News Kannada
Saturday, June 03 2023
ಬೆಂಗಳೂರು ನಗರ

ನಂದಿನಿ ಸಂಸ್ಥೆ ಮುಳುಗಿಸಲು ಬಿಜೆಪಿ ಪ್ರಯತ್ನ: ಸಂಸದ ಡಿ.ಕೆ. ಸುರೇಶ್ ಆರೋಪ

The BJP is trying to sink karnataka's proud Nandini institution: D.K. Suresh
Photo Credit : News Kannada

ಬೆಂಗಳೂರು: ‘ಕನ್ನಡಿಗರು ಕಟ್ಟಿ ಬೆಳೆಸಿದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಮುಳುಗಿಸಿರುವ ಬಿಜೆಪಿ ಈಗ ಕನ್ನಡಿಗರ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಹಾಳು ಮಾಡಲು ಮುಂದಾಗಿದೆ ಎಂದು  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ವಾಗ್ದಾಳಿ ನಡೆಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡಿದ ಸುರೇಶ್ ಅವರು  ‘ನಾವೆಲ್ಲರೂ ಚುನಾವಣೆ ಸಮಯದಲ್ಲಿದ್ದೇವೆ. ಜನರ ದೃಷ್ಟಿ ರಾಜಕಾರಣದತ್ತ ಇರುತ್ತದೆ. ಈ ಸಂದರ್ಭದಲ್ಲಿ ರಾಜ್ಯದೊಳಗೆ ಬೇರೆ ಬೇರೆ ರೂಪದಲ್ಲಿ ನುಸುಳಲು ಪ್ರಯತ್ನವಾಗುತ್ತಿದೆ. ಇವರ ಪಾಲಿಗೆ ಕನ್ನಡಿಗರು ಎಂದರೆ  ಇಷ್ಟೊಂದು  ಕೀಳು ಮನೋಭಾವನೆಯೇ? ಕನ್ನಡಿಗರು, ಕನ್ನಡದ ರೈತರು ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ಅಭೂತಪೂರ್ವ ಸಾಧನೆ ಮಾಡಿದ್ದು ಕರ್ಣಾಟಕ. ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಆರಂಭಿಸಿದ್ದವರು ಕನ್ನಡಿಗರು ಎಂದರು.

ದೇಶದಲ್ಲಿ ಸಹಕಾರಿ ಚಳವಳಿ ಮೂಲಕ ಅತ್ಯುತ್ತಮವಾದ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಕೃಷಿ ಪತ್ತಿನ ಬ್ಯಾಂಕುಗಳನ್ನು ಕರ್ನಾಟಕ ಸ್ಥಾಪಿಸಿತ್ತು. ರೈತರಿಗೆ ನೆರವಾಗಲು ರಾಜ್ಯದಲ್ಲಿ ಕರ್ನಾಟಕ ಹಾಲು ಒಕ್ಕೂಟವನ್ನು ಸ್ಥಾಪಿಸಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ನಡೆದಿದೆ.

ರಾಜ್ಯದಲ್ಲಿ 28 ಲಕ್ಷ ರೈತ ಕುಟುಂಬಗಳು ಕ್ಷೀರ ಕ್ಷೇತ್ರವನ್ನು ಅವಲಂಬಿಸಿವೆ. ಅವರಿಗೆ ಇದರಿಂದ ಹೆಚಿನ ಆದಾಯ ಸಿಗದಿದ್ದರೂ ಪ್ರತಿ ಹದಿನೈದು ದಿನಕ್ಕೆ ಅವರಿಗೆ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 2.50 ಲಕ್ಷ ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರಾಥಮಿಕ ಹಾಲು ಸಹಕಾರ ಸಂಘಗಳ ಮೂಲಕ ಸುಮಾರು 50 ಸಾವಿರ ಜನ ಉದ್ಯೋಗ ನಂಬಿಕೊಂಡು ಬದುಕುತ್ತಿದ್ದಾರೆ.

ಕರ್ನಾಟಕದ ಮೇಲೆ ಕೆಲವರು ಕಣ್ಣು ಹಾಕಿದ್ದು, ಚುನಾವಣೆ ಸಮಯದಲ್ಲಿ ಕರ್ನಾಟಕದೊಳಗೆ ನುಸುಳಲು ಬಿಲ ಹುಡುಕುವ ಕೆಲಸ ಮಾಡುತ್ತಿದ್ದಾರೆ.  ಅಮೂಲ್ ಎಂಬ ಸಹಕಾರಿ ಸಂಸ್ಥೆ ಮೂಲಕ ಈ ಕೆಲಸ ನಡೆಯುತ್ತಿದೆ ಎಂದರು.

ಸಹಕಾರ ಎಂದರೆ ಒಬ್ಬರಿಗೊಬ್ಬರು ಕೈಜೋಡಿಸಿ ಬೆಂಬಲ ನೀಡುವುದು, ಬಾಂಧವ್ಯ ಸೃಷ್ಟಿಸುವುದು. ಒಂದು ರಾಜ್ಯದ ಸಹಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳ ಜತೆ ಪೈಪೋಟಿ ನಡೆಸುವುದರ ಜತೆಗೆ ಬೇರೊಂದು ರಾಜ್ಯದ ಸಹಕಾರಿ ಸಂಸ್ಥೆ ಜತೆಗೆ ಸ್ಪರ್ಧೆ ಮಾಡಬೇಕಾ? ಬೇರೆ ರಾಜ್ಯದ ಸಹಕಾರ ಸಂಸ್ಥೆ ಕನ್ನಡಿಗರು ಕಟ್ಟಿ ಬೆಳೆಸಿರುವ ಸಂಸ್ಥೆಯ ನಿಯಂತ್ರಣ ಬೇರೆಯವರಿಗೆ ಹೋಗಬೇಕೆ ಎಂಬುದನ್ನು ಚಿಂತಿಸಬೇಕಿದೆ ಎಂದರು.

ನಂದಿನಿ ಉತ್ಪನ್ನ ತನ್ನ ಗುಣಮಟ್ಟದಿಂದ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಹಾಲು ಉತ್ಪಾದನೆಯಲ್ಲಿ ನಾವು ನಂದಿನಿ ಮೂಲಕ ಸ್ವಾವಲಂಬನೆ ಸಾಧಿಸಿದ್ದೇವೆ. ಈ ಮಧ್ಯೆ ಅಮೂಲ್  ಉತ್ಪನ್ನಗಳಿಂದ ಏನನ್ನು ಸಾಧಿಸಲು ಮುಂದಾಗಿದ್ದಾರೆ? ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲಿ ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕೋವಿಡ್ ಸಂದರ್ಭದಲ್ಲಿ ಬರಲಿಲ್ಲ. ಈಗ ಚುನಾವಣೆ ನಡೆಯುವ ಸಂದರ್ಭದಲ್ಲಿ ಬಂದು ನಮ್ಮ ಒಕ್ಕೂಟ ವ್ಯವಸ್ಥೆ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಕೆಎಂಎಫ್ ನಲ್ಲಿ ಯಾವ ಲೋಪ ಕಂಡು ಕೇಂದ್ರ ಸರ್ಕಾರ ನಂದಿನಿ ಮೇಲೆ ದಬ್ಬಾಳಿಕೆ ನಡೆಸುತ್ತಿದೆ? ನಂದಿನಿ ಸಂಸ್ಥೆ ಮೂಲಕ 160 ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಸರ್ಕಾರ ರಾಜ್ಯದಲ್ಲಿ ಕೃತಕವಾಗಿ ಹಾಲಿನ ಕೊರತೆ ಸೃಷ್ಟಿಸುತ್ತಿರುವುದೇಕೆ? ನಮ್ಮಲ್ಲಿ ಹಾಲಿಗೆ ಯಾವುದೇ ಅಭಾವವಿಲ್ಲ. ಈ ರಾಜ್ಯದಲ್ಲಿ ಎಂದಿಗೂ ಹಾಲಿನ ಕೊರತೆ ಇರಲಿಲ್ಲ. ಕೇಂದ್ರ ಸಹಕಾರಿ ಸಚಿವರು ಯಾವತ್ತೂ ನಮ್ಮ ಹಾಲು ಸಹಕಾರ ಸಂಸ್ಥೆ ಮೇಲೆ ಕಣ್ಣು ಇಟ್ಟರೋ ಅಂದಿನಿಂದ ರಾಜ್ಯದಲ್ಲಿ ಹಾಲಿನ ಅಭಾವ ಸೃಷ್ಟಿಯಾಗಿದೆ. ಅಂದಿನಿಂದ ನಿಂದಿನಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಿ, ನಂದಿನಿಯನ್ನು ಮುಳುಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

See also  ಮಂಗಳೂರು: ಉತ್ತರ ವಾರ್ಡಿನ ಈಡನ್ ಕ್ಲಬ್ ರಸ್ತೆ ಅಭಿವೃದ್ಧಿಗೆ ವೇದವ್ಯಾಸ್ ಕಾಮತ್ ಅವರಿಂದ ಭೂಮಿಪೂಜೆ

ಗ್ರಾಹಕರು ಹಾಗೂ ರೈತರ ದೃಷ್ಟಿಯಿಂದ ಹಾಲಿನ ದರವನ್ನು 37 ರೂ. ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಅದೇ ಹಾಲನ್ನು 54-60 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ 45 ವರ್ಷಗಳಲ್ಲಿ ನಮ್ಮ ಹಾಲಿನ ಗುಣಮಟ್ಟದಲ್ಲಿ ಎಂದಾದರೂ ಕೊರತೆ ಎದುರಾಗಿದೆಯಾ? ಬೆಲೆ ಏರಿಕೆಯನ್ನು ತಡೆಯಲಾಗದ ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ಬೇರೆಯವರನ್ನು ಕರೆತಂದು ಕ್ಷೀರ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ಮಾಡುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿ, ರಾಜ್ಯದ ಸಹಕಾರಿ ಸಚಿವರುಗಳ ಬಳಿ ಹಾಲಿಗೆ ಪ್ರೋತ್ಸಾಹ ಧನವಾಗಿ 5 ರೂ. ಹೆಚ್ಚಾಗಿ ನೀಡುವಂತೆ ಕೇಳಿದೆವು. ಆದರೆ ಸರ್ಕಾರ ಅನುಮತಿ ನೀಡಲಿಲ್ಲ. ಆದರೆ ಕೇಂದ್ರ ನಾಯಕರನ್ನು ಓಲೈಸಲು ಈ ಸರ್ಕಾರ, ನಮ್ಮ ಸಂಸ್ಥೆ ಮುಳುಗಿಸಿ ಬೇರೆಯವರು ರಾಜ್ಯದ ಮಾರುಕಟ್ಟೆ ಪ್ರವೇಶಿಸಲು ಅನುಮತಿ ನೀಡಿದೆ. ಆಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದು ರೈತರನ್ನು ಬಲಿ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿಯವರು ವ್ಯಾಪಾರಸ್ಥರು ಎಂಬುದು ಗೊತ್ತಿದೆ. ಅವರು ವ್ಯಾಪಾರ ಮಾಡದೇ ಇರುವ ವಿಚಾರವೇ ಇಲ್ಲ. ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡೆ ಅಧಿಕಾರ ಮಾಡುತ್ತಿದ್ದಾರೆ. ಇಡೀ ವ್ಯವಸ್ಥೆ ವ್ಯಾಪಾರಿಕರಣ ಮಾಡಿ, ತೆರಿಗೆ ಮೇಲೆ ತೆರಿಗೆ ಹಾಕಲಾಗಿದೆ. ರೈತರಿಗೆ ಸ್ವಾವಲಂಬನೆಯ ಬದುಕು ನೀಡಲಾಗದೆ, ಎಲ್ಲವನ್ನು ತಮ್ಮ ಹಿಡಿತಕ್ಕೆ  ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯೇ? ಕನ್ನಡಿಗರು ಯಾವ ಅನ್ಯಾಯ ಮಾಡಿದ್ದಾರೆ ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಿಎಸ್ ಟಿ ಮೂಲಕ ತಮ್ಮ ಖಜಾನೆ ತುಂಬಿಸಿಕೊಳ್ಳಲು ಕರ್ನಾಟಕ ಬೇಕು, ಆದರೆ ಈ ರಾಜ್ಯದ ಹಿತಾಸಕ್ತಿ ಮಾತ್ರ ಕಾಪಾಡಲು ಆಸಕ್ತಿ ಇಲ್ಲ. ಈ ರಾಜ್ಯವನ್ನು ಕೇವಲ ಶೇ 40 ಕಮಿಷನ್ ಪಡೆಯಲು ಮಾತ್ರ ಸೀಮಿತಗೊಳಿಸಿದ್ದೀರಿ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿ, ರೈತರು ಆತ್ಮಹತ್ಯೆಗೆ ಮುಂದಾದರೆ ಅದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಬಿಜೆಪಿ ಗೊಂದಲ ಸೃಷ್ಟಿಸಿ ಖಾಸಗೀಕರಣ ಮಾಡಲು ಮುಂದಾಗಿದೆ. ಬಿಜೆಪಿಯವರು ವಿಮಾನ ನಿಲ್ದಾಣ, ರೈಲ್ವೇ, ಬಂದರು, ವಿಮಾ ಕಂಪನಿ ಎಲ್ಲವನ್ನು ವ್ಯಾಪಾರಕ್ಕೆ ಇಟ್ಟಿದ್ದಾರೆ. ದಯಮಾಡಿ ಕನ್ನಡಿಗರ ನಂದಿನಿ ಸಂಸ್ಥೆಯನ್ನು ಮಾರಾಟಕ್ಕೆ ಇಡಬೇಡಿ. ರೈತರು ಈ ಸಂದರ್ಭದಲ್ಲಿ ಎಚ್ಛೆತ್ತುಕೊಳ್ಳದಿದ್ದರೆ ಕರ್ನಾಟಕವನ್ನು ಒಂದಲ್ಲಾ ಒಂದು ದಿನ ತಮಗೆ ಬೇಕಾದವರಿಗೆ ಮಾರಾಟ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಗೌರವ ಇದ್ದರೆ, ಸಿಆರ್ ಪಿಎಫ್ ನಲ್ಲಿ 1.50 ಲಕ್ಷ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ. ಅದನ್ನು ಬಿಟ್ಟು ಮತ ಹಾಕಿಸಿಕೊಂಡು ದಾರಿತಪ್ಪಿಸಬೇಡಿ.

ನೀವು ನರೇಂದ್ರ ಮೋದಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ತೋರಿಸುವುದೇ ಆದರೆ, ಈ ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೂ ನರೇಂದ್ರ ಮೋದಿ ಅವರೇ ಕಾರಣ ಎಂಬುದನ್ನು ಸ್ಪಷ್ಟಪಡಿಸಿ ಎಂದು ಆರೋಪಿಸಿದರು.

ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್ ಮಾತನಾಡಿರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಎಲ್ಲಾ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳನ್ನು ಕಬಳಿಸುವ ಪ್ರಯತ್ನ ಮಾಡುತ್ತಿದೆ. ಎಲ್ಲವನ್ನೂ ಪೂರ್ವಯೋಜಿತವಾಗಿ ಮಾಡುತ್ತಿದೆ. ಇವರ ಮುಂದಿನ ಗುರಿ ನಂದಿನಿ ಸಂಸ್ಥೆಯಾಗಿದೆ.

See also  ಹೊಸ ವರ್ಷಾಚರಣೆಗೆ ಟಫ್‌ ರೂಲ್ಸ್:‌ ಮಾಲ್‌, ರೆಸ್ಟೋರೆಂಟ್‌ ಎಲ್ಲವೂ ಬಂದ್

ಸಿಆರ್ ಪಿಎಫ್ ದೇಶದಲ್ಲಿ 1.30 ಲಕ್ಷಕ್ಕೂ ಹೆಚ್ಚು ಕಾನ್ಸ್ಟೇಬಲ್ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ ರಾಜ್ಯದಲ್ಲಿ 466 ಕಾನ್ಸ್ಟೇಬಲ್ ನೇಮಕ ಮಾಡಬೇಕಿದೆ. ಈ ಹುದ್ದೆ ಪಡೆಯಬೇಕಾದರೆ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು. ಅಮಿತ್ ಶಾ ಅವರೇ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುತ್ತಿಲ್ಲ ಯಾಕೆ? ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಮೂಲತತ್ವಕ್ಕೆ ಧಕ್ಕೆ ತರುತ್ತಿರುವುದೇಕೆ? ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವುದೇಕೆ?

ಈ ಅಧಿಸೂಚನೆ ಪರಿಶೀಲಿಸಿದರೆ, ಇದರಲ್ಲಿ 125 ಅಂಕಗಳಿಗೆ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಮಾತ್ರ ಉತ್ತರಿಸಬೇಕು. ಉಳಿದ ಕಂಪ್ಯೂಟರ್ ಪರೀಕ್ಷೆಗಳು ಕೂಡ ಈ ಎರಡು ಭಾಷೆಯಲ್ಲಿ ಮಾತ್ರ ಬರೆಯಬೇಕು.

ಮುಂದಿನ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಸರ್ಕಾರ ನಂದಿನಿ ಸಂಸ್ಥೆ ಗುರಿಯಾಗಿಸುವುದಾಗಲಿ, ಅಥವಾ ಕೇಂದ್ರದ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನ್ಯಾಯ ಮಾಡಿದರೆ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಕರ್ನಾಟಕದಿಂದ ಆಯ್ಕೆಯಾಗಿರುವ 25 ಸಂಸದರು ನಂದಿನಿ ಸಂಸ್ಥೆ ವಿರುದ್ಧದ ಪಿತೂರಿಗೆ ಸಹಕಾರ ನೀಡುತ್ತಿದ್ದಾರೆ. ಅವರ ಉದ್ದೇಶವಾದರೂ ಏನು? ಈ ಅನ್ಯಾಯದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸುವ ಧೈರ್ಯ ಯಾವ ಬಿಜೆಪಿ ಸಂಸದರಿಗೂ ಇಲ್ಲವಾಗಿದೆ.

ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ  ಅಮೂಲ್ ಹಾಗೂ ಕೆಎಂಎಫ್ ಎರಡೂ ಕೂಡ ಸಹಕಾರಿ ಸಂಸ್ಥೆಗಳು. ಇವೆರಡರ ನಡುವೆ  ಬಿಜೆಪಿ ಸರ್ಕಾರ ಒಡಕು ಮೂಡಿಸುತ್ತಿದೆ.  ಮಾರುಕಟ್ಟೆಯಲ್ಲಿ ಇವರಿಬ್ಬರೂ ಸಂಘರ್ಷ ಮಾಡಲು ಬಿಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ನಂದಿನಿ ಚಿಹ್ನೆಯನ್ನೇ ತೆಗೆಯಲು ಮುಂದಾಗಿತ್ತು. ಆಗ ನಾವು ಹೋರಾಟ ಮಾಡಿ ನಮ್ಮ ಚಿಹ್ನೆ ಉಳಿಸಿಕೊಂಡಿದ್ದೆವು. ಈಗ ಈ ಬಿಜೆಪಿ ಸರ್ಕಾರ ಬಂದ ನಂತರ ಹೈನುಗಾರಿಕೆಗೆ ಕಿಂಚಿತ್ತೂ ಸಹಕಾರ ನೀಡಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಶಾಲಾ ಮಕ್ಕಳಿಗೆ ಹಾಲು ನೀಡಿದರು, ರೈತರಿಗೆ ಪ್ರೋತ್ಸಾಹ ಧನ ನೀಡಿದರು. ಪ್ರತಿ ವರ್ಷ ರೈತರಿಗೆ ಬೆಲೆ ಹೆಚ್ಚಿಸಿದರು ಎಂದರು.

ಚುನಾವಣೆ ಕಾರಣಕ್ಕೆ ಈ ವಿಚಾರವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅವರು, ‘ನಾವು ರಾಜಕೀಯವಾಗಿ ಮಾತನಾಡುತ್ತಿಲ್ಲ. ಇದರಲ್ಲಿ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಅಮಿತ್ ಶಾ ಅವರು ಮಂಡ್ಯಕ್ಕೆ ಬಂದು ನಂದಿನಿ ಹಾಗೂ ಅಮೂಲ್ ವಿಲೀನದ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಅಮೂಲ್ 8 ರಾಜ್ಯಗಳಲ್ಲಿ 2.60 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ ನಂದಿನಿ ಸಂಸ್ಥೆ 95 ಲಕ್ಷ ಲೀ. ಹಾಲು ಉತ್ಪಾದನೆ ಮಾಡುತ್ತಿದೆ. ಅಲ್ಲದೆ ನಂದಿನಿ 160 ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿದೆ. ನಮಗೆ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದಿಂದ ಸಹಕಾರ ಸಿಗಬೇಕೇ ವಿನಃ ಬೇರೊಂದು ಸಂಸ್ಥೆಯನ್ನು ನಮ್ಮ ಮೇಲೆ ಹಾಕಲು ಮುಂದಾಗಿದೆ. ಈ ಮೂಲಕ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವವರು ಯಾರು ಎಂದು ನೀವೇ ನಿರ್ಧರಿಸಿ’ ಎಂದು ತಿಳಿಸಿದರು.

ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಮೂಲ್ ಮಾರಾಟಕ್ಕೆ ಅವಕಾಶ ಇರುವಾಗ ಕಾಂಗ್ರೆಸ್ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೇಳಿದಾಗ, ‘ತಮಿಳುನಾಡಿನ ಯಾವುದೇ ಸಹಕಾರಿ ಸಂಸ್ಥೆಗಳು ಇಲ್ಲಿ ಬಂದು ಸ್ಪರ್ಧೆ ಮಾಡುತ್ತಿಲ್ಲ. ಖಾಸಗಿಯ 8 ಸಂಸ್ಥೆಗಳು ಮಾರಾಟ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಖಾಸಗಿಯವರ ಜತೆ ಪೈಪೋಟಿ ಮಾಡಬೇಕಿದೆ. ಆದರೂ ನಮ್ಮ ಸಂಸ್ಥೆ ಆರೋಗ್ಯಕರವಾಗಿ, ಆರ್ಥಿಕವಾಗಿ ಸಧೃಡವಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು