ಬೆಂಗಳೂರು: ನೃತ್ಯಗಂಗಾ ಪ್ರದರ್ಶಕ ಕಲೆಗಳ ಕೇಂದ್ರದ ಸಂಸ್ಥಾಪಕಿ ವಿದುಷಿ ರೂಪಶ್ರೀ ಮಧುಸೂದನ್ ಅವರ ಶಿಷ್ಯೆ, ಬಹುಮುಖ ಪ್ರತಿಭಾವಂತೆ ಶ್ರೇಯಾ ಕಷ್ಯಪ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಫೆ.11ರಂದು ಬೆಂಗಳೂರಿನ ಜಯನಗರದ ಜೆಎಸ್ಸೆಸ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಅಂದು ಸಂಜೆ 5ಕ್ಕೆ ಆರಂಭವಾಗುವ ಈ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಶಾರದಾ ನೃತ್ಯಾಲಯದ ನಿರ್ದೇಶಕಿ ವಿದುಷಿ ಬಿ.ಎಸ್. ಇಂದು ನಾಡಿಗ್, ತುಮಕೂರಿನ ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ನಿರ್ದೇಶಕ ವಿದ್ವಾನ್ ಡಾ.ಟಿ.ಎಸ್. ಸಾಗರ್ ಹಾಗೂ ಖ್ಯಾತ ಭರತನಾಟ್ಯ ಕಲಾವಿದ ಚೆನ್ನೈನ ವಿದ್ವಾನ್ ಎಸ್. ವಿಜಯಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಂಗಪ್ರವೇಶ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ದೀಪ್ತಿ ಶ್ರೀನಾಥ್ ಅವರ ಗಾಯನ, ಗುರು ರೂಪಶ್ರೀ ಮಧುಸೂದನ್ ಅವರ ನಟ್ಟುವಾಂಗ, ಶ್ರೀಹರಿ ರಂಗಸ್ವಾಮಿ (ಮೃದಂಗಂ), ಕಾರ್ತಿಕ್ ಸಾಥವಳ್ಳಿ (ಕೊಳಲು), ಮತ್ತೂರು ಶ್ರೀನಿಧಿ (ವೈಲಿನ್), ಗೋಪಾಲ ವೆಂಕಟರಮಣ (ವೀಣಾ), ಕಾರ್ತಿಕ್ ದಾತಾರ್ ಅವರು ರಿದಂ ಪ್ಯಾಡ್ ಸಾಥ್ ನೀಡಲಿದ್ದಾರೆ.
ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಈಗಾಗಲೇ ಹಲವು ಭರತನಾಟ್ಯ ಕಾರ್ಯಕ್ರಮ ನೀಡಿ ಪ್ರಬುದ್ಧ ಕಲಾವಿದೆ ಎನಿಸಿರುವ ಶ್ರೇಯಾ ಕಷ್ಯಪ್ ಬೆಂಗಳೂರಿನ ರಮ್ಯಾ- ರವಿಕುಮಾರ್ ದಂಪತಿಯ ಹೆಮ್ಮೆಯ ಪುತ್ರಿ. ಶ್ರೇಯಾ ಭರತನಾಟ್ಯ ಕಲಾವಿದೆಯಷ್ಟೇ ಅಲ್ಲ, ಶಾಸ್ತ್ರೀಯ ಸಂಗೀತಗಾರ್ತಿ. ಈಜು, ಬಾಸ್ಕೆಟ್‌ಬಾಲ್, ಥ್ರೋಬಾಲ್‌ನಲ್ಲೂ ಪರಿಣಿತಿ ಹೊಂದಿದ್ದಾರೆ. ಸ್ಕೆಚಿಂಗ್, ಪೇಂಟಿಂಗ್, ರಂಗೋಲಿ, ಫೋಟೋಗ್ರಫಿಯಲ್ಲೂ ಸಿದ್ಧಹಸ್ತೆ. ಫ್ರೆಂಚ್, ಕೊರಿಯನ್ ಭಾಷೆಯಲ್ಲೂ ಮಾತನಾಡಬಲ್ಲ ಪ್ರತಿಭಾವಂತೆ. ಪ್ರಸ್ತುತ ಬೆಂಗಳೂರಿನ ಆರ್.ವಿ. ವಿಶ್ವವಿದ್ಯಾಲಯದ ಬಿಬಿಎ ವಿದ್ಯಾರ್ಥಿನಿಯಾಗಿದ್ದಾರೆ.