News Kannada
Tuesday, September 26 2023
ಬೆಂಗಳೂರು

ಬೆಂಗಳೂರು: ನಾಳೆಯೇ ಜಾರಿಯಾಗುತ್ತಾ ಕಾಂಗ್ರೆಸ್‌ ಗ್ಯಾರಂಟಿ?

M discusses guarantee schemes
Photo Credit : Facebook

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ್ದ ಐದು ಗ್ಯಾರಂಟಿಗಳು ಈಗ ಬಹಳ ಚರ್ಚೆಯ ವಿಷಯ. ಈ ಗ್ಯಾರಂಟಿಗಳು ಯಾವಾಗ ಜಾರಿಯಾಗುತ್ತವೆ ಎಂದು ಜನರು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ವಿಪಕ್ಷಗಳು ಕೂಡ ಪದೇ ಪದೆ ಗ್ಯಾರಂಟಿ ಯಾವಾಗ ಎಂದು ಸರಕಾರದ ಕಾಲೆಳೆಯುತ್ತಿವೆ. ಐದು ಭರ್ಜರಿ ಗ್ಯಾರಂಟಿಗಳನ್ನು ಘೋಷಿಸಿದ ಪರಿಣಾಮ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ.

ಮೊದಲ ಸಂಫುಟ ಸಭೆಯಲ್ಲೇ ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ನಾಯಕರು ಪ್ರಚಾರ ಸಭೆಯಲ್ಲಿ ಸಾರಿದ್ದರು. ಆದರೆ ಮೊದಲ ಸಂಪುಟ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ಮಾತ್ರ ಆಗಿದೆ. ಎರಡನೇ ಸಂಪುಟ ಸಭೆಯನ್ನು ಗ್ಯಾರಂಟಿ ಕುರಿತು ಒಮ್ಮತ ಮೂಡದ ಕಾರಣಕ್ಕೆ ಶುಕ್ರವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ನಾಳೆ ನಡೆಯಲಿರುವ ಸಂಪುಟ ಸಭೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 20 ದಿನಗಳೇ ಕಳೆಯುತ್ತಾ ಬಂದಿದೆ. ಅದರಲ್ಲೂ ಸರ್ಕಾರ ರಚನೆಯಾಗಿ 11 ದಿನಗಳೇ ಆಗಿವೆ. ಸರ್ಕಾರ ಬಂದ ಮೊದಲ ಸಂಪುಟ ಸಭೆಯಲ್ಲಿಯೇ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಚುನಾವಣೆ ಸಭೆಗಳಲ್ಲಿ ಪಕ್ದದ ನಾಯಕರು ಗಟ್ಟಿ ಧ್ವನಿಯಲ್ಲೇ ಹೇಳಿದ್ದರು. ಸರ್ಕಾರ ರಚನೆಯಾಗಿ ಈಗಾಗಲೇ ಎರಡು ಸಂಪುಟ ಸಭೆಗಳು ನಡೆದಿವೆ. ಇನ್ನೂ ಈ ಕುರಿತು ಅಧಿಕಾರಿಗಳ ಹಂತದಲ್ಲಿ ಚರ್ಚೆಗಳು ನಡೆದಿವೆಯೇ ಹೊರತು ಯಾವುದೇ ಗ್ಯಾರಂಟಿ ಜಾರಿಯಾಗಿಲ್ಲ. ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಕುರಿತು ಯಾವ ತೀರ್ಮಾನಗಳು ಆಗಬಹುದು ಎನ್ನುವ ದೊಡ್ಡ ನಿರೀಕ್ಷೆ ಜನರಲ್ಲಿದೆ.

ಕಾಂಗ್ರೆಸ್‌ ಘೋಷಿಸಿರುವ ಈ ಗ್ಯಾರಂಟಿಗಳನ್ನು ಜಾರಿಗೊಳಿಸಲು ಹಿಂದೇಟು ಹಾಕಿದರೆ ಅಥವಾ ಮಾನದಂಡಗಳನ್ನು ಹಾಕಿ ನಿಯಂತ್ರಿಸಲು ಪ್ರಯತ್ನಿಸಿದರೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎನ್ನುವ ಆತಂಕ ಕಾಂಗ್ರೆಸ್‌ ನಾಯಕರಲ್ಲಿದೆ. ಇದರಿಂದ ಸರಕಾರ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

ಹಣಕಾಸು ಇಲಾಖೆ ಬೇಷರತ್‌ ಆಗಿ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಪರಿಸ್ಥಿತಿ ಹದಗೆಟ್ಟು ಹೋಗಬಹುದು ಎಂದು ಈಗಾಗಲೇ ಎಚ್ಚರಿಕೆ ನೀಡಿದೆ. ಆದರೆ ಗ್ಯಾರಂಟಿ ಘೋಷಿಸುವಾಗ ಎಲ್ಲರಿಗೂ ಫ್ರೀ ಎಂದಿರುವ ಕಾರಣ ಈಗ ಷರತ್ತು ವಿಧಿಸಿದರೆ ಸಾರ್ವಜನಿಕವಾಗಿ ಅಪಮಾನಕ್ಕೊಳಗಾಗುವ ಭೀತಿಯಿದೆ. ವಿಪಕ್ಷಗಳಿಗೆ ತಾನೇ ಕೈಯಾರೆ ದೊಡ್ಡ ಅಸ್ತ್ರ ಕೊಟ್ಟ ಹಾಗೇ ಅಗುತ್ತದೆ ಎನ್ನುವುದು ಕಾಂಗ್ರೆಸ್ಸಿನ ಆತಂಕ.

2013ರಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಅದೂ ತಾವೊಬ್ಬರೇ ಅಧಿಕಾರ ಸ್ವೀಕರಿಸಿದ ದಿನವೇ ಪ್ರಮುಖ ತೀರ್ಮಾನಗಳು ಆಗಿದ್ದವು. ಈಗ ಪೂರ್ಣ ಸಂಪುಟವಿದ್ದರೂ ತೀರ್ಮಾನ ಮಾತ್ರ ನಿಧಾನವಾಗುತ್ತಿದೆ ಏಕೆ ಎನ್ನುವ ಚರ್ಚೆಗಳೂ ನಡೆದಿವೆ.

ಇದರ ನಡುವೆ ಆರ್ಥಿಕ ಇತಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಮಾನದಂಡಗಳನ್ನು ರೂಪಿಸಿ ವಿದ್ಯುತ್‌, ಅಕ್ಕಿ, ಬಸ್‌ ಪ್ರಯಾಣದ ಮೂರು ಗ್ಯಾರಂಟಿಗಳನ್ನು ಶುಕ್ರವಾರವೇ ಜಾರಿಗೊಳಿಸಬಹುದು. ಯುವನಿಧಿ, ಮಹಿಳಾ ನಿಧಿ ಸೇರಿ ಇನ್ನೆರಡು ಗ್ಯಾರಂಟಿಗಳನ್ನು ಜಾರಿಗೊಳಿಸುವ ಸಂಬಂಧ ಕೆಲ ಸುತ್ತಿನ ಸಭೆ ನಡೆಸಿ ಮುಂದೆ ತೀರ್ಮಾನ ಮಾಡಬಹುದು. ಇದೇ ತಿಂಗಳು ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ ಆರ್ಥಿಕ ಹೊಂದಾಣಿಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದು ಎನ್ನುವ ಮಾಹಿತಿ ಇದೆ.

See also  ನವದೆಹಲಿ: 'ಭೀಮ್ಲಾ ನಾಯಕ್' ಹಿಂದಿ ಡಬ್ ಮೇಲಿನ ತಡೆಯಾಜ್ಞೆಯನ್ನು ತೆಗೆದುಹಾಕಿದ ದೆಹಲಿ ಹೈಕೋರ್ಟ್

ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸಿದ್ದಾರೆ. ಮಾನದಂಡಗಳು ಏನಿರಬೇಕು?, ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಘೋಷಣೆ ಮಾಡಿ ಹೇಗೆ ಜಾರಿಗೊಳಿಸಲಾಗಿದೆ?, ಆರ್ಥಿಕ ಹೊರೆ ಎಷ್ಟಾಗಬಹುದು, ಅದನ್ನು ಹೇಗೆ ಹೊಂದಿಸಬೇಕು. ತೆರಿಗೆ ಸುಧಾರಣೆ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಬೇಕೆ? ಇದಕ್ಕೆ ಸಾಲ ಪಡೆಯುವ ಪರಿಸ್ಥಿತಿ ಬರಬಹುದೇ ಎನ್ನುವ ಕುರಿತು ಅಧಿಕಾರಿಗಳಿಂದ ವಿವರ ಕಲೆ ಹಾಕಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗಳಲ್ಲಿ ಮುಖ್ಯವಾಗಿ 200 ಯೂನಿಟ್‌ವರೆಗೆ ವಿದ್ಯುತ್‌ ಗೃಹ ಬಳಕೆ ಉಚಿತ, ಬಿಪಿಎಲ್‌ ಕಾರ್ಡ್‌ದಾರರಿಗೆ 10 ಕೆಜಿ ಉಚಿತ ಅಕ್ಕಿ, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಮಾಸಿಕ 2000 ರೂ. ಸಹಾಯಧನ, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಯುವನಿಧಿ ಅಡಿ ಪದವೀಧರ ಯುವಕರಿಗೆ 3000 ರೂ. ಡಿಪ್ಲೊಮಾ ಪೂರೈಸಿದವರಿಗೆ 1500 ರೂ. ಸಹಾಯಧನ ನೀಡುವ ಘೋಷಣೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು