ಬೆಂಗಳೂರು: ಮಕ್ಕಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ಮೊದಲನೇ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವತಿಯಿಂದ ಆಯೋಜಿಸಿದ್ದ ವಿಜ್ಞಾನ ಮೇಳ-2023ನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗೆ ಸಾವಿರಾರು ಕೋಟಿ ಹಣವನ್ನು ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಿಗೆ ಸರ್ಕಾರ ವಿನಿಯೋಗಿಸುತ್ತಿದೆ. ಈಗಾಗಲೆ ಸಚಿವ ಸಂಪುಟ, ಹಲವಾರು ಸಭೆಗಳಲ್ಲಿ ಹೇಳಿರುವಂತೆ ಮಕ್ಕಳಿಗೆ ಬೇಕಾಗುವಂತಹ ವ್ಯವಸ್ಥೆಗಳನ್ನು ಮಾಡಲು ವಿಶೇಷ ಗಮನ ನೀಡಬೇಕು. ಕಳೆದ ಮೂರು ವರ್ಷದಿಂದ ಮಕ್ಕಳಿಗೆ ವಿಶೇಷ ಅನುದಾನದಿಂದ ಡೆಸ್ಕ್, ಪುಸ್ತಕ ಹಾಗೂ ಇತರ ಸೌಕರ್ಯಗಳನ್ನು ನೀಡಲಾಗುತ್ತಿದ್ದು ಈ ದಿಕ್ಕಿನಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದರು.
ಪರಿಶಿಷ್ಟ ಸಮುದಾಯ, ಪರಿಶಿಷ್ಟ ಪಂಗಡ, ಒಬಿಸಿ ಸಮುದಾಯದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಎಲ್ಲಾ ಸೌಕರ್ಯವಿರುವ ವಸತಿ ಶಾಲೆಯನ್ನು ಪ್ರಾರಂಭ ಮಾಡಲಾಗಿದ್ದು, ಒಂದು ಸಾವಿರಕ್ಕೂ ಹೆಚ್ಚು ಇಂತಹ ಶಾಲೆಗಳು ಇವೆ. ಈ ಶಾಲೆಗಳ ಮೌಲ್ಯಮಾಪನ ಮಾಡಿದಾಗ ಇದರಲ್ಲಿ ಕಲಿಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದಾರೆ. ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರೀತಿಯಲ್ಲಿ ಅಂಕಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಕೀಳರಿಮೆ ಹೋಗಿ ಆತ್ಮವಿಶ್ವಾಸವು ಜಾಗೃತವಾಗಿದೆ. ಹೀಗಾಗಿ ಸಂಸ್ಥೆಗಳನ್ನ ಬಲಪಡಿಸಬೇಕಾಗಿದೆ. ಇನ್ನಷ್ಟು ಗುಣಾತ್ಮಕವಾದ ಶಿಕ್ಷಣ ಕೊಟ್ಟು, ವ್ಯಕ್ತಿವಿಕಸನ ಮಾಡಿಸಬೇಕು. ಈ ದಿಕ್ಕಿನಲ್ಲಿ ಸರ್ಕಾರವು ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ, ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸಲು ವಿಜ್ಞಾನ ಮೇಳವನ್ನು ಆಯೋಜಿಸಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.
ಮಕ್ಕಳು ತಂದೆ, ತಾಯಿಗಳನ್ನು ಬಿಟ್ಟು ವಸತಿ ಶಾಲೆಗೆ ಬಂದಿರುತ್ತಾರೆ. ಅವರಿಗೆ ಉತ್ತಮವಾದ ಶಿಕ್ಷಣ ನೀಡಿ, ಅತ್ಯಂತ ಯಶಸ್ವಿಯಾಗಿ ಪ್ರಜೆಗಳನ್ನಾಗಿ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ. ಒಳ್ಳೆಯ ಭವಿಷ್ಯ ನಿರ್ಮಿಸುವ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ, ಪರಿವರ್ತನೆ ಆಗುತ್ತದೆ. ಯಾವ ಶಾಲೆಗಳಲ್ಲಿ ಏನು ಕೊರತೆ ಎಂಬುದರ ಕುರಿತು ಪಟ್ಟಿಯನ್ನು ನೀಡಿದರೆ ಶಾಲೆಗೆ ಬೇಕಾಗಿರುವ ಅನುದಾನ ಮಂಜೂರು ಮಾಡಲಾಗುವುದು. ಎಲ್ಲಾ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಬೇಕು. ಹತ್ತು ವರ್ಷವಾಗಿರುವ ಹಾಗೂ ಎಲ್ಲಾ ವ್ಯವಸ್ಥೆಗಳಿರುವ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಮಕ್ಕಳಿಗೆ ಪಿ.ಯು.ಸಿ ತರಗತಿಯನ್ನು ಕಡ್ಡಾಯವಾಗಿ ಪ್ರಾರಂಭಿಸಲು ಸಹ ತಿಳಿಸಿದರು.
ಪರಿಶಿಷ್ಟ ಸಮುದಾಯ, ಪರಿಶಿಷ್ಟ ಪಂಗಡಕ್ಕೆ ಜಮೀನು ಖರೀದಿ ಮಾಡಲು ರೂ. 20 ಲಕ್ಷ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಮೀಸಲಾತಿಯನ್ನು ಪರಿಶಿಷ್ಟ ಸಮುದಾಯಕ್ಕೆ ಶೇ.15 ರಿಂದ 17ರಷ್ಟು ಪರಿಶಿಷ್ಟ ಪಂಗಡಕ್ಕೆ 3ರಷ್ಟು ರಿಂದ 7ರಷ್ಟು ಹೆಚ್ಚಿಸಲಾಗಿದೆ. ಸಮುದಾಯಗಳು ಮುಖ್ಯವಾಹಿನಿಗೆ ಸೇರಲು ಬಾಬು ಜಗಜೀವನ್‍ರಾಮ್ ಹೆಸರಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ 100 ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಕಾರ್ಯಕ್ರಮ ರೂಪಿಸಿದೆ. ಸಮಾಜ ಕಲ್ಯಾಣ ಇಲಾಖೆಯು ಉದ್ಯೋಗ, ಶಿಕ್ಷಣ, ಸಬಲೀಕರಣ ಈ ಮೂರನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಯಶಸ್ವಿಯಾಗಿ ಕುಟುಂಬ, ಊರಿಗೆ, ಸಮಾಜಕ್ಕೆ ಹಾಗೂ ಸಮುದಾಯಕ್ಕೆ ಸಹಾಯ ಮಾಡಬೇಕು. ಸಮಾಜ ಪರಿವರ್ತನೆಯಾಗಿ ನಾಡು ಮತ್ತು ದೇಶ ಅತ್ಯಂತ ಶಕ್ತಿಯುತವಾಗಿ ಬೆಳೆಯುತ್ತದೆ. ಸಬ್ ಕೆ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಇದೇ ಪ್ರಧಾನ ಮಂತ್ರಿಗಳ ಧ್ಯೇಯ ಎಂದರು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥ್ತೆಗಳ ಸಂಘದ 830 ಮತ್ತು ಅಲ್ಪಸಂಖ್ಯಾತ ಇಲಾಖಾ ವ್ಯಾಪ್ತಿಯ 326 ಶಾಲೆಗಳು ಸೇರಿದಂತೆ ಒಟ್ಟು 1156 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ವೈಜ್ಞಾನಿಕ ವಿಚಾರವನ್ನು ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ “ವಿಜ್ಞಾನ ಮೇಳ”ವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ, ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕ.ವ.ಶಿ.ಸ.ಸಂಘದ ಉಪಾಧ್ಯಕ್ಷ ಮೇಜರ್ ಪಿ. ಮಣಿವಣ್ಣನ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್ ಕೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕ ಹಾಗೂ ಕ.ವ.ಶಿ.ಸ.ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್. ಕಾಂತರಾಜು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ದೇಶಕ ರಾಘವೇಂದ್ರ. ಟಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳು ಹಿರಿಯ ಗಣ್ಯರು ಉಪಸ್ಥಿತರಿದ್ದರು.