು, ತಾಕತ್ತು ಇದ್ದರೆ ಈ ವಿಷಯವನ್ನು ಟ್ರೋಲ್ ಮಾಡಲಿ ಎಂದು ಸವಾಲು ಹಾಕಿದರು.

ಅಧಿಕಾರಿಗಳಿಗೆ ಇವನು ಧಮ್ಕಿ ಹಾಕಿದ್ದಾನೆ. ಆ ಅಧಿಕಾರಿಗಳಿಗೆ ಹೇಳ್ತಾನಂತೆ, ಕುಂಬಳಗೋಡಿಗೆ ಯಾರದ್ದೋ ಕೆಲಸ ಆಗೋಯ್ತು ,50 ಲಕ್ಷಕ್ಕೆ. ನೆಲಮಂಗಲ ಎರಡು ತಿಂಗಳಲ್ಲಿ ಖಾಲಿ ಆಗುತ್ತೆ, ವೈಯ್ಟ್ ಮಾಡಿ ಎಂದು ಹೇಳುತ್ತಾನಂತೆ. ನನಗೆ ಇರುವ ಮಾಹಿತಿ ಪ್ರಕಾರ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

See also  ಬೆಳಗಾವಿ: ಕಾಂಗ್ರೆಸ್ ಈ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ- ಡಿ.ಕೆ. ಶಿವಕುಮಾರ್

ಅರವಿಂದ ಲಿಂಬಾವಳಿ ಆಪ್ತ ಯಾರು?:

ಪ್ರದೀಪ್ ಎಂಬ ವ್ಯಕ್ತಿ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ ಅವರು, ಅರವಿಂದ ಲಿಂಬಾವಳಿ ಹಾಗೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಗೋಪಿ ಸಂಬಂಧ ಏನು? ಎಂದು ಪ್ರಶ್ನಿಸಿದರು.

ನನಗಿರುವ ಮಾಹಿತಿ ಪ್ರಕಾರ ಗೋಪಿ ಮುಖಾಂತರ 50-60 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಮುಖ್ಯವಾಗಿ ಬಿಲ್ಡರುಗಳಿಂದ ಹಣ ಕೀಳಲಾಗಿದೆ. ಈ ಕಾರಣಕ್ಕೆ ಲಿಂಬಾವಳಿ ಸಚಿವ ಸ್ಥಾನ ಕಳೆದುಕೊಂಡರಾ? ಈ ಬಗ್ಗೆ ಜನರಿಗೆ ಗೊತ್ತಾಗಬೇಕು. ಬಿಲ್ದರುಗಳನ್ನು ದರ್ಜೇವಾರು ವಿಭಜಿಸಿ ಹಣ ವಸೂಲಿ ಮಾಡುತ್ತಿದ್ದರಲ್ಲ, ಆ ಹಣವನ್ನು ಸಂಗ್ರಹ ಮಾಡಿದವರು ಯಾರು? ಯಾವ ಅಪಾರ್ಟ್ ಮೆಂಟ್ ನಲ್ಲಿ ಈ ವ್ಯವಹಾರ ನಡೆಯಿತು ಎನ್ನುವುದು ಜನಕ್ಕೆ ಗೊತ್ತಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು