ಬೆಂಗಳೂರು: ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತಾನಾಡಿದ ಡಿ.ಕೆ. ಶಿವಕುಮಾರ್ ಅವರು ‘ಹೊಸ ವರ್ಷ, ಹೊಸ ಪರ್ವ. ಬದಲಾವಣೆ ಹಾಗೂ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಈ ಪವಿತ್ರವಾದ ಗಳಿಗೆಯಲ್ಲಿ ಜನರಿಗಾಗಿ ಪ್ರಜಾಧ್ವನಿ ಯಾತ್ರೆ ವಿಚಾರ ತಿಳಿಸುತ್ತಿದ್ದೇವೆ.
ಜನರ ಭಾವನೆ ತಿಳಿಸಲು ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸತತವಾಗಿ ಪ್ರಯತ್ನಿಸಿದೆ. ಈ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ, ಪ್ರಜೆಗಳ ಭಾವನೆ ಆಗಿದೆ. ನಾವು ಋಣಾತ್ಮಕತೆ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಸಕಾರಾತ್ಮಕತೆ ಬಗ್ಗೆ ಯೋಚಿಸುತ್ತಿದ್ದೇವೆ.
ಕಳೆದ ಮೂರೂವರೆ ವರ್ಷಗಳಿಂದ ಬಿಜೆಪಿ ಸರ್ಕಾರದ ವೈಫಲ್ಯ, ನಾವು ಜನರ ಬದುಕಿಗಾಗಿ ಏನು ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಿಲು ನಾವು ಈ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ.
ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಐತಿಹಾಸಿಕ ಸ್ಥಳ ಬೆಳಗಾವಿಯ ಗಾಂಧಿ ಬಾವಿಯಿಂದ ನಾಳೆ ಈ ಯಾತ್ರೆ ಆರಂಭವಾಗುತ್ತಿದೆ. ಗಾಂಧಿಜಿ ಅವರಿಗೆ ಗೌರವ ಸಲ್ಲಿಸಿ ಯಾತ್ರೆ ಆರಂಭಿಸುತ್ತಿದ್ದೇವೆ. ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನಾಯಕತ್ವ ವಹಿಸಿಕೊಂಡ ಪುಣ್ಯ ಭೂಮಿಯಿಂದ ಯಾತ್ರೆ ಆರಂಭಿಸಲು ತೀರ್ಮಾನಿಸಿದ್ದೇವೆ. ಬ್ರಿಟೀಷರನ್ನು ತೊಲಗಿಸಲು ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡರು. ಈಗ ಅದೇ ಪುಣ್ಯಭೂಮಿಯಿಂದ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಲು ಯಾತ್ರೆ ಆರಂಭಿಸುತ್ತಿದ್ದೇವೆ. ಕರ್ನಾಟಕ ರಾಜ್ಯದ ಬದಲಾವಣೆ ಹಾಗೂ ವಿಜಯಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ.
ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ. ಇಡೀ ಭಾರತಕ್ಕೆ ನಮ್ಮ ಆಡಳಿತ ಮಾದರಿಯಾಗಿತ್ತು. ಇಡೀ ವಿಶ್ವದ ಉದ್ಯಮಿಗಳು ರಾಜ್ಯ ಹಾಗೂ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ಸುಕರಾಗಿದ್ದರು. ಈ ರಾಜ್ಯದ ಮೂಲಕ ದೇಶವನ್ನು ನೋಡುತ್ತಿದ್ದರು. ಆದರೆ ಇಂದು ರಾಜ್ಯಕ್ಕೆ ಭ್ರಷ್ಟಾಚಾರದ ಕಳಂಕ ಬಂದಿದೆ. ಈ ಕಳಂಕವನ್ನು ನಾವು ದೂರ ಮಾಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ವರ್ಗದವರ ಬದುಕು ಹಸನಾಗಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದ ಬಿಜೆಪಿ ರೈತರ ಬದುಕು ಹಸನು ಮಾಡಲಿಲ್ಲ. ಯುವಕರಿಗೆ ಉದ್ಯೋಗ ನೀಡಲಿಲ್ಲ. ಹೆಣದ ಮೇಲೆ ಹಣ ಮಾಡಿದ್ದಾರೆ. ಪ್ರತಿ ಇಲಾಖೆಯಲ್ಲಿ ಎಲ್ಲಾ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ.
ಬಿಜೆಪಿ ಅವರು 104 ಸ್ಥಾನ ಗಳಿಸಿದರು. ಜನಾದೇಶ ಇಲ್ಲದಿದ್ದರೂ ಅವರು ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ಈ ಮೂರುವರೆ ವರ್ಷಗಳ ಅಧಿಕಾರದಲ್ಲಿ ಬಿಜೆಪಿ ತಾನು ಕೊಟ್ಟ 600 ಭರವಸೆಗಳ ಪೈಕಿ 550 ಭರವಸೆಗಳನ್ನು ಈಡೇರಿಸಲಿಲ್ಲ. ನಾವು ಈ ಬಗ್ಗೆ ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ನಿಮ್ಮ ಹತ್ತಿರ ಉತ್ತರ ಇದೆಯಾ ಎಂದು ಕೇಳುತ್ತಿದ್ದೇವೆ. ಬಿಜೆಪಿವರು ಉತ್ತರ ನೀಡಲಾಗುತ್ತಿಲ್ಲ. ರಾಜ್ಯದ 2 ಲಕ್ಷ ಯುವಕರು ತಮಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆಯೂ ಉತ್ತರ ನೀಡಿಲ್ಲ
2 ಲಕ್ಷ ಗುತ್ತಿಗೆದಾರರು 40 % ಕಮಿಷನ್ ಕಿರುಕುಳ ತಾಳಲಾಗುತ್ತಿಲ್ಲ ಎಂದು ಧ್ವನಿ ಎತ್ತಿದ್ದಾರೆ. ಅದಕ್ಕೂ ಈ ಸರಕಾರ ಪರಿಹಾರ ನೀಡಲಿಲ್ಲ. ಎಲ್ಲ ವರ್ಗದ ಜನ ಭಯದಲ್ಲಿ ಬದುಕುತ್ತಿದ್ದಾರೆ.
ರಾಜ್ಯದಲ್ಲಿ 83,190 ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1258 ಕಂಪನಿಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಇದು ರಾಜ್ಯಕ್ಕೆ ಅಪಮಾನಕರ ಸಂಗತಿ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ಮಾಡಿ ಅನ್ಯಾಯ ಎಸಗಲಾಗಿದೆ. ಐಪಿಎಸ್, ಐಎಎಸ್ ಅಧಿಕಾರಿಗಳು ಜೈಲು ಸೇರುವ ಇತಿಹಾಸವನ್ನು ಬಿಜೆಪಿ ಸೃಷ್ಟಿಸಿದೆ.
ರೈತರ ಆದಾಯ ಡಬಲ್ ಮಾಡುತ್ತೇವೆ, ಬೆಂಬಲ ಬೆಲೆ ನೀಡುತ್ತೇವೆ ಎಂದರು. ಆದರೆ ಏನಾಯ್ತು? ರೈತನಿಗೆ ಬೆಂಬಲ ಬೆಲೆ ನಿಗದಿ ಮಾಡಲಿಲ್ಲ. ಕೇಂದ್ರ ಸರ್ಕಾರ ಕರಾಳ ಕಾಯ್ದೆ ರದ್ದು ಮಾಡಿದರೂ ರಾಜ್ಯದಲ್ಲಿ ಮಾಡಲಿಲ್ಲ. ಇದರ ಬಗ್ಗೆ ಪ್ರಶ್ನೆ ಮಾಡಿ ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕುತ್ತಾರೆ. ನಾವು ಈ ಕೇಸ್ ಗಳಿಗೆ ಹೆದರುವುದಿಲ್ಲ.
ಬಿಜೆಪಿಯ ಪಾಪದ ಪುರಾಣವನ್ನು ಜನರ ಮುಂದೆ ಇಡಬೇಕು, ಮುಂದೆ ನಾವು ಮಾಡುವ ಬದಲಾವಣೆ ಜನರಿಗೆ ತಿಳಿಸಲು ಗ್ಯಾರಂಟಿ ಯಾತ್ರೆ ಮಾಡುತ್ತೇವೆ. ನಾವು ನಮ್ಮ ಭರವಸೆಗಳಿಗೆ ಗ್ಯಾರಂಟಿ ನೀಡುತ್ತೇವೆ. ಕಾರಣ, ನಾವು ಬಸವಣ್ಣನವರ ನಾಡಿನಲ್ಲಿದ್ದು ನಾವು ನುಡಿದಂತೆ ನಡೆಯುತ್ತೇವೆ.
ಇಂದು ಈ ಯಾತ್ರೆಯ ಲೋಗೋವನ್ನು ಅನಾವರಣ ಮಾಡುತ್ತೇವೆ. ಬಿಜೆಪಿ ಪಾಪದ ಪುರಾಣವನ್ನು ಜನರ ಮುಂದಿಟ್ಟು, ಜನರ ಹೃದಯ ಗೆದ್ದು ಬದಲಾವಣೆ ತರಲು ಮುಂದಾಗಿದ್ದೇವೆ.
ರಾಜ್ಯದ ಎಲ್ಲ ಜನರು ತಮ್ಮ ಕೈಯನ್ನು ನಮ್ಮ ಕೈ ಜತೆ ಜೋಡಿಸಿ. ಒಗ್ಗಟ್ಟಿನಿಂದ ಬದಲಾವಣೆ ಮಾಡೋಣ ಎಂದು ಕೇಳಿಕೊಳ್ಳುತ್ತೇನೆ. ಆ ಮೂಲಕ ಕೈ ಜೋಡಿಸಿ ಕರುನಾಡಿಗಾಗಿ. ನಿಮ್ಮ ಹಕ್ಕು ನಮ್ಮ ಹೋರಾಟ. ಈ ಬಗ್ಗೆ ವೆಬ್ ಸೈಟ್ ಆರಂಭಿಸಿದ್ದು, prajadhwani.com ಗೆ ಹಾಗೂ ದೂರವಾಣಿ ಸಂಖ್ಯೆ 9537 224 224ಕ್ಕೆ ಕರೆ ಮಾಡಿ ನಿಮ್ಮ ಅಭಿಪ್ರಾಯವನ್ನು ಕಳುಹಿಸಿಕೊಡಿ.’
ಪಕ್ಷದ ಮೊದಲ ಟಿಕೆಟ್ ಪಟ್ಟಿ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ಟಿಕೆಟ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸಂಕ್ರಾಂತಿ ಹಬ್ಬದ ದಿನವೂ ಸಭೆ ಸೇರುತ್ತಿದ್ದೇವೆ. ಚರ್ಚೆ ಮಾಡಿದ ನಂತರ ಟಿಕೆಟ್ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಉತ್ತರಿಸಿದರು.