ಬೆಂಗಳೂರು: ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ವಾರ್ಷಿಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಮಹಿಳಾ ವಕೀಲರು ಈ ವಿಷಯವನ್ನು ಪ್ರಸ್ತಾಪಿಸಿದರು. ಪರೀಕ್ಷೆಗಳು ಸಮೀಪಿಸುತ್ತಿದ್ದು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದರು.
ವಕೀಲರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ನೀವು ವಿಚಾರಣೆಗಾಗಿ ಕೊನೆ ಘಳಿಗೆಯಲ್ಲಿ ನ್ಯಾಯಾಲಯದ ಮುಂದೆ ಬಂದಿದ್ದೀರಿ. ಹೋಳಿ ಹಬ್ಬದ ಬಳಿಕ ಬಳಿಕವೇ ಈ ಬಗ್ಗೆ ವಿಚಾರಣೆ ನಡೆಸಬಹುದೇ ಹೊರತು ತಕ್ಷಣದ ವಿಚಾರಣೆ ಸಾಧ್ಯವಿಲ್ಲ ಎಂದು ಮುಖ್ಯನ್ಯಾಯಮೂರ್ತಿಗಳು ತಿಳಿಸಿದರು.
ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ಕೋರಿ ವಿದ್ಯಾರ್ಥಿಗಳ ಗುಂಪು ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಫೆಬ್ರವರಿ 22 ರಂದು ಒಪ್ಪಿಕೊಂಡಿತ್ತು.
ವಿದ್ಯಾರ್ಥಿಗಳ ಪರವಾಗಿ ಹಾಜರಾದ ವಕೀಲ ಶಾದನ್ ಫರಾಸತ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಮಾರ್ಚ್ 9 ರಿಂದ ಪ್ರಾರಂಭವಾಗುವ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗಬೇಕಾಗಿದೆ ಎಂದು ವಿವರ ಸಲ್ಲಿಸಿದ್ದರು.
ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದಂತೆ ಏಕೆ ತಡೆಯಲಾಗಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು. ಬುರ್ಖಾ ಧರಿಸಿರುವುದರಿಂದ ವಿದ್ಯಾರ್ಥಿಗಳು ಈಗಾಗಲೇ ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಪರಿಹಾರ ದೊರೆಯದಿದ್ದಲ್ಲಿ ಅವರು ಮತ್ತೊಂದು ವರ್ಷವನ್ನು ಕಳೆದುಕೊಳ್ಳುತ್ತಾರೆ ಎಂದು ವಕೀಲರು ವಿವರಿಸಿದರು. ಮನವಿಯನ್ನು ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ.