News Kannada
Friday, March 31 2023

ಬೆಂಗಳೂರು ನಗರ

ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ 50 ರಷ್ಟು ಇಳಿಕೆ: ಸಚಿವ ಹಾಲಪ್ಪ ಆಚಾರ್

Malnutrition among children has come down by 50 per cent: Minister Halappa Achar
Photo Credit : By Author

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇಕಡ 50ರಷ್ಟು ಕಡಿಮೆಯಾಗಿದೆ ಎಂದು ಗಣಿ & ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಶೇಷ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ವಿಧಾನಪರಿಷತ್‌ಗಿಂದು ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಡಾ. ತಳವಾರ್ ಸಾಬಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳ ಅಪೌಷ್ಟಿತೆ ಹೋಗಲಾಡಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, 2019-20ಕ್ಕೆ ಹೋಲಿಸಿದರೆ 2021-22ರಲ್ಲಿ ಅಪೌಷ್ಟಿಕತೆಯ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ ಎಂದರು.

ಎರಡು ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎರಡು ಲಕ್ಷ ಮಕ್ಕಳು ಸಾಧಾರಣ ಅಪೌಷ್ಟಿಕತೆ ಸಮಸ್ಯೆಗೆ ಸಿಲುಕಿದ್ದವು. ಸರ್ಕಾರದ ರಚನಾತ್ಮಕ ಕ್ರಮಗಳಿಂದಾಗಿ ಇದೀಗ ಈ ಪ್ರಮಾಣ ಅರ್ದದಷ್ಟು ತಗ್ಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು, 6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಇರುವ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸಿದೆ ಎಂದು ತಿಳಿಸಿದರು. ಅಪೌಷ್ಟಿಕತೆ ಇರುವ ಪ್ರತಿಯೊಂದು ಮಗುವಿಗೆ 8 ರೂ, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿಗೆ 12 ರೂ ವೆಚ್ಚ ಮಾಡಲಾಗುತ್ತಿದೆ ಎಂದರು.

ಕೆಲವು ಮಹತ್ವಾಕಾಂಕ್ಷಿ ತಾಲ್ಲೂಕುಗಳ ಅಪೌಷ್ಟಿಕತೆ ಮಕ್ಕಳಿಗೆ ಸೀಮಿತವಾಗಿದ್ದ ಮೊಟ್ಟೆ ಮತ್ತು ಹಾಲು ನೀಡುವ ಕಾರ್ಯಕ್ರಮವನ್ನು ಇದೀಗ ರಾಜ್ಯಾದ ಎಲ್ಲಾ ಮಹತ್ವಾಕಾಂಕ್ಷಿ ತಾಲ್ಲೂಕುಗಳಿಗೆ ವಿಸ್ತರಣೆ ಮಾಡಲಾಗಿದೆ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದ ಮೇಲ್ವಿಚಾರಣಾ ಸಮಿತಿ ನಿಗಾವಹಿಸುತ್ತಿದೆ. ಬಾಲ ವಿಕಾಸ ಸಮಿತಿಯೂ ಕೂಡ ಸೂಕ್ತ ಕಣ್ಗಾವಲು ಹಾಕಿದೆ. ಆರೋಗ್ಯ ಇಲಾಖೆಯಿಂದಲೂ ಸೂಕ್ತ ಸಲಹೆ, ಚಿಕಿತ್ಸೆ, ತಪಾಸಣೆ ಸೇವೆ ಪಡೆದುಕೊಳ್ಳಲಾಗುತ್ತಿದೆ. ಈ ಎಲ್ಲಾ ಸಕಾರಾತ್ಮಕ ಕ್ರಮಗಳಿಂದಾಗಿ ಅಪೌಷ್ಟಿಕತೆ ಸಮಸ್ಯೆ ತಗ್ಗಿಸಲು ಸಾಧ್ಯವಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಗೃಹಣಿ ಶಕ್ತಿ ಯೋಜನೆ, ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ ಯೋಜನೆ ಬಜೆಟ್ ಅನುಮೋದನೆ ನಂತರ ಜಾರಿ 
ಮಹಿಳೆಯರು ಮತ್ತು ಮಕ್ಕಳ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಈ ಬಾರಿಯ ಬಜೆಟ್ ನಲ್ಲಿ “ಗೃಹಿಣಿ ಶಕ್ತಿ” ಯೋಜನೆ ಘೋಷಣೆ ಮಾಡಲಾಗಿದೆ. ಇದರಡಿ, ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂಪಾಯಿ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದು, ಬಜೆಟ್ ಗೆ ಅನುಮೋದನೆ ದೊರೆಯುತ್ತಿದ್ದಂತೆ ಪ್ರಕಟಿಸಿರುವ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಗಣಿ & ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಶೇಷ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ವಿಧಾನಪರಿಷತ್ತಿಗಿಂದು ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಡಿ.ಎಸ್. ಅರುಣ್ ಅವರ ಪ್ರಸ್ತಾಪಗಳಿಗೆ ಉತ್ತರ ನೀಡಿದ ಸಚಿವರು, ಮಹಿಳಾ ಸಬಲೀಕರಣಕ್ಕಾಗಿ ಹಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ಒಂದು ಲಕ್ಷ ಮಹಿಳೆಯರಿಗೆ ಗೃಹ ಆದಾರಿತ ಉದ್ಯಮ ಬಗ್ಗೆ ಕೌಶಲ್ಯ ಅಭಿವೃದ್ಧಿ ತರಭೇತಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಸ್ವಾವಲಂಬಿ ಬದುಕಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

See also  ಹಲವಾರು ತಂತ್ರಗಳನ್ನ ಮೂಲಕ ಸಿಎಂ ತಮ್ಮ ಕುರ್ಚಿ ಉಳಿಸಿಕೊಂಡಿದ್ದಾರೆ: ಸದಾನಂದಗೌಡ ಗಂಭೀರ ಆರೋಪ

ಗುಡ್ಡಗಾಡು ಪ್ರದೇಶಗಳಲ್ಲಿ ಗರ್ಭೀಣಿಯರಿಗೆ ಅಂಗನವಾಡಿಗಳಲ್ಲಿ ಮಾತೃಪೂರ್ಣ ಯೋಜನೆಯಡಿ ಬಿಸಿಯೂಟ ಸೇವಿಸಲು ಸಾಧ್ಯವಾಗದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಆರು ಜಿಲ್ಲೆಗಳಲ್ಲಿ ಫಲಾನುಭವಿಗಳ ಮನೆಗಳಿಗೆ ಆಹಾರ ಧಾನ್ಯವನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾತೃವಂದನಾ ಯೋಜನೆಯಡಿ ಮೊದಲ ಹೆರಿಗೆ ಸಂದರ್ಭದಲ್ಲಿ ಸರ್ಕಾರ ಐದು ಸಾವಿರ ರೂಗಳನ್ನು ಎರಡು ಕಂತುಗಳಲ್ಲಿ ನೀಡುತ್ತಿದ್ದು, ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗುವಾದರೆ ಆರು ಸಾವಿರ ರೂಗಳನ್ನು ಒಂದೇ ಕಂತಿನಲ್ಲಿ ನೀಡಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಇಲಾಖೆಯಿಂದ ಕಳೆದ 3 ವರ್ಷಗಳಲ್ಲಿ ಜಾರಿಗೊಳಿಸಿದ ಸುಮಾರು 12 ಕಾರ್ಯಕ್ರಮಗಳವಾರು ವೆಚ್ಚ ಮಾಡಲಾದ ಅನುದಾನದ ವಿವರಗಳನ್ನು ತಿಳಿಸಿದರು. ಸ್ತ್ರೀ ಶಕ್ತಿ, ಸಾಂತ್ವಾನ, ಸ್ವಾಧಾರ ಯೋಜನೆಗಳನ್ನು ಸಹ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ವಿಶೇಷ ಚೇತನರಿಗೆ ಪರಿಕರಗಳನ್ನು ಒದಗಿಸಲು 2023-24 ನೇ ಸಾಲಿಗೆ 50 ಕೋಟಿ ರೂ ನಿಗದಿ : ಸ್ಥಳೀಯ ಸಂಸ್ಥೆಗಳ ಬಜೆಟ್ ನಲ್ಲಿ ಶೇ 5 ರಷ್ಟು ಮೊತ್ತ ಮೀಸಲು
ವಿಕಲಚೇತನರಿಗೆ ದ್ವಿಚಕ್ರ ವಾಹನ ಒಳಗೊಂಡಂತೆ ವಿವಿಧ ಪರಿಕರಗಳನ್ನು ಒದಗಿಸಲು ಪ್ರಸ್ತುತ ಲಭ್ಯವಿರುವ ಆರ್ಥಿಕ ಸಂಪನ್ಮೂಲ ಕಡಿಮೆ ಇದ್ದು, ಇದಕ್ಕಾಗಿ ಈ ಬಾರಿ ಬಜೆಟ್ ನಲ್ಲಿ 50 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಗಣಿ, ಭೂ ವಿಜ್ಞಾನ, ವಿಶೇಷ ಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ವಿಧಾನಪರಿಷತ್ತಿಗಿಂದು ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಎಸ್. ರವಿ ಕುಮಾರ್ ಅವರ ಪ್ರಸ್ತಾಪಗಳಿಗೆ ಉತ್ತರಿಸಿದ ಸಚಿವರು, 2022-23 ನೇ ಸಾಲಿನ ಬಜೆಟ್ ನಲ್ಲಿ ಈ ಉದ್ದೇಶಕ್ಕಾಗಿ 16 ಕೋಟಿ ರೂಪಾಯಿ ನಿಗದಿ ಮಾಡಲಾಗಿತ್ತು. ಈ ಬಾರಿ ಅಧಿಕ ಹಣ ನಿಗದಿ ಮಾಡಿದ್ದು, ಹೆಚ್ಚು ಮಂದಿ ವಿಕಲಚೇತರಿಗೆ ಸೌಲಭ್ಯಗಳು ದೊರೆಯಲಿವೆ. ವಿಶೇಷ ಚೇತನರಿಗೆ ಇನ್ನಷ್ಟು ಪರಿಕರಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಕ್ಕೂ ಸಹ ಪ್ರತ್ಯೇಕವಾಗಿ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.

ಕಳೆದ ವರ್ಷ 1.41 ಲಕ್ಷ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗಿದ್ದು, ಫಲಾನುಭವಿಗಳ ಬೇಡಿಕೆಗೆ ಹೋಲಿಸಿದರೆ ಸೌಲಭ್ಯ ವಿತರಣೆ ಕಡಿಮೆ ಇದೆ. ಇದಕ್ಕಾಗಿಯೇ ಸಂಪನ್ಮೂಲ ಹೆಚ್ಚಿಸಲಾಗುತ್ತಿದೆ. ಶಾಸಕರ ನಿಧಿಯಿಂದಲೂ ಸಹ ವಿಶೇಷ ಚೇತನರಿಗೆ ಪರಿಕರಗಳನ್ನು ವಿತರಿಸಲು ಅವಕಾಶವಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳು ಸಹ ತಮ್ಮ ಬಜೆಟ್ ನಲ್ಲಿ ಶೇ 5 ರಷ್ಟು ಮೊತ್ತವನ್ನು ವಿಶೇಷಚೇತನರಿಗೆ ಮೀಸಲಿರಿಸಿದ್ದು, ಈ ಮೊತ್ತದಿಂದ ಲ್ಯಾಪ್ ಟಾಪ್, ಶೈಕ್ಷಣಿಕ ಉದ್ದೇಶಕ್ಕಾಗಿ ಬ್ರೈಲ್ ವಸ್ತುಗಳನ್ನು ನೀಡುತ್ತಿದ್ದು, ದ್ವಿಚಕ್ರ ವಾಹನಗಳನ್ನು ಸಹ ಒದಗಿಸಲು ಅವಕಾಶವಿದೆ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ವ್ಯಾಪಕ ಕ್ರಮ: ಆಸಿಡ್ ದಾಳಿಗೊಳಗಾದವರಿಗೆ ನೀಡುತ್ತಿದ್ದ ಪರಿಹಾರವನ್ನು 3 ರಿಂದ 10 ಲಕ್ಷಕ್ಕೆ ಏರಿಕೆ
ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಆಸಿಡ್ ದಾಳಿಗೊಳಗಾದವರಿಗೆ ನೀಡುತ್ತಿದ್ದ 3 ಲಕ್ಷ ರೂ ಪರಿಹಾರವನ್ನು 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಗಣಿ & ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಶೇಷ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ವಿಧಾನಪರಿಷತ್ತಿಗಿಂದು ತಿಳಿಸಿದರು.

See also  ಬಿಎಂಟಿಸಿ ವಜ್ರ ಸಾರಿಗೆ ಬಸ್'ಗಳ ಸಂಖ್ಯೆ ಹೆಚ್ಚಳ

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ಸಲೀಂ ಅಹಮದ್ ಅವರ ಪರವಾಗಿ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಸಿಡ್ ದಾಳಿ ಪ್ರಕರಣಗಳಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇತ್ತೀಚೆಗೆ ಕನಕಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಆಸಿಡ್ ದಾಳಿ ಸಂದರ್ಭದಲ್ಲಿ ಸರ್ಕಾರ ತಕ್ಷಣವೇ ಸ್ಪಂದಿಸಿದೆ. ತಾವೂ ಕೂಡ ಆಸ್ಪತ್ರೆಗೆ ತೆರಳಿ ಸಂತ್ರಸ್ತೆಗೆ ಧೈರ್ಯ ತುಂಬಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ತೆಗೆಕೊಳ್ಳಲಾಗುತ್ತಿದೆ. ಜೊತೆಗೆ ಸಂತ್ರಸ್ತರಿಗೆ ಸೂಕ್ತ ಪುನರ್ ವಸತಿ, ವೃತ್ತಿ ತರಬೇತಿ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ನಿರ್ಭಯ ಯೋಜನೆಯಡಿಯಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಸ್ವಯಂ ರಕ್ಷಣೆಗಾಗಿ ಹಾಸ್ಟಲ್ ವಿದ್ಯಾರ್ಥಿನಿಯರಿಗೆ ತರಭೇತಿ ನೀಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಮಹಿಳಾ ದೌರ್ಜನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಎಲ್ಲಾ ಮಾಹಿತಿಯನ್ನು ಗೃಹ ಇಲಾಖೆಯಿಂದ ಪಡೆದು ನೀಡಿದ್ದು, ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ಗೃಹ ಇಲಾಖೆಯಿಂದ ತರಿಸಿ ಸದಸ್ಯರಿಗೆ ಒದಗಿಸಲಾಗುವುದು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು