ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಸಂಪುಟ ರಚನೆಯ ವಿಚಾರದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಕೇಳಿಬಂದಿದ್ದು ಹಲವರು ಪ್ರಮಾಣವಚನ ಸಮಾರಂಭಕ್ಕೆ ಗೈರಾಗಿದ್ದಾರೆ.
ಸಿದ್ದರಾಮಯ್ಯ ಕ್ಯಾಂಪ್ನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್, ಬಸವರಾಜ ರಾಯರೆಡ್ಡಿ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ ಕಾರ್ಯಕ್ರಮದಲ್ಲಿ ಎಲ್ಲಿಯೂ ಕಾಣಲಿಲ್ಲ.
ಇನ್ನು ಸಿದ್ದು ಆಪ್ತರಾದ ಕೆ.ಎನ್ ರಾಜಣ್ಣ, ಸಿದ್ದು ಶಿಷ್ಯ ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ತುಕಾರಾಮ್, ರಿಜ್ವಾನ್ ಅರ್ಷದ್ ಸೇರಿ ಹಲವು ಶಾಸಕರು ಕಾರ್ಯಕ್ರಮ ವೇದಿಕೆಯಲ್ಲಿ ಕಂಡು ಬರಲಿಲ್ಲ. ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆ ಬೇಸರಗೊಂಡ ಮಧು ಬಂಗಾರಪ್ಪ ಕೂಡ ಕಾರ್ಯಕ್ರಮದಿಂದ ದೂರ ಉಳಿದಿರುವುದು ಕಂಡು ಬಂದಿತ್ತು.
ಈ ಮಧ್ಯೆ, ಬುಧವಾರದ ಬಳಿಕ ಅಂದರೆ ಮೂರ ದಿನಗಳ ವಿಶೇಷ ಅಧಿವೇಶನದ ಬಳಿಕ ದೆಹಲಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಈ ಸಂದರ್ಭದಲ್ಲಿ ಸಂಪುಟ ರಚನೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದುಬಂದಿದೆ.