News Kannada
Friday, March 24 2023

ಬೆಂಗಳೂರು ನಗರ

ಬೆಂಗಳೂರು: ನುಡಿದಂತೆ ನಡೆಯುವ ಬಿಜೆಪಿಗೆ ಮತ್ತೆ ಆಡಳಿತ ಅವಕಾಶ ಕೊಡಿ- ರಾಜನಾಥ್ ಸಿಂಗ್

Bengaluru: Bjp should be given a chance to rule again, says Rajnath Singh
Photo Credit : Facebook

ಬೆಂಗಳೂರು: ಬಿಜೆಪಿಯ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕ ಯಡಿಯೂರಪ್ಪ ಅವರ ಆಶಯದಂತೆ ಬಿಜೆಪಿಗೆ ರಾಜ್ಯದಲ್ಲಿ ಮೂರನೇ ಎರಡು ಬಹುಮತ ಕೊಡಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮನವಿ ಮಾಡಿದರು.

ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ಇಂದು ಡೊಳ್ಳು ಬಾರಿಸಿ ಬಿಜೆಪಿ ಎರಡನೇ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಿದ ಬಳಿಕ ಅವರು ಸಭೆಯಲ್ಲಿ ಮಾತನಾಡಿದರು. ಇದಕ್ಕೂ ಮೊದಲು ವೀರ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಭೇಟಿ ನೀಡಿ ಗೌರವಾರ್ಪಣೆ ಸಲ್ಲಿಸಿದರು.

ಮೋದಿಜಿ ಅವರ ಮಾರ್ಗದರ್ಶನ ಮತ್ತು ಕರ್ನಾಟಕದಲ್ಲಿ 5 ವರ್ಷ ಆಡಳಿತಕ್ಕೆ ಅವಕಾಶ ಕೊಟ್ಟರೆ ರಾಜ್ಯವನ್ನು ಅತ್ಯಂತ ಅಭಿವೃದ್ಧಿ ಉಳ್ಳ ಪ್ರದೇಶವಾಗಿ ಮಾಡುವುದಾಗಿ ತಿಳಿಸಿದರು. ಕಾಂಗ್ರೆಸ್ ಪಕ್ಷಕ್ಕೆ 50 ವರ್ಷ ಮಾಡಲು ಅಸಾಧ್ಯವಾದ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರಕಾರ ಮಾಡಿದೆ. ರಾಷ್ಟ್ರೀಯ ಹೆದ್ದಾರಿ, ವಿಮಾನನಿಲ್ದಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮೋದಿಜಿ ಅವರು ಮಾಡಿದ್ದಾರೆ ಎಂದು ತಿಳಿಸಿದರು. ರಕ್ಷಣಾ ಕ್ಷೇತ್ರದಲ್ಲೂ ನಾವು ಸ್ವಾವಲಂಬನೆಯತ್ತ ಮುನ್ನಡೆದಿದ್ದು, ಜಗತ್ತಿಗೂ ರಫ್ತು ಮಾಡಲು ಶಕ್ತರಾಗಿದ್ದೇವೆ ಎಂದು ತಿಳಿಸಿದರು.

ಎಚ್‍ಎಎಲ್, ಕೈಗಾರಿಕಾ ಕಾರಿಡಾರ್‍ಗಳ ಮೂಲಕ ಉದ್ಯೋಗಾವಕಾಶ ಹೆಚ್ಚಲಿದೆ. ದೇಶದ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಮೋದಿಜಿ ಅವರು ಮಾಡಿದ ಕೆಲಸವನ್ನು ಗಮನಿಸಿ ಬಿಜೆಪಿಯನ್ನು ಬೆಂಬಲಿಸಿ ಎಂದು ವಿನಂತಿಸಿದರು. ಪ್ರತಿ ಮನೆಗೆ ನೀರು, ಭೂಮಿಗೆ ನೀರಾವರಿ ಕೊಡಲು ನಾವು ಬದ್ಧರಿದ್ದೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಹೇಳುವುದು ಒಂದು; ಮಾಡುವುದು ಇನ್ನೊಂದು. ಆದರೆ, ಬಿಜೆಪಿ ಹೇಳಿದ್ದನ್ನೇ ಮಾಡಿ ತೋರಿಸುತ್ತದೆ ಎಂದು ತಿಳಿಸಿದರು. ಯಡಿಯೂರಪ್ಪ ಅವರು ರಾಜ್ಯದ ಅತ್ಯುನ್ನತ ನಾಯಕ. ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ್ದೇವೆ ಎಂದು ತಿಳಿಸಿದರು. ಕರ್ನಾಟಕಕ್ಕೆ ಅವರ ಸೇವೆಯನ್ನು ಬಿಜೆಪಿ ಮರೆಯುವುದಿಲ್ಲ ಎಂದು ತಿಳಿಸಿದರು.

ಬೆಳಗಾವಿಯು ಕರ್ನಾಟಕದ ಅತ್ಯುನ್ನತ ಸ್ಥಾನ ಪಡೆದ ಪ್ರದೇಶ. 2018ರಲ್ಲಿ ಬಿಜೆಪಿ 6 ದಿನಗಳ ಸರಕಾರ ಮಾಡಿತ್ತು. ಬಳಿಕ ಕುಮಾರಸ್ವಾಮಿ ಸರಕಾರ ಬಂತು. ಯಡಿಯೂರಪ್ಪ ಅವರು ಆರೋಗ್ಯದ ಕಾರಣಕ್ಕಾಗಿ ಅಧಿಕಾರ ತ್ಯಜಿಸಿದರು. ಬಳಿಕ ಸಜ್ಜನ- ಪ್ರಾಮಾಣಿಕ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು ಎಂದು ವಿವರಿಸಿದರು.

370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು ಮಾಡುವ ಬದ್ಧತೆ ಪ್ರದರ್ಶಿಸಿದ್ದೇವೆ. ಕಾಂಗ್ರೆಸ್ ಇಂಥ ಅಪರಾಧಗಳನ್ನು ಒಪ್ಪಿಕೊಂಡಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಹಣ ಕೊಡಲಾಗಿದೆ. 8 ಕೋಟಿ ಮನೆಗಳಿಗೆ ನಳ್ಳಿ ನೀರನ್ನು ನೀಡಿದ್ದೇವೆ. 80 ಕೋಟಿ ಜನರಿಗೆ ಉಚಿತ ಪಡಿತರ ಕೊಡಲಾಗಿದೆ ಎಂದು ತಿಳಿಸಿದರು.

ಕೋವಿಡ್ ಬಂದಾಗ ಉಚಿತ ಲಸಿಕೆ ಕೊಟ್ಟ ದೇಶ ನಮ್ಮದು. ಅಮೆರಿಕ, ಫ್ರಾನ್ಸ್‍ನಂಥ ದೇಶದಲ್ಲೂ ಇಂಥ ಸಾಧನೆ ಆಗಿಲ್ಲ. ಉಚಿತ ಲಸಿಕೆ ಕೊಡದಿದ್ದರೆ 39 ಲಕ್ಷ ಜನರು ಸಾಯುತ್ತಿದ್ದರು ಎಂದು ಹಾರ್ವರ್ಡ್ ವಿವಿ ವರದಿ ತಿಳಿಸಿದೆ ಎಂದು ಗಮನ ಸೆಳೆದರು. ಭಾರತ ಬದಲಾಗಿದೆ ಎಂದು ತಿಳಿಸಿದರು.

See also  ಸ್ಥಳೀಯರಿಗೆ ಉದ್ಯೋಗದಲ್ಲಿ ತೊಂದರೆ ಕೊಟ್ಟರೆ ಹುಶಾರ್ - ಶಾಸಕ ಡಾ.ಭರತ್ ಶೆಟ್ಟಿಯವರಿಂದ MRPL ಅಧಿಕಾರಿಗಳಿಗೆ ಎಚ್ಚರಿಕೆ

ನಮ್ಮ ಗೌರವಶಾಲಿ ಪರಂಪರೆ ನೆನಪಿರಲಿ. ವಿಜಯ ಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಗೆಲುವಿಗೆ ಪ್ರತಿಜ್ಞಾಬದ್ಧರಾಗಬೇಕು ಎಂದು ಮನವಿ ಮಾಡಿದರು. ವೀರರನ್ನು ನೀಡಿದ ನಾಡಿದು. ರಾಣಿ ಚನ್ನಮ್ಮಳ ವೀರಗಾಥೆಯನ್ನು ದೇಶದ ವಿವಿಧೆಡೆ ಚರ್ಚಿಸುತ್ತಾರೆ. ಸಂಗೊಳ್ಳಿ ರಾಯಣ್ಣ ಸ್ಫೂರ್ತಿದಾಯಕ ನಾಯಕ. ಅವರ ಪ್ರತಿಮೆ, ಸಮಾಧಿಗೆ ಮಾಲಾರ್ಪಣೆ ಮಾಡಿ ಧನ್ಯತಾ ಭಾವ ಹೊಂದಿದ್ದೇನೆ ಎಂದರು.

ತ್ರ್ರಿಪುರ, ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ಪೈಕಿ ತ್ರಿಪುರ, ನಾಗಾಲ್ಯಾಂಡ್‍ಗಳಲ್ಲಿ ನಮ್ಮ ಸರಕಾರ ಮತ್ತೆ ರಚನೆ ಆಗಲಿದೆ. ಮೇಘಾಲಯದಲ್ಲೂ ನಮ್ಮ ಶಕ್ತಿ ಹೆಚ್ಚಿದೆ. ಇದು ಸಂತಸದ ವಿಚಾರ ಎಂದರು. ಕರ್ನಾಟಕದ ಎಲ್ಲ ಜನರಿಗೆ ನನ್ನ ನಮಸ್ಕಾರಗಳು ಎಂದು ಅವರು ಕನ್ನಡದಲ್ಲೇ ತಿಳಿಸಿದರು.

ಕಿಸಾನ್ ಸಮ್ಮಾನ್ ನಿಧಿಯನ್ನು ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಭ್ರಷ್ಟಾಚಾರಕ್ಕೂ ಔಷಧಿ ಇದೆ ಎಂಬುದನ್ನು ಬಿಜೆಪಿ, ಮೋದಿಜಿ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ಹಣದುಬ್ಬರ ನಮ್ಮಲ್ಲಿ ಕನಿಷ್ಠ ಮಟ್ಟದಲ್ಲಿದೆ. ಭಾರತದ ಅರ್ಥವ್ಯವಸ್ಥೆ ಅತ್ಯಂತ ಸದೃಢವಾಗಿದೆ ಎಂದರು. ಹಿಂದೆ ಅರ್ಥ ವ್ಯವಸ್ಥೆ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವು 10- 11ನೇ ಸ್ಥಾನದಲ್ಲಿತ್ತು. ಈಗ ಅರ್ಥವ್ಯವಸ್ಥೆಯು 5ನೇ ಸ್ಥಾನಕ್ಕೆ ಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು. ನಾಲ್ಕೈದು ವರ್ಷಗಳಲ್ಲಿ ತೃತೀಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಭಾರತ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಭಾರತವನ್ನು ವಿಭಜಿಸಿದವರೇ ಭಾರತ್ ಜೋಡೋ ಮಾಡುತ್ತಾರೆ. ಜನರ ಕಣ್ಣಲ್ಲಿ ಧೂಳು ಹಾಕುವವರು ಸದಾ ಯಶ ಪಡೆಯಲು ಅಸಾಧ್ಯ ಎಂದು ಸವಾಲು ಹಾಕಿದ ಅವರು, ಮೋದಿಜಿ ಅವರ ಸಾವಿನ ಮಾತನಾಡುವ ಕಾಂಗ್ರೆಸ್ಸಿಗರು ಕಮಲ ಅರಳುವುದನ್ನು ಸದಾ ನೋಡುವಂತಾಗಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪರ ಸುನಾಮಿ ಎದ್ದಿದೆ ಎಂದು ತಿಳಿಸಿದರು. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಶಕ್ತಿ ಅಭೂತಪೂರ್ವ. ಮೋಸದಿಂದ ಅವರನ್ನು ಸೆರೆಹಿಡಿಯಲಾಗಿತ್ತು. ಅದನ್ನು ಮರೆಯಲು ಅಸಾಧ್ಯ ಎಂದು ನೆನಪಿಸಿದರು.

ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸುವ ಪ್ರಕ್ರಿಯೆಯಿಂದ ಇಡೀ ಪ್ರದೇಶ ಕಣ್ಣೀರು ಹಾಕಿತ್ತು ಎಂದು ನೆನಪಿಸಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬ್ರಿಟಿಷ್ ಸಾಮ್ರಾಜ್ಯದ ವಂಶಾವಳಿ ಇನ್ನೂ ಉಳಿದಿದೆ. ಅದನ್ನು ಬೇರುಸಹಿತ ಕಿತ್ತೆಸೆಯಬೇಕಿದೆ. ಸಂಗೊಳ್ಳಿ ರಾಯಣ್ಣನ ಗುಣಧರ್ಮಗಳು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ಅವರಲ್ಲಿವೆ. ಭಾರತವನ್ನು ಸರ್ವಸ್ವತಂತ್ರ ಮಾಡಲು, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬಿಜೆಪಿ ಮುಂದಾಗಿದೆ ಎಂದರು.

ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ಕೆಲಸವನ್ನು, ತುಷ್ಟೀಕರಣದ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ. 60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಬಡತನ, ನಿರುದ್ಯೋಗ, ಭ್ರಷ್ಟಾಚಾರ ದೂರ ಮಾಡಲು ಮುಂದಾಗಲಿಲ್ಲ. ಈ ಸವಾಲನ್ನು ಎದುರಿಸುವ ದಿಟ್ಟ ನಾಯಕತ್ವವನ್ನು ಮೋದಿಜಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ಪಥದಲ್ಲಿ ರಾಜ್ಯ, ಭಾರತವು ಮುಂದುವರಿಯಲು ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದರು. ಕಿಸಾನ್ ಸಮ್ಮಾನ್, ಆವಾಸ್ ಯೋಜನೆ, ಸ್ವಚ್ಛ ಭಾರತದ ಮೂಲಕ ಶೌಚಾಲಯ ಸೇರಿ ಕುಟುಂಬಕ್ಕೆ ಬೇಕಾದುದೆಲ್ಲವನ್ನೂ ಕೊಡಲಾಗಿದೆ. ರೈತ ವಿದ್ಯಾನಿಧಿ ಆರಂಭಿಸಿ ಅದನ್ನು ವಿಸ್ತರಿಸಲಾಗಿದೆ ಎಂದು ವಿವರಿಸಿದರು. 4 ದಶಕಗಳ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಲಿಲ್ಲ. ಆದರೆ, ಸಾಮಾಜಿಕ ನ್ಯಾಯಕ್ಕೆ ದಿಟ್ಟ ನಿಲುವನ್ನು ಬಿಜೆಪಿ ತೆಗೆದುಕೊಂಡಿದೆ ಎಂದು ವಿವರಿಸಿದರು. ಬ್ರಿಟಿಷ್ ವಂಶಾವಳಿ ಕಾಂಗ್ರೆಸ್ ಮುಕ್ತ ರಾಜ್ಯ ನಿರ್ಮಿಸಲು ಜನಮತ ಕೊಡಿ ಎಂದು ಅವರು ವಿನಂತಿಸಿದರು. ಜನಪರ, ಜನಕಲ್ಯಾಣ ಸರಕಾರ ರಚಿಸಲು ಬದ್ಧತೆ ಪ್ರದರ್ಶಿಸಿ ಎಂದು ಮನವಿ ಮಾಡಿದರು.

See also  ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದ ಶಮಿ, ಹೂಡಾ

ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಸಿದ್ಧೇಶ್ವರ ಸ್ವಾಮೀಜಿ ಅವರು ನಡೆದಾಡಿದ ಪುಣ್ಯ ಭೂಮಿ ಇದು. ಇದು ಕಮಲ ಅರಳಿಸುವ ಕ್ಷೇತ್ರವಾಗಲಿದೆ. ಕಾಂಗ್ರೆಸ್ ಮುಕ್ತ ನಾಡಿಗೆ ಇದು ಮುನ್ನುಡಿ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಳೆ ಇನ್ನೆರಡು ಯಾತ್ರೆಗಳನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ಉದ್ಘಾಟಿಸಲಿದ್ದಾರೆ. 4 ಯಾತ್ರೆಗಳ ಮೂಲಕ 4 ಕೋಟಿ ಮತದಾರರನ್ನು ಸಂಪರ್ಕಿಸಲಾಗುವುದು. ಇಂದು ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಮತದಾರರು ಡಬಲ್ ಎಂಜಿನ್ ಸರಕಾರಗಳ ಅಭಿವೃದ್ಧಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರಕಾರ ರಚಿಸಲಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋóಶಿ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಕೇವಲ ಭರವಸೆಗಳ ಸರದಾರರು ಎಂದು ಟೀಕಿಸಿದರು. ಸಿಎಂ ಕುರ್ಚಿ ಒಂದೇ ಇದೆ. ಆದರೆ, ಕಾಂಗ್ರೆಸ್‍ನಲ್ಲಿ ಹಲವಾರು ಆಕಾಂಕ್ಷಿಗಳಿದ್ದಾರೆ ಎಂದರು.

ಡಬಲ್ ಎಂಜಿನ್ ಸರಕಾರದ ಮೂಲಕ ಅಭಿವೃದ್ಧಿಯ ಸಾಧನೆ ಆಗಿದೆ. ದೇಶ- ರಾಜ್ಯದಲ್ಲಿ ಗಮನಾರ್ಹ ಪರಿವರ್ತನೆ ಆಗಿದೆ. ಬೃಹತ್ ಆರ್ಥಿಕ ಶಕ್ತಿಯಾಗಿ ರಾಜ್ಯ- ದೇಶಗಳು ಹೊರಹೊಮ್ಮಿವೆ. ಅದನ್ನು ಗಮನಿಸಿ ಬಿಜೆಪಿಗೆ ಮತ ಕೊಡಲು ಮನವಿ ಮಾಡಿದರು. ದೇಶವು ಆತ್ಮನಿರ್ಭರ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ನರೇಂದ್ರ ಮೋದಿಜಿ, ರಾಜನಾಥ ಸಿಂಗ್ ಅವರು ಕಾರಣರಾಗಿದ್ದಾರೆ ಎಂದು ವಿವರಿಸಿದರು.

ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ, ರಾಜ್ಯದ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜ್, ಸಂಸದೆ ಮಂಗಳಾ ಅಂಗಡಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ಎನ್.ರವಿಕುಮಾರ್, ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮ್ಮಟಳ್ಳಿ, ಅಭಯ ಪಾಟೀಲ, ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿಮಠ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ರಾಜ್ಯ ಪದಾಧಿಕಾರಿಗಳು, ಸಚಿವರು, ಸಂಸದರು, ಶಾಸಕರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು