ಬೆಂಗಳೂರು: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಜೆಡಿಎಸ್ ಕಿಂಗ್ಮೇಕರ್ ಆಗುವ ಸಾಧ್ಯತೆ ಇದೆ. ಜೆಡಿಎಸ್ ವಿಧಾನಸಭೆ ಚುನಾವಣೆಯಲ್ಲಿ 30ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆ ನಾಯಕರಲ್ಲಿದೆ. ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗ ‘ಕಿಂಗ್ಮೇಕರ್’ ಆಗುವುದಷ್ಟೇ ಅಲ್ಲ, ‘ಕಿಂಗ್’ ಆಗಲು ಸಜ್ಜಾಗಿದ್ದಾರೆ.
ಚುನಾವಣೆಯ ನಂತರ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಮನೆ ಬಾಗಿಲಿಗೆ ಬರುತ್ತವೆ ಎಂದು ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಹೇಳಿಕೊಂಡಿದ್ದರು. ಪ್ರಸ್ತುತ ಕುಮಾರಸ್ವಾಮಿ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದು ಅಲ್ಲಿಂದಲೇ ರಾಷ್ಟ್ರೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಇಚ್ಛೆಯಂತೆ ಜೆಡಿಎಸ್ ಕಾಂಗ್ರೆಸ್ ಜೊತೆ ಹೋಗಲು ನಿರ್ಧರಿಸಿದ್ದು, ಅವರ ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೈತ್ರಿಗೆ ಅಡ್ಡಗಾಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹ್ಮದ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಮೈತ್ರಿ ಕುರಿತಂತೆ ತಮ್ಮನ್ನು ಸಂಪರ್ಕಿಸಿವೆ ಎಂದು ಹೇಳಿದ್ದಾರೆ. ಆದರೆ ಕರ್ನಾಟಕದ ಒಳಿತಿಗಾಗಿ ನಾವು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.