ಬೆಂಗಳೂರು: ತನ್ನ ವಿರುದ್ಧ ಭ್ರಷ್ಟಾಚಾರ ಮತ್ತು ಇನ್ನಿತರ ಆರೋಪಗಳನ್ನು ಮಾಡಿರುವ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರಿಂದ ಈಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ 1 ಕೋ. ರೂ. ಪರಿಹಾರ ಕೇಳಿದ್ದಾರೆ.
ಮಾನಸಿಕ ನೆಮ್ಮದಿ ಕೆಡಲು ಕಾರಣರಾಗಿರುವ ರೂಪಾ ಮೌದ್ಗಿಲ್ ಬಹಿರಂಗವಾಗಿ ಬೇಷರತ್ತು ಕ್ಷಮೆ ಯಾಚಿಸಿ 1 ಕೋ. ರೂ. ಪರಿಹಾರ ಕೊಡಬೇಕೆಂದು ಸಿಂಧೂರಿ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ. ರೂಪಾ ಪರಿಹಾರ ಕೊಡದಿದ್ದರೆ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದ್ದಾರೆ.
ರೋಹಿಣಿ ಸಿಂಧೂರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವುದಲ್ಲದೆ ತನ್ನ ಕೆಲವು ಆಕ್ಷೇಪಾರ್ಹ ಭಂಗಿಯ ಫೋಟೊಗಳನ್ನು ಮೂವರು ಪುರುಷ ಮೇಲಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಇದು ಸರಕಾರಿ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಬೆಂಗಳೂರಿನಲ್ಲಿ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ಬಂಗಲೆಗಳನ್ನು ಕಟ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ರೂಪಾ ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಗೊಳಿಸಿದ್ದಾರೆ.
ಉನ್ನತ ಮಹಿಳಾ ಅಧಿಕಾರಿಗಳಿಬ್ಬರ ಈ ಜಗಳ ಕೆಲ ದಿನಗಳಿಂದ ಮಾಧ್ಯಮಗಳ ಪಾಲಿಗೆ ರಸಗವಳದಂತಾಗಿ ತೀವ್ರ ಮುಜುಗರಕ್ಕೀಡಾದ ಸರಕಾರ ಇಬ್ಬರನ್ನೂ ಹುದ್ದೆ ತೋರಿಸದೆ ವರ್ಗಾವಣೆ ಮಾಡಿದೆ. ಇದರ ನಂತರವೂ ರೂಪಾ ಟೀಕೆಗಳನ್ನು ಮತ್ತು ಆರೋಪಗಳನ್ನು ನಿಲ್ಲಿಸಿಲ್ಲ. ಆರೋಪಗಳಿಗೆಲ್ಲ ಸಂಯಮದಿಂದಲೇ ಉತ್ತರಿಸಿರುವ ರೋಹಿಣಿ ಸಿಂಧೂರಿ ಈಗ ಕಾನೂನಿನ ಮೊರೆ ಹೋಗಿದ್ದಾರೆ.
ರೂಪಾ ಮಾಡಿರುವ ಆರೋಪಗಳಿಂದ ತನಗೆ ಮತ್ತು ಕುಟುಂಬದವರಿಗೆ ಮಾನಸಿಕ ಆಘಾತವಾಗಿದೆ. ನಾವು ಅಶಾಂತಗೊಂಡಿದ್ದು, ನೆಮ್ಮದಿ ಕಳೆದುಕೊಂಡಿದ್ದೇವೆ. ಇದಕ್ಕೆಲ್ಲ ಪರಿಹಾರವಾಗಿ ಬೇಷರತ್ತು ಕ್ಷಮೆಯಾಚಿಸಿ 1 ಕೋ. ರೂ. ಪರಿಹಾರ ನೀಡಬೇಕೆಂದು ರೋಹಿಣಿ ಲೀಗಲ್ ನೋಟಿಸಿನಲ್ಲಿ ಹೇಳಿದ್ದಾರೆ.