ಮುಳಬಾಗಿಲು: ಹೊಸತನಕೆ ಚಿಗುರು ಪದದ ಪ್ರತೀಕ, ಆದ್ದರಿಂದ ಪ್ರತಿಯೊಬ್ಬರಲ್ಲೂ ಸಹ ವಿಶಿಷ್ಟವಾದ ಹೊಸತನಕ್ಕೆ ಮೊದಲ ಆದ್ಯತೆಯನ್ನು ನೀಡುವುದಲ್ಲದೆ ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಶಾಸಕ ಹೆಚ್.ನಾಗೇಶ್ ಹೇಳಿದರು.
ತಾಲ್ಲೂಕಿನ ಮಲ್ಲನಾಯಕನಹಳ್ಳಿಯ ಜೆ.ಅಗ್ರಹಾರ ಬಳಿಯಿರುವ ವಾರಿಧಿ ವಿದ್ಯಾಸಂಸ್ಥೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ವಾರಿಧಿ ಎಜುಕೇ?ನಲ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಗುರು ಎಂಬ ಕಾರ್ಯಕ್ರಮ ಈ ದಿನ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಸರಿಯಾಗಿದೆ. ಇದೇ ರೀತಿಯಲ್ಲಿ ಮಕ್ಕಳಲ್ಲಿನ ಸೃಜನಾತ್ಮಕ ಕಲೆಗಳು ಚಿಗುರುವ ಪೂರಕ ವಾತಾವರಣ ಕಲ್ಪಿಸಬೇಕಿದೆ ಎಂದರು.
ಶಾಲಾ ಹಂತದಿಂದಲೇ ಮಕ್ಕಳನ್ನು ಕ್ಷೇತ್ರ ಪ್ರವಾಸವನ್ನು ಕೈಗೊಳ್ಳಬೇಕು. ಕೆರೆ, ಕಟ್ಟೆ, ದೇವಾಲಯ, ಕೋಟೆ, ಅರಮನೆ, ಬೃಹತ್ ಡ್ಯಾಂ, ಉದ್ದ ಮತ್ತು ಅಗಲವಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ, ಆರೋಗ್ಯ ಸೇರಿದಂತೆ ಮೊದಲಾದವುಗಳನ್ನು ನೋಡಿದಾಗ ಮಗುವಿನಲ್ಲಿ ವೈದ್ಯ, ಇಂಜಿನಿಯರ್ ಮತ್ತಿತರರೆ ಅಧಿಕಾರಗಳನ್ನು ಪಡೆದುಕೊಳ್ಳಲು ಆಸೆ ಚಿಗುರುತ್ತದೆ. ಆಗ ಆ ಮಗುವು ಸಮಾಜದಲ್ಲಿ ಉನ್ನತರವಾದ ವ್ಯಕ್ತಿಯಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕರೋನಾ ಸಂಕಷ್ಟದಲ್ಲಿಯೂ ಸಹ ವಾರಿಧಿ ಶಾಲೆ ಕೆಲಸ ನಿರ್ವಹಿಸಿದೆ. ಅಲ್ಲದೆ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ನನ್ನ ಗಮನಕ್ಕೆ ಬಂದಿದೆ. ಇತರೆ ಖಾಸಗಿ ಶಾಲೆಗಳಿಗಿಂತ ವಾರಿಧಿ ಶಾಲೆ ವಿಭಿನ್ನವಾಗಿದೆ. ಆದ್ದರಿಂದ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹಕಾರವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ವಾರಿಧಿ ಶಾಲೆ ಅಧ್ಯಕ್ಷ ಮಂಜುನಾಥರೆಡ್ಡಿ ಮಾತನಾಡಿ, ಕಳೆದ 5ವರ್ಷಗಳಿಂದ ನಮ್ಮ ಸಂಸ್ಥೆ ಮಕ್ಕಳ, ಪೋಷಕರ ಹಾಗೂ ಸಮಾಜದ ವಿಷಯಗಳ ಬಗ್ಗೆ ಚಿಂತಿಸುತ್ತಾ ಮಹತ್ತರವಾದ ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡು ಯಾವುದೇ ರೀತಿಯ ಕುಂದುಕೊರತೆ, ಸಮಸ್ಯೆ ಮತ್ತು ಆರ್ಥಿಕ ಸಂಕಷ್ಟ ಎದುರಾದರೂ ಸಹ ಅವುಗಳನ್ನು ಮೀರಿ ಮಗುವಿನ ಶೈಕ್ಷಣಿಕ ಅಭಿವೃದ್ದಿಗೆ ಸತತ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಮಾವು ನಿಗಮ ಮಂಡಳಿ ಅಧ್ಯಕ್ಷ ಎಂ.ಕೆ.ವಾಸುದೇವ್, ತಾ.ಪಂ ಮಾಜಿ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಗ್ರಾ.ಪಂ ಅಧ್ಯಕ್ಷ ಬಿ.ಎಸ್.ರಮೇಶ್, ಬಿಇಒ ಗಂಗಾರಾಮಯ್ಯ ಮಾತನಾಡಿದರು. ಶಾಸ್ತ್ರೀಯ, ಸುಗಮ ಸಂಗೀತ, ಜಾನಪದ ಗೀತೆಗಳು, ಸಮೂಹ ನೃತ್ಯ, ಶಾಸ್ತ್ರೀಯ ನೃತ್ಯ, ನಾಟಕ, ಏಕಪಾತ್ರ ಅಭಿನಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾಗವಹಿಸಿದ್ದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು.