ರಾಮನಗರ: ರಾಜ್ಯ ಬಜೆಟ್‌ನಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಿಸಲು ಘೋಷಣೆ ಮಾಡಿರುವುದನ್ನು ಸ್ವಾಗತಿಸಿ ಬಿಡದಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಬಿಡದಿಯ ಬಿಜಿಎಸ್ ವೃತ್ತದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯೂ ಆದ ಬಿಜೆಪಿ ಮುಖಂಡ ಕೆ.ಪ್ರಸಾದ್‌ಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಶ್ರೀರಾಮನಿಗೆ ಹಾಗೂ ರಾಜ್ಯ ಸರಕಾರದ ಪರ ಜೈಕಾರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮುಖಂಡ ಕೆ.ಪ್ರಸಾದ್‌ಗೌಡ ಮಾತನಾಡಿ, ರಾಮನಗರದ ಪುರಾಣ ಪ್ರಸಿದ್ದ ರಾಮದೇವರಬೆಟ್ಟದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದಾಗಿ ರಾಜ್ಯ ಬಿಜೆಪಿ ಸರಕಾರ ಘೋಷಿಸಿರುವುದು ಸಂತಸದ ವಿಚಾರ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಈಗಾಗಲೇ ಪುಣ್ಯ ಕ್ಷೇತ್ರವೆಂದು ಗುರುತಿಸಿಕೊಂಡಿರುವ ಶ್ರೀರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಆಗುವುದರಿಂದ ಅದು ದಕ್ಷಿಣ ಭಾರತದ ಅಯೋಧ್ಯೆಯಾಗಿ ಮಾರ್ಪಾಟಾಗಲಿದೆ ಜತೆಗೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ರಾಮಜನ್ಮಭೂಮಿ ಅಯೋಧ್ಯೆಗೆ ಶ್ರೀರಾಮನ ಹಾಗೂ ಹನುಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಬರುತ್ತಾರೆ. ಅದೇ ರೀತಿಯಲ್ಲಿ ಹಿಂದೆ ಶ್ರೀರಾಮ ಮತ್ತು ಸೀತಾದೇವಿ ನೆಲೆಸಿದ್ದ ಪುಣ್ಯಭೂಮಿಯೆಂದು ಹೆಸರಾಗಿರುವ ರಾಮದೇವರಬೆಟ್ಟವೂ ಕೂಡ ಎರಡನೇ ಅಯೋಧ್ಯೆಯಾಗಲಿದೆ. ದೇಶದ ನಾನಾ ಮೂಲೆಗಳಿಂದ ಈ ಪುಣ್ಯಭೂಮಿಯ ವೀಕ್ಷಣೆಗಾಗಿ ಭಕ್ತರು ಬರುತ್ತಾರೆ. ಇದರಿಂದ ಪ್ರವಾಸೋಧ್ಯಮ ಸಹ ಬೆಳವಣಿಗೆ ಕಾಣಲಿದೆ ಎಂದು ಅಭಿಪ್ರಾಯಪಟ್ಟರು.
ರಾಮಮಂದಿರ ನಿರ್ಮಾಣದ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ, ಯೋಜನೆ ರೂಪಿಸಲು ಪ್ರಮುಖ ಕಾರಣಕರ್ತರು ಮಂದಿರ ನಿರ್ಮಾಣದ ಕನಸುಗಾರರು ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ರವರಿಗೆ ಹಾಗೂ ಸಂಪುಟದ ಸಚಿವರಿಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಶ್ರೀರಾಮನ ಮತ್ತು ಹನುಮನ ಭಕ್ತರು ಕೃತಜ್ಞರಾಗಿದ್ದೇವೆ ಎಂದು ತಿಳಿಸಿದರು.
ಕಾಶಿ ಯಾತ್ರೆಯಂತೆ ರಾಮಜನ್ಮಭೂಮಿ ಅಯೋಧ್ಯೆಯನ್ನೂ ಒಮ್ಮೆ ನೋಡಿ ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮಾಗಡಿ ಕ್ಷೇತ್ರದಿಂದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಹನುಮ ಮಾಲಾಧಾರಿಗಳಾಗಿ ಅಯೋದ್ಯೆಗೆ ತೆರಳಲಿದ್ದೇವೆ. ಕರಸೇವಕರಿಗೆ ಮೊದಲ ಆಧ್ಯತೆ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಎರಡನೇ ಆಧ್ಯತೆ ಹಾಗೂ ಬಿಜೆಪಿಯ ನೋಂದಾಯಿತ ಸದಸ್ಯರಿಗೆ ಪ್ರಾಮುಖ್ಯತೆ ನೀಡಲಾಗುವುದು. ಪ್ರತಿ ಬೂತ್ ಮಟ್ಟದಲ್ಲಿ ತಲಾ ಐದು ಜನರಂತೆ ಆಯ್ಕೆ ಮಾಡಿ ಆಯೋದ್ಯೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಪ್ರಸಾದ್‌ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕೆಡಿಪಿ ಸಮಿತಿ ಸದಸ್ಯ ನಾರಾಯಣರೆಡ್ಡಿ, ಆಶ್ರಯ ಸಮಿತಿ ಸದಸ್ಯ ಕುಮಾರ್, ಬಿಡದಿ ಹೋಬಳಿ ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ರವಿ, ವಿಶಾಲ್ ಜೈನ್, ಕನ್ನಡಮಂಜು, ಬಾಲಕೃಷ್ಣ(ಬಾಲಾಜಿ), ವಿಜಯ್, ಚೇತನ್ ಜೈನ್, ರೇವಣ್ಣ, ಬಾಳೆಮಂಡಿ ಶಿವಣ್ಣ, ಭರತ್, ಮಾರುತಿ, ಕಾಮರಾಜು, ವೆಂಕಟಾಚಲಯ್ಯ, ಶ್ರೀನಿವಾಸ್, ರವಿಮೌರ್ಯ ಮುಂತಾದವರು ಹಾಜರಿದ್ದರು.