ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಕಿವಿಗೆ ಹೂವು ಇರಿಸಿ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವುದು ಕಂಡುಬಂತು. ಈ ಮೂಲಕ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕಿವಿಯ ಹಿಂದೆ ಹೂವುಗಳನ್ನು ಧರಿಸುವುದು ದ್ರೋಹ ಮತ್ತು ಮೂರ್ಖತನವನ್ನು ಸಂಕೇತಿಸುತ್ತದೆ. ಬಜೆಟ್ ಭಾಷಣದ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿವಿಯಲ್ಲಿದ್ದ ಹೂವನ್ನು ನೋಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಅವರು, ಇಷ್ಟು ದಿನ ಬೇರೆಯವರ ಕಿವಿಗೆ ಹೂ ಹಾಕಲು (ಜನರನ್ನು ಮೂರ್ಖರನ್ನಾಗಿಸುವ) ಯತ್ನ ನಡೆಸುತ್ತಿದ್ದರು. ಇದೀಗ ಜನರು ಅವರ ಕಿವಿ ಮೇಲೆ ಹೂ ಇಟ್ಟಿದ್ದಾರೆ, ಇದು ಮುಂಬರುವ ಚುನಾವಣೆವರೆಗೂ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು. ಈ ವೇಳೆ ಬಿಜೆಪಿ ಶಾಸಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರಲ್ಲದೇ, ನಗೆಗಡಲಲ್ಲಿ ತೇಲಿದರು.
ಜನರ ಕಿವಿ ಮೇಲೆ ಹೂವು ಎಂದ ಸಿದ್ದರಾಮಯ್ಯ: ಬಜೆಟ್ ಮೂಲಕ ಸಿಎಂ ಬೊಮ್ಮಾಯಿ ರಾಜ್ಯದ ಏಳು ಕೋಟಿ ಜನರ ಕಿವಿ ಮೇಲೆ ಹೂ ಇಡುವ ಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಹೇಳಿಕೆಯನ್ನು ಬಿಜೆಪಿ ಶಾಸಕರು ವಿರೋಧಿಸಿದ್ದು ಗದ್ದಲಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯಗೆ ಮಾತನಾಡಲು ಅವಕಾಶ ನೀಡಿದ್ದು ಹೇಗೆ ಎಂದು ಬಿಜೆಪಿಗರು ಪ್ರಶ್ನಿಸಿದರು. ಬಜೆಟ್ ಮಂಡಿಸಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಬಿಜೆಪಿಯವರು ಸುಳ್ಳಿನ ಕಂತೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬಜೆಟ್ ಮಂಡಿಸಲು ಸಿಎಂ ಬೊಮ್ಮಾಯಿ ಅವರಿಗೆ ಅವಕಾಶ ನೀಡುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ನಂತರ ಬಜೆಟ್ ಮಂಡನೆ ಮುಂದುವರಿಯಿತು.
ಈ ಬಳಿಕ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ “ಕಿವಿಮೇಲೆ ಹೂವʼʼ ಹ್ಯಾಶ್‌ಟ್ಯಾಗ್‌ನಡಿ ಕಾಂಗ್ರೆಸ್ ಅಭಿಯಾನ ಹಮ್ಮಿಕೊಂಡಿರುವುದು ಗಮನಸೆಳೆದಿದೆ.