ಚಿತ್ರದುರ್ಗ: ಮಿನಿ ವಿಧಾನಸೌಧ ಎಂಬ ಹೆಸರಿನಲ್ಲಿ ಮಿನಿ ಎಂಬ ಆಂಗ್ಲ ಪದವಿದೆ. ಇದಕ್ಕೆ ಸಾಹಿತ್ಯ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಹೆಸರಿನ ಬದಲಾವಣೆಯ ಬಗ್ಗೆ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕು ಕಚೇರಿಯ ಕಟ್ಟಡಗಳಿಗೆ ಮಿನಿ ವಿಧಾನಸೌಧ ಎಂಬ ನಾಮಕರಣ ಮಾಡಲಾಗಿದೆ. ಅನೇಕ ಸಾಹಿತಿಗಳು ಇಂಗ್ಲಿಷ್ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ತಾಲ್ಲೂಕು ಆಡಳಿತ ಸೌಧ ಎಂಬ ಕನ್ನಡ ಹೆಸರು ಇಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಶೀಘ್ರ ಆದೇಶ ಹೊರಬೀಳಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ 9 ಲಕ್ಷ ಹೆಕ್ಟೇರ್ ಭೂಮಿಗೆ ಸಂಬಂಧಿಸಿ ಕಂದಾಯ ಹಾಗೂ ಅರಣ್ಯ ಇಲಾಖೆ ನಡುವೆ ವ್ಯಾಜ್ಯ ನಡೆಯುತ್ತಿದೆ. ಈ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಆರು ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವನ್ನು ಕಂದಾಯ ಇಲಾಖೆಗೆ ಒಪ್ಪಿಸುವ ಒಡಂಬಡಿಕೆ ಆಗಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ನೀಡಲು ಅನುಕೂಲವಾಗಲಿದೆ. ಉಳುಮೆ ಮಾಡುವವರಿಗೆ ಭೂಮಿ ಸಿಗಲಿದೆ ಎಂದು ಹೇಳಿದರು.