ಬೆಂಗಳೂರು: ಇಂದು ನಗರದ ಫ್ರೀಡಂ ಪಾರ್ಕಿನಲ್ಲಿ ನೂರಾರು ಸಂಖ್ಯೆಯಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಐಡಿಎಸ್ಒ ಬೆಂಗಳೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಯು.ವಿ.ಸಿ.ಇ. ಅನ್ನು ಉಳಿಸಲು ವಿದ್ಯಾರ್ಥಿಗಳು ಒಂದಾಗಿ ಹೋರಾಟಕ್ಕೆ ಧುಮುಕಿದ್ದರು. ಯು.ವಿ.ಸಿ.ಇ. ಕುರಿತ ಇತ್ತೀಚಿನ ರಾಜ್ಯ ಸರ್ಕಾರದ ನಿರ್ಧಾರಗಳು ಕಾಲೇಜನ್ನು ಮತ್ತಷ್ಟು ಅಭಿವೃದ್ಧಿಗೆ ಒಯ್ಯುವ ಬದಲು, ಮತ್ತಷ್ಟು ಬಿಕ್ಕಟ್ಟಿಗೆ ಹಾಕುತ್ತಿದೆ, ಇದರ ವಿರುದ್ಧ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ತಮ್ಮ ಆಕ್ರೋಶ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯ ಮುಖ್ಯ ಭಾಷಣಕಾರರಾಗಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, “ಯು.ವಿ.ಸಿ.ಇ. ಕಾಲೇಜನ್ನು ಅಭಿವೃದ್ಧಿ ಮಾಡುವ ಅಥವಾ ಸ್ವಾಯತ್ತ ಸಂಸ್ಥೆ ಮಾಡುವುದು ಇಂದಿನ ಚರ್ಚೆ ವಿಷಯವಲ್ಲ. ಆದರೆ, ಇಂದು ನಮ್ಮ ವಿರೋಧ ಇರುವುದು ಅಭಿವೃದ್ಧಿ ಅಥವಾ ಸ್ವಾಯತ್ತತೆ ಹೆಸರಿನಲ್ಲಿ ಸರ್ಕಾರಿ ಕಾಲೇಜನ್ನು ಕ್ರಮೇಣ ಖಾಸಗಿ ಸಂಸ್ಥೆ ಮಾಡುವ ಸರ್ಕಾರದ ಹುನ್ನಾರದ ವಿರುದ್ಧ. ಸರ್ಕಾರಿ ಕಾಲೇಜಿಗೆ ಹಣ ಒದಗಿಸದೆ, ಉಪನ್ಯಾಸಕರಿಗೆ ಸಂಬಳ ನೀಡದೆ, ಕಾಲೇಜಿನ ಒಟ್ಟಾರೆ ಶೈಕ್ಷಣಿಕ ಬೆಳವಣಿಗೆಗೆ ಕ್ರಮಗಳನ್ನು ತೆಗೆದುಕೊಳ್ಳದೆ ತನ್ನ ಜವಾಬ್ದಾರಿಯನ್ನು ಸರ್ಕಾರ ಸಂಪೂರ್ಣ ಮರೆತಿದೆ. ದೇಶದ ಮಹಾನ್ ಕ್ರಾಂತಿಕಾರಿಗಳು, ಸ್ವಾತಂತ್ರ ಹೋರಾಟಗಾರರ ಅಶಯವು ನೆಲಕಚ್ಚಲು ನಾವು ವಿದ್ಯಾರ್ಥಿಗಳು ಬಿಡಬಾರದು. ಯು.ವಿ.ಸಿ.ಇ. ಕಾಲೇಜನ್ನು ಮುಂದಿನ ಪೀಳಿಗೆಗೆ ಉಳಿಸಲು ನಾವು ಹೋರಾಟ ಬೆಳೆಸಬೇಕು” ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಮತ್ತೊಬ್ಬ ಭಾಷಣಕಾರರಾಗಿ ಮಾತನಾಡಿದ ಎಐಡಿಎಸ್ಒ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಅಭಯಾ ದಿವಾಕರ್, “ಯು.ವಿ.ಸಿ.ಇ. ಅನ್ನು ಐ.ಐ.ಟಿ. ‘ರೀತಿ’ ಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದಾಗಿನಿಂದ, ಕಾಲೇಜು ಒಂದರ ಮೇಲೊಂದು ಬಿಕಟ್ಟನ್ನು ಎದುರಿಸುತ್ತಲೇ ಇದೆ. ಮೊದಲು ಕಾಲೇಜನ್ನು ಸ್ವಯಂ ಹಣಕಾಸು ನಿರ್ವಹಣಾ (ಆರ್ಥಿಕವಾಗಿ ಸ್ವಾಯತ್ತ) ಸಂಸ್ಥೆಯಾಗಿ ಮಾಡುತ್ತೇವೆ ಎಂದು ಹೇಳಿದರು. ಅದರ ನೇರ ಪರಿಣಾಮವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಭಾರಿ ಶುಲ್ಕ ಏರಿಕೆ ಆಗುತ್ತದೆ. ಎರಡನೆಯದಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿದ್ದ ಯು.ವಿ.ಸಿ.ಇ. ಅನ್ನು ಅದರಿಂದ ಬೇರ್ಪಡಿಸಿತು. ಈಗ ಸರ್ಕಾರವು ಕಾಲೇಜು ನಿರ್ವಹಣೆಗೆ ಹಣ ನೀಡಿಲ್ಲ.
ಬೆಂಗಳೂರು ವಿಶ್ವವಿದ್ಯಾಲಯವು ಕಾಲೇಜಿನ ಸಿಬ್ಬಂದಿಗಳಿಗೆ ನೀಡಲು ತಮ್ಮ ಬಳಿ ಹಣವಿಲ್ಲ ಹಾಗಾಗಿ ಮಾರ್ಚ್ ತಿಂಗಳಿನಿಂದ ಸಂಬಳ ನೀಡಲಾಗುವುದಿಲ್ಲ ಎಂದು ನಿರ್ಧರಿಸಿದೆ. ಈ ನಿರ್ಧಾರವು ಸಾವಿರಾರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಜೀವನವನ್ನು ಬಿಕ್ಕಟ್ಟಿಗೆ ಮತ್ತು ಅನಿಶ್ಚಿತತೆಗೆ ತಳ್ಳಿದೆ. ಸಿಬ್ಬಂದಿಗಳ ಸಂಬಳವನ್ನು ನೀಡಲು ಸಹ ಸರ್ಕಾರವು ಯು.ವಿ.ಸಿ.ಇ. ಗಾಗಲಿ ಅಥವಾ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಣ ಮಂಜೂರು ಮಾಡಿಲ್ಲ. ಈ ಬೆಳವಣಿಗೆಗಳು ಸಾವಿರಾರು ವಿದ್ಯಾರ್ಥಿಗಳಲ್ಲಿ ಮತ್ತು ಕಾಲೇಜು ಸಿಬ್ಬಂದಿಗಳಲ್ಲಿ ಅತೀವ ಆತಂಕ ಮತ್ತು ಭವಿಷ್ಯದ ಕುರಿತ ಅಭದ್ರತೆಯನ್ನು ಸೃಷ್ಠಿ ಮಾಡಿದೆ.” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಕಲ್ಯಾಣ್ ಕುಮಾರ್ ವಹಿಸಿದ್ದರು. ಅವರು “ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ಮಹತ್ತರ ಉದ್ದೇಶದಿಂದ ಸರ್. ಎಂ. ವಿಶ್ವೇಶ್ವರಯ್ಯ ಅವರು ಕಾಲೇಜನ್ನು ಸ್ಥಾಪನೆ ಮಾಡಿದರು. ಆ ಮಹಾನ್ ಉದ್ದೇಶಕ್ಕೆ ಚ್ಯುತಿ ಬರದಂತೆ ಸರ್ಕಾರವು ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿ ವಹಿಸಬೇಕು. ಮತ್ತು ಇಂತಹ ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಒಂದಾಗಿ ಹೋರಾಟ ಬೆಳೆಸಬೇಕು ಎಂದು ಕರೆ ನೀಡಿದರು.