ಬೆಂಗಳೂರು: ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿ ನಗರ ಕ್ಷೇತ್ರದಲ್ಲಿ ತಮ್ಮ ಹಿರಿಯ ಸಹೋದರ, ಬಿಜೆಪಿ ಮುಖಂಡ ಗಾಲಿ ಸೋಮಶೇಖರ್ ರೆಡ್ಡಿ ವಿರುದ್ಧ ತಮ್ಮ ಪತ್ನಿ ಲಕ್ಷ್ಮಿ ಅರುಣಾ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಸೋಮಶೇಖರ್ ಕ್ಷೇತ್ರದ ಹಾಲಿ ಬಿಜೆಪಿ ಶಾಸಕರಾಗಲಿದ್ದಾರೆ. ಇತ್ತೀಚೆಗೆ ಬಿಜೆಪಿ ತೊರೆದಿರುವ ಜನಾರ್ದನ ರೆಡ್ಡಿ ಹೊಸದಾಗಿ ಆರಂಭಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಲಕ್ಷ್ಮಿ ಅರುಣಾ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ.
ಮೂಲಗಳ ಪ್ರಕಾರ, ಜನಾರ್ದನ ರೆಡ್ಡಿ ತಮ್ಮ ಇಬ್ಬರು ಸಹೋದರರಾದ ಕರುಣಾಕರ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಅವರನ್ನು ತಮ್ಮ ಪಕ್ಷಕ್ಕೆ ಸೇರಲು ಬಯಸಿದ್ದರು. ಆದರೆ ಅವರು ಸಿದ್ಧರಿಲ್ಲದ ಕಾರಣ ಈಗ ಅವರು ಪತ್ನಿಯನ್ನು ಕಣಕ್ಕಿಳಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಬಿಜೆಪಿಯ ಅತೃಪ್ತ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೆಳೆಯುತ್ತಿರುವ ರೆಡ್ಡಿ ಪಕ್ಷ ಆಡಳಿತಾರೂಢ ಬಿಜೆಪಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.