ರಾಮನಗರ: ಮಹಾಶಿವರಾತ್ರಿ ಹಬ್ಬವನ್ನು ನಗರ ಸೇರಿ ಜಿಲ್ಲೆಯಾದ್ಯಂತ ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.
ನಗರದ ಅರಳೇಪೇಟೆ ಬಸವೇಶ್ವರಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಬೀದಿಯ ಶ್ರೀ ರೇವಣಸಿದ್ದೇಶ್ವರ ದೇವಾಲಯ, ಐಜೂರಿನ ಮಲ್ಲೇಶ್ವರಸ್ವಾಮಿ ದೇವಾಲಯ, ಅವ್ವೇರಹಳ್ಳಿ ಎಸ್‌ಆರ್‌ಎಸ್ ಬೆಟ್ಟದ ಶ್ರೀ ರೇವಣಸಿದ್ಧೇಶ್ವರಸ್ವಾಮಿ, ಚನ್ನಪಟ್ಟಣದ ಕೋಟೆ ಬಡಾವಣೆಯ ಕಾಶಿ ವಿಶ್ವನಾಥ ದೇವಾಲಯ, ಮಂಡಿಪೇಟೆಯಲ್ಲಿರುವ ಶಿವನ ದೇವಾಲಯ, ಹೊಸೂರು ಮತ್ತು ಅಬ್ಬೂರು ಗ್ರಾಮಗಳಲ್ಲಿರುವ ಬೀರೇಶ್ವರಸ್ವಾಮಿ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಮಾಗಡಿ ಪಟ್ಟಣದಲ್ಲಿನ ಗವಿ ಗಂಗಾಧರೇಶ್ವರಸ್ವಾಮಿ ದೇವಾಲಯ, ಕೋಟೆ ರಾಮೇಶ್ವರ, ಕಾಶಿ ವಿಶ್ವೇಶ್ವರ ದೇವಾಲಯಗಳು, ಕುದೂರಿನಲ್ಲಿರುವ ಅಂತರಗಂಗೆ ದೇವಾಲಯ, ಸಾವನದುರ್ಗ ಕ್ಷೇತ್ರದಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯ, ಕನಕಪುರ ತಾಲೂಕಿನ ಮಲಗಾಳು ಈಶ್ವರ ದೇಗುಲ, ಹಾರೋಹಳ್ಳಿಯ ಅರುಣಾಚಲೇಶ್ವರ ದೇವಾಲಯಗಳಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆಗಳು ದಿನಪೂರ್ತಿ ನಿರಂತರವಾಗಿ ನೆರೆವೇರಿದವು.
ರಾಮನಗರದ ಪುರಾಣ ಪ್ರಸಿದ್ಧ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಜೀರ್ಣೋಧ್ಧಾರ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಅರಳೇಪೇಟೆ ಬಸವೇಶ್ವರಸ್ವಾಮಿ ದೇಗುಲ ಸೇರಿದಂತೆ ನಾನಾ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ-ಭಾವ ಸಮರ್ಪಿಸಿಕೊಂಡರು.
ಬಿಡದಿಯ ಪ್ರಸಿದ್ದ ಈಶ್ವರ ದೇವಾಲಯದಲ್ಲಿನ 6.03 ಅಡಿ ಎತ್ತರದ ಬೃಹದಾಕಾರದ ಮಹಾಲಿಂಗವು ಮಹಾಶಿವರಾತ್ರಿ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಮಹಾಲಿಂಗದ ದರ್ಶನ ಪಡೆದರು. ಈಶ್ವರ ದೇಗುಲದಲ್ಲಿ ಮಹಾಲಿಂಗವನ್ನು ಬೆಣ್ಣೆಯಿಂದ ಅಲಂಕರಿಸಿ ತ್ರಿಶೂಲ ಮತ್ತು ಢಮರುಗದ ನಡುವೆ ಸರ್ಪ ಇರುವ ಚಿತ್ರ ರಚಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಆಕರ್ಷಕ ಅಲಂಕೃತ ಮಹಾಲಿಂಗ ದರ್ಶನ ಪಡೆಯಲು ದೂರ ಜಿಲ್ಲೆಗಳಿಂದಲೂ ನೂರಾರು ಭಕ್ತಾಧಿಗಳು ಆಗಮಿಸಿದ್ದರು.
ಬಿಡದಿಯ ಕೇತಗಾನಹಳ್ಳಿ ಗ್ರಾಮದಲ್ಲಿರುವ ಪುರಾತನ ಕಗ್ಗಲ್ಲು ಬೀರೇಶ್ವರಸ್ವಾಮಿ ಉದ್ಭವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಬೆಳಗ್ಗಿನಿಂದಲೇ ಪೂಜಾ ಕೈಂಕರ್ಯಗಳು ನಡೆದವು. ನಂತರ ರುದ್ರಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರಿದವು. ಉಪವಾಸನಿರತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಆಗಮಿಸಿ ತಮ್ಮ ಆರಾಧ್ಯ ದೈವನ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಭಾನುವಾರ ದೇಗುಲದ ಆವರಣದಲ್ಲಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಹಾಗೆಯೇ ಬಾನಂದೂರು ಮತ್ತು ಬಿಲ್ಲಕೆಂಪನಹಳ್ಳಿ ಗ್ರಾಮಗಳಲ್ಲಿ ಮಹದೇಶ್ವರಸ್ವಾಮಿಯ ಅಗ್ನಿಕೊಂಡ ಮತ್ತು ಜಾತ್ರಾ ಮಹೋತ್ಸವ ಜರುಗಲಿದೆ.
ಶಿವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳನ್ನು ನಡೆದವು. ಶಿವಲಿಂಗ ದರ್ಶನಕ್ಕಾಗಿ ಕೆಲ ದೇವಾಲಯಗಳಲ್ಲಿ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಹಲವು ದೇವಾಲಯಗಳಲ್ಲಿ ಭಕ್ತರಿಗೆ ಪ್ರಸಾದ, ಹಣ್ಣು-ಹಂಪಲು ವಿತರಿಸಲಾಯಿತು. ವಿವಿಧ ಭಜನೆ ಮಂಡಳಿ ವತಿಯಿಂದ ದೇವಸ್ಥಾನಗಳಲ್ಲಿ ಅಹೋರಾತ್ರಿ ಭಜನೆ, ಶಿವಸ್ಮರಣೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.