News Kannada
Sunday, March 26 2023

ಬೆಂಗಳೂರು ನಗರ

ಬೆಂಗಳೂರು: ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್‌- ಸಿದ್ದರಾಮಯ್ಯ

Siddu's 75th birthday will be celebrated in Davanagere on August 3.
Photo Credit : News Kannada

ಬೆಂಗಳೂರು: ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್‌. ಇನ್ನು 2 ತಿಂಗಳಲ್ಲಿ ಚುನಾವಣೆ ಇರುವುದರಿಂದ ಇದನ್ನು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್‌ ಎನ್ನಬಹುದು. ಬಜೆಟ್‌ ಗಾತ್ರ 3,09,182 ಕೋಟಿ ಇದೆ. ಕಳೆದ ಬಜೆಟ್‌ ನಲ್ಲಿ ಏನೇನು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು, ಅದರಲ್ಲಿ 56 ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಲ್ಲ. 2018ರಲ್ಲಿ ಬಿಜೆಪಿ ಪಕ್ಷ ರಾಜ್ಯದ ಜನರಿಗೆ ಪ್ರಣಾಳಿಕೆ ಮೂಲಕ 600 ಭರವಸೆಗಳನ್ನು ನೀಡಿತ್ತು, ಇದರಲ್ಲಿ 90% ಭರವಸೆಗಳನ್ನು ಈಡೇರಿಸಿಲ್ಲ. ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ 5 ವರ್ಷದಲ್ಲಿ ನಮ್ಮ ಸರ್ಕಾರದ ಸಾಧನೆಗಳೇನು ಮತ್ತು ಮುಂದೆ ಅಧಿಕಾರಕ್ಕೆ ಬಂದಾಗ ಏನೇನು ಮಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೆವು, ಆದರೆ ಈ ಬಜೆಟ್‌ ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಮಾಹಿತಿಯೇ ಇಲ್ಲ. ಕಳೆದ ಬಜೆಟ್‌ ನಲ್ಲಿ 206 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು, ಅದರಲ್ಲಿ 56 ಕಾರ್ಯಕ್ರಮಗಳನ್ನು ಜಾರಿ ಮಾಡೇ ಇಲ್ಲ. ಇದಕ್ಕೆ ಸರ್ವಜ್ಞನ ವಚನ, “ಆಡದಲೆ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ತಾನಾಡಿಯೂ ಮಾಡದವನು ಅಧಮನು” ಎಂಬ ವಚನ ಬಿಜೆಪಿ ಸರ್ಕಾರಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತದೆ.

ನಮ್ಮ ಸರ್ಕಾರದ ಅವಧಿಯಲ್ಲಿ 2 ಲಕ್ಷದ 2 ಸಾವಿರ ಕೋಟಿ ಬಜೆಟ್‌ ಗಾತ್ರ ಇತ್ತು, ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆಗೆ ನಾವು 30,000 ಕೋಟಿ ಹಣ ನೀಡಿದ್ದೆವು, ಆದರೆ ಈಗಿನ ಬಜೆಟ್‌ ಗಾತ್ರ 3 ಲಕ್ಷದ 9ಸಾವಿರ ಕೋಟಿ ಇದ್ದರೂ ಈ ಯೋಜನೆಗೆ ನೀಡಿರುವ ಅನುದಾನ 30,000 ಕೋಟಿಯೇ ಇದೆ. ಹಿಂದಿನ ವರ್ಷ ಕರ್ಚಾಗಿರುವ ಹಣವನ್ನೂ ಹೇಳಿಲ್ಲ, ನನ್ನ ಪ್ರಕಾರ ಈ ಯೋಜನೆಗೆ ನೀಡುವ ಅನುದಾನ ಕನಿಷ್ಠ 50,000 ಕೋಟಿ ರೂ. ಆಗಬೇಕಿತ್ತು. ಇದು ದಲಿತರಿಗೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮಾಡಿರುವ ದೊಡ್ಡ ದ್ರೋಹ.

ಈ ವರ್ಷದ ಅಂತ್ಯಕ್ಕೆ 5,64,896 ಕೋಟಿ ರೂ. ಸಾಲ ಆಗುತ್ತದೆ ಎಂದು ಹೇಳಿದ್ದಾರೆ. ನಾವು ಅಧಿಕಾರದಿಂದ ಇಳಿದಾಗ ರಾಜ್ಯದ ಮೇಲೆ 2 ಲಕ್ಷದ 42 ಸಾವಿರ ಕೋಟಿ ರೂ. ಇತ್ತು, ಅಂದರೆ ಈಗ 3 ಲಕ್ಷದ 22 ಸಾವಿರ ಕೋಟಿ ಸಾಲ ಹೆಚ್ಚಾಗಿದೆ. 2018-19ರಲ್ಲಿ ಸಮ್ಮಿಶ್ರ ಸರ್ಕಾರ ಮಾಡಿದ್ದ ಸಾಲ 41,914 ಕೋಟಿ ರೂ. ಇದನ್ನು ಬಿಟ್ಟರೆ ಉಳಿದ ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ 2,54,760 ಕೋಟಿ ರೂ. ಸಾಲ ಮಾಡಿದೆ. ಸ್ವಾತಂತ್ರ್ಯ ಬಂದ ನಂತರದಿಂದ ನಮ್ಮ ಸರ್ಕಾರದ ಕೊನೆಯವರೆಗೆ ಇದ್ದ ಸಾಲ 2 ಲಕ್ಷದ 42 ಸಾವಿರ ಕೋಟಿ, ನಮ್ಮ 5 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಒಟ್ಟು ಸಾಲ 1,16,512 ಕೋಟಿ ರೂ. ಸಾಲ ಎಲ್ಲಾ ಕಾಲದಲ್ಲೂ ಎಲ್ಲ ಸರ್ಕಾರಗಳು ಮಾಡುತ್ತವೆ, ಆದರೆ ಬರೀ ನಾಲ್ಕೇ ವರ್ಷದಲ್ಲಿ 3,22,000 ಕೋಟಿ ಸಾಲ ಮಾಡಿದ್ದಾರೆ. ಸಾಲ ಹೆಚ್ಚಾಗಿರುವುದರಿಂದ ಕೇವಲ ಬಡ್ಡಿ ರೂಪದಲ್ಲಿ ನಾವು 34,000 ಕೋಟಿ ರೂ. ಹಣ ಪಾವತಿ ಮಾಡಬೇಕಾಗುತ್ತದೆ. ಈ ಸರ್ಕಾರ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ, ಕೊಟ್ಟ ಭರವಸೆಗಳನ್ನು ಕೂಡ ಈಡೇರಿಸಿಲ್ಲ, ಬಡ್ಡಿ ರೂಪದಲ್ಲಿ ಹೆಚ್ಚು ಪಾವತಿ ಮಾಡಬೇಕಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೂ ಕಡಿಮೆಯಾಗುತ್ತದೆ. ಮುಂದಿನ ವರ್ಷಕ್ಕೆ 77,750 ಕೋಟಿ ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ಸಾಲದ ಪ್ರಮಾಣ 95% ಹೆಚ್ಚಾಗಿದೆ. ಹೀಗಾದಾಗ ಬಜೆಟ್‌ ಅಭಿವೃದ್ಧಿಪರವಾಗಿರಲು ಹೇಗೆ ಸಾಧ್ಯ?

ಮಕ್ಕಳು ಸಾಕುವ ಜವಾಬ್ದಾರಿ ಇಲ್ಲದೆ ಹೋದರೆ ಎಷ್ಟು ಮಕ್ಕಳಾದ್ರೂ ಆಗಲಿ ಎಂದು ಸುಮ್ಮನಿರಬಹುದು, ಅದೇ ರೀತಿ ಅನುಷ್ಠಾನ ಮಾಡುವ ಜವಾಬ್ದಾರಿ ಇಲ್ಲದೆ ಹೋದರೆ ಎಷ್ಟು ಭರವಸೆಗಳನ್ನು ಬೇಕಾದರೂ ಕೊಡಬಹುದು ಎಂಬಂತಿದೆ ಈ ಬಜೆಟ್. ಇಲ್ಲಿ ಘೋಷಣೆ ಮಾಡಿರುವ ಯಾವ ಯೋಜನೆಯನ್ನು ಕೂಡ ಜಾರಿ ಮಾಡುವ ಬದ್ಧತೆ ಸರ್ಕಾರಕ್ಕಿಲ್ಲ. ಚುನಾಯಿತ ಸರ್ಕಾರಗಳು ಪಾರದರ್ಶಕವಾಗಿ ಮತ್ತು ಉತ್ತರದಾಯಿಯಾಗಿರಬೇಕು. ಮತದಾರರಿಂದ ಯಾವುದನ್ನೂ ಮುಚ್ಚಿಡಲು ಹೋಗಬಾರದು.

See also  ರಾಮಮಂದಿರ ದೇಣಿಗೆ ಸಂಗ್ರಹ ವಾಹನದ ಮೇಲೆ ಕಲ್ಲು ತೂರಾಟ

ಕರ್ನಾಟಕದಿಂದ ವಿವಿಧ ತೆರಿಗೆಗಳ ರೂಪದಲ್ಲಿ 4 ಲಕ್ಷದ 75 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಕೇಂದ್ರ ತೆರಿಗೆಯಲ್ಲಿ ನಮ್ಮ ಪಾಲು 34,596 ಕೋಟಿ ರೂ. ಬರಲಿದೆ ಎಂದು ಅಂದಾಜು ಮಾಡಿದ್ದಾರೆ. ಮುಂದಿನ ವರ್ಷ 37,250 ಕೋಟಿ ರೂ. ಬರಲಿದೆ ಎಂದಿದ್ದಾರೆ. 37,000 ಕೋಟಿ ಕೇಂದ್ರ ಸರ್ಕಾರದ ಅನುದಾನಗಳು, ಬಜೆಟ್‌ ಎಸ್ಟಿಮೇಟ್‌ ನಲ್ಲಿ ಈ ವರ್ಷದಲ್ಲಿ 17,281 ಕೋಟಿ ಇತ್ತು, ಪರಿಷ್ಕೃತ ಅಂದಾಜಿನಲ್ಲಿ 12,391 ಕೋಟಿ ರೂ. ಗೆ ಇಳಿದಿತ್ತು. ಅಂದರೆ ಕೇಂದ್ರ ಸರ್ಕಾರದ ಆರ್ಥಿಕ ನೆರವು 5,000 ಕೋಟಿ ಕಡಿಮೆಯಾಗಿದೆ ಎಂದು ಸರ್ಕಾರವೇ ಅಂದಾಜು ಮಾಡಿದೆ. ಮುಂದಿನ ವರ್ಷ 13,005 ಕೋಟಿ ಕೇಂದ್ರದ ಸಹಾಯಧನ ಬರಲಿದೆ ಎಂದು ಹೇಳಿದ್ದಾರೆ. ಇವೆರಡು ಒಟ್ಟು ಸೇರಿಸಿದ್ರೆ 50,257 ಕೋಟಿ ಆಗುತ್ತದೆ, ನಮ್ಮಿಂದ ವಸೂಲಾಗುವ ತೆರಿಗೆ 4 ಲಕ್ಷದ 75 ಸಾವಿರ ಕೋಟಿ. ಇದು ಕೇಂದ್ರ ಸರ್ಕಾರದಿಂದ ರಾಜ್ಯದ ಜನರಿಗೆ ಆಗಿರುವ ದೊಡ್ಡ ಅನ್ಯಾಯ.

ಸರ್ಕಾರಿ ನೌಕಕರಿಗೆ 7ನೇ ವೇತನ ಆಯೋಗ ರಚನೆ ಮಾಡಿರುವುದರಿಂದ ಸಂಬಳ ಜಾಸ್ತಿಯಾಗುತ್ತದೆ ಎಂಬ ನಿರೀಕ್ಷೆಯಿತ್ತು. ನಮ್ಮ ಸರ್ಕಾರ ಇದ್ದಾಗ 6ನೇ ವೇತನ ಆಯೋಗ ಜಾರಿ ಮಾಡಿ 10,600 ಕೋಟಿ ಅನುದಾನ ನೀಡಿದ್ದೆ. ಈ ಬಜೆಟ್‌ ನಲ್ಲಿ 7ನೇ ವೇತನ ಆಯೋಗದ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ.

ಇಂದು ಇಷ್ಟೊಂದು ಸಾಲ ಆಗಲು ಕೇಂದ್ರ ಸರ್ಕಾರದಿಂದ ಬರುತ್ತಿರುವ ಅನುದಾನ ಕಡಿಮೆಯಾಗುತ್ತಿರುವುದು ಕಾರಣ. ನಮ್ಮ ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಕೇಂದ್ರದ ಪಾಲು ಕಡಿಮೆಯಾದದ್ದು ಹಾಗೂ ಕೇಂದ್ರದಿಂದ ಬರುವ ಆರ್ಥಿಕ ನೆರವಿನ ಪ್ರಮಾಣ ಇಳಿಕೆಯಾಗಿರುವುದರಿಂದ ಸುಮಾರು 80,000 ಕೋಟಿಯಷ್ಟು ಸಾಲ ಮಾಡಬೇಕಾಗಿದೆ.

2.40 ಲಕ್ಷ ಕೋಟಿ ನೇರ ತೆರಿಗೆ ರೂಪದಲ್ಲಿ, ಜಿಎಸ್‌ಟಿ ರೂಪದಲ್ಲಿ 1.30 ಲಕ್ಷ ಕೋಟಿ, ಸೆಸ್‌ ಗಳ ರೂಪದಲ್ಲಿ 30,000 ಕೋಟಿ, ಹೀಗೆ ಒಟ್ಟು 4 ಲಕ್ಷದ 72 ಸಾವಿರ ಕೋಟಿ ನಮ್ಮ ರಾಜ್ಯದಿಂದ ವಿವಿಧ ರೂಪದ ತೆರಿಗೆಯ ಮೂಲಕ ಹಣ ಸಂಗ್ರಹವಾಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ವಾಪಾಸು ಕಡಿಮೆ ಅನುದಾನ ಬಂದರೂ ಪ್ರತಿ ಮಾತಿಗೂ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

52,000 ಲಂಬಾಣಿ ಜನರಿಗೆ ಮೋದಿ ಅವರು ಹಕ್ಕು ಪತ್ರ ನೀಡಿದ್ದಾರೆ ಎಂದು ಧನ್ಯವಾದ ಹೇಳಿದ್ದಾರೆ. ತಾಂಡಗಳನ್ನು, ಹಟ್ಟಿಗಳನ್ನು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಕಾನೂನು ಜಾರಿಗೆ ತಂದವರು ನಾವು. ನಮ್ಮ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಿ ಉಳುವವನೆ ಭೂಮಿಯ ಒಡೆಯ ಕಾಯ್ದೆಯಂತೆ ವಾಸಿಸುವವನೆ ಮನೆಯೊಡೆಯ ಎಂಬ ಕ್ರಾಂತಿಕಾರಿ ಕಾನೂನನ್ನು ಜಾರಿ ಮಾಡಿದ್ದೆವು. ಇದನ್ನು ಬಿಜೆಪಿ ತನ್ನ ಸಾಧನೆ ಎಂದು ನರೇಂದ್ರ ಮೋದಿ ಅವರಿಂದ ಹಕ್ಕುಪತ್ರ ಕೊಡಿಸಿ, ಅವರಿಗೆ ಧನ್ಯವಾದ ತಿಳಿಸಿದೆ. ನಮ್ಮ ಸಾಧನೆಯನ್ನು ಬಿಜೆಪಿ ಹೈಜಾಕ್‌ ಮಾಡಿದೆ. ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ಅವರಿಂದ ವರದಿ ತರಿಸಿಕೊಂಡು, ಆ ವರದಿ ಆಧರಿಸಿ ಕಾನೂನು ತಿದ್ದುಪಡಿ ಮಾಡಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿದ್ದು ನಾವು. ಒಂದು ರೆವಿನ್ಯೂ ಸೆಲ್‌ ಮಾಡಿ, ಹೀರಾನಾಯ್ಕ್‌ ಅವರನ್ನು ಅದರ ಸಂಯೋಜಕರಾಗಿ ಮಾಡಿ ಅವರ ಮೂಲಕ ವರದಿ ಪಡೆದು ನಾವು ಈ ತಿದ್ದುಪಡಿ ತಂದಿದ್ದು. ಇದು ನಮ್ಮ ಸಾಧನೆ, ಬಿಜೆಪಿ ಸಾಧನೆ ಅಲ್ಲ. ಹಕ್ಕುಪತ್ರವನ್ನು ಕೂಡ ತಯಾರು ಮಾಡಿದ್ದು ನಮ್ಮ ಸರ್ಕಾರ. ಇದು ಒಂದು ಉದಾಹರಣೆ ಅಷ್ಟೆ, ಇಂಥಾ ನಾವು ಮಾಡಿದ ಹಲವು ಕೆಲಸಗಳನ್ನು ತಮ್ಮ ಸಾಧನೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

See also  ರಾಜ್ಯದ 20 ಐಎಎಸ್ ಅಧಿಕಾರಿಗಳ ವರ್ಗಾವಣೆ

ಈ ಬಜೆಟ್‌ ನಲ್ಲಿ ಬದ್ಧ ವೆಚ್ಚಗಳು ಎಷ್ಟಾಗಿದೆ ಎಂದು ಹೇಳಿಲ್ಲ, ಕಳೆದ ಬಾರಿ ಅದು 92% ಇತ್ತು. ಈ ಬದ್ಧ ವೆಚ್ಚ ಜಾಸ್ತಿಯಾಗುತ್ತಾ ಹೋದರೆ ಸಾಲವನ್ನು ಹೆಚ್ಚು ಮಾಡಬೇಕಾಗುತ್ತದೆ. ಬದ್ಧ ವೆಚ್ಚ ಕಡಿಮೆಯಾದರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೆಚ್ಚು ಸಿಗುತ್ತದೆ. ನಮ್ಮ ಸರಕಾರದ ಅವಧಿಯಲ್ಲಿ ಬದ್ಧ ವೆಚ್ಚ 72 ರಿಂದ 73% ಇತ್ತು. ಬದ್ಧ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಯಾವ ಪ್ರಯತ್ನವನ್ನು ಮಾಡಿಲ್ಲ. ಅನಗತ್ಯ ಖರ್ಚುಗಳನ್ನು ಕೂಡ ಕಡಿಮೆ ಮಾಡಿಲ್ಲ.

ಮಜ್ಜಿಗೆ, ಮೊಸರು, ಅಕ್ಕಿ, ಗೋದಿ, ಮಂಡಕ್ಕಿ, ಪೆನ್ನು, ಪೆನ್ಸಿಲ್‌ ಮೇಲೆ ತೆರಿಗೆ ಹಾಕಿರುವುದರಿಂದ ತೆರಿಗೆ ಸಂಗ್ರಹ ಜಾಸ್ತಿಯಾಗಿದೆ. ಈ ಮೊದಲು ಇವುಗಳ ಮೇಲೆ ಶೂನ್ಯ ತೆರಿಗೆ ಇತ್ತು, ಇದನ್ನು 5 ರಿಂದ 18% ವರೆಗೆ ಏರಿಸಿದ್ದಾರೆ. ಜನರ ಮೇಲೆ ತೆರಿಗೆ ಹೆಚ್ಚು ಮಾಡಿರುವುದರಿಂದ ಸಂಗ್ರಹವಾದ ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ, ಅದರಿಂದ ನಮಗೇನು ಲಾಭ?

ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ರಾಜ್ಯ ಸಾಲದ ಸುಳಿಗೆ ಸಿಲುಕಿದೆ, ಕಳೆದ ವರ್ಷ ಅಸಲು 14,000 ಕೋಟಿ ಸಂದಾಯ ಮಾಡಬೇಕಿತ್ತು, ಬಡ್ಡಿ ರೂಪದಲ್ಲಿ 34,000 ಕೋಟಿ ಕಟ್ಟಬೇಕಿರುವುದರಿಂದ ಸುಮಾರು ಅಸಲು, ಬಡ್ಡಿ ರೂಪದಲ್ಲಿ 48,000 ಕೋಟಿ ಸಾಲ ಮರುಪಾವತಿಗೆ ಹೋಗುತ್ತದೆ. ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ.

ಈ ಬಜೆಟ್‌ ನಿಂದ ಜನರ ಸಮಸ್ಯೆಗಳು ಬಗೆಹರಿಯಲ್ಲ, ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ಎಲ್ಲಿಯೂ ಆದಾಯ ಹೆಚ್ಚು ಮಾಡುವ ಪ್ರಯತ್ನ ಮಾಡಿಲ್ಲ. ಈ ವರ್ಷ ಕೇಂದ್ರ ಸರ್ಕಾರ ಗೊಬ್ಬರದ ಮೇಲಿನ ಸಬ್ಸಿಡಿಯನ್ನು 50,000 ಕೋಟಿ ಕಡಿಮೆ ಮಾಡಿದೆ, ಇದರಿಂದ ರಸಗೊಬ್ಬರದ ಬೆಲೆ ಜಾಸ್ತಿಯಾಗುತ್ತದೆ. ಇದರಿಂದ ರೈತರು ವ್ಯವಸಾಯಕ್ಕೆ ಹಾಕುವ ಬಂಡವಾಳ ಹೆಚ್ಚಾಗುತ್ತದೆ, ಲಾಭ ಕಡಿಮೆಯಾಗುತ್ತದೆ.

5 ವರ್ಷದಲ್ಲಿ 6% ಬೆಲೆಯೇರಿಕೆಯಿದೆ. ಬೆಲೆಯೇರಿಕೆ ನಿಯಂತ್ರಣ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಇದನ್ನು ಲೆಕ್ಕ ಹಾಕಿದರೆ ತಲಾ ಆದಾಯ ಕಡಿಮೆಯಾಗುತ್ತದೆ. ತಲಾ ಆದಾಯದ ಏರಿಕೆ ಬೆಲೆಯೇರಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಇಲ್ಲ.

ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಉಪಯೋಗವಾಗಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ, ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಬಂಡವಾಳಶಾಹಿಗಳ 12 ಲಕ್ಷ ಕೋಟಿಗೂ ಅಧಿಕ ಸಾಲ ಮನ್ನಾ ಮಾಡಿದ್ದಾರೆ. ಯಡಿಯೂರಪ್ಪ ಅವರು ಹಿಂದೊಮ್ಮೆ ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ನೋಟ್‌ ಪ್ರಿಂಟ್‌ ಮಾಡುವ ಮೆಷಿನ್‌ ಇಲ್ಲ ಎಂದಿದ್ದರು.

ಇದು ಜನಸಾಮಾನ್ಯರ, ರೈತರ, ಬಡವರ ವಿರೋಧಿ ಬಜೆಟ್. ಈ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ.

ಮಾರ್ಚ್‌ ತಿಂಗಳಿನಲ್ಲಿ ಆರ್ಥಿಕ ಇಲಾಖೆಯವರು ಹಣ ಖರ್ಚು ಮಾಡಲು ಒಪ್ಪಿಗೆಯನ್ನೇ ನೀಡಲ್ಲ. ಪ್ರಸಕ್ತ ವರ್ಷ ಘೋಷಣೆ ಮಾಡಿದ ಅನುದಾನದಲ್ಲಿ ಖರ್ಚಾಗಿರುವ ಹಣ 56% ಮಾತ್ರ. ಇನ್ನುಳಿದ 15 ದಿನದಲ್ಲಿ 44% ಖರ್ಚು ಮಾಡಲು ಆಗುತ್ತಾ?

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು