ಮಾಲೂರು: ತಾಲೂಕಿನ ತೊರ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಮಾಲೂರು ಕೆ ಎಸ್ ಆರ್ ಟಿ ಸಿ ಘಟಕದ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಎರಡು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿ ತೊರ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಮಾಲೂರು ಕೆ ಎಸ್ ಆರ್ ಟಿ ಸಿ ಘಟಕದ ವತಿಯಿಂದ ಬಸ್ ವ್ಯವಸ್ಥೆ ಇಲ್ಲದೆ ಜನರು ಕಷ್ಟ ಪಡುವ ಸ್ಥಿತಿಯಿದ್ದರೂ ಅಧಿಕಾರಿಗಳು ತಲೆಕೆಡಿಕೊಳ್ಳುತ್ತಿಲ್ಲ. ಸುಮಾರು 40 ವರ್ಷಗಳಿಂದ ಬಸ್ ಮಾರ್ಗ ಸಂಖ್ಯೆ-118 ಮಾಲೂರು- ರಾಮಸಂದ್ರ ಬಸ್ ಸಂಚಾರ ಮಾಡುತ್ತಿತ್ತು ಆದರೆ ಮಾಲೂರು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಇಲ್ಲ ಸಲ್ಲದ ನೆಪವೊಡ್ಡಿ ಹೇಳಿ ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಸುಮಾರು 10 ರಿಂದ 12 ಹಳ್ಳಿಗಳ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಇನ್ನು ಮಾಲೂರು ಘಟಕದ ವತಿಯಿಂದ ಬೆಳಿಗ್ಗೆ 10.30ಕ್ಕೆ ತೊರನಹಳ್ಳಿ ಮಾರ್ಗವಾಗಿ ಬರುತ್ತಿದ ಬಸ್ ಮಾರ್ಗ ಸಂಖ್ಯೆ 33 ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಇದರ ಜೊತೆ ಕೋಲಾರ ಘಟಕದ ಕೆ ಎಸ್ ಆರ್ ಟಿ ಸಿ ಬಸ್ಸನ್ನು ತೊರ್ನಹಳ್ಳಿಯ ಸಪಲಾಂಭ ದೇವಸ್ಥಾನದವರೆಗೂ ವಿಸ್ತರಿಸಬೇಕು ಎಂಬ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತೊರ್ನಹಳ್ಳಿ ಗ್ರಾಮದಲ್ಲಿನ ಸಾರ್ವಜನಿಕ ಆಸ್ಪತ್ರೆಗೆ, ಬ್ಯಾಂಕ್ ವಹಿವಾಟು ನಡೆಸಲು ಜನರು ಬರುತ್ತಾರೆ, ಮಾಲೂರು, ಕೋಲಾರ, ಹೊಸಕೋಟೆ ಕಡೆಗೆ ಪ್ರತಿದಿನ ಜನರು ಸಂಚಾರ ಮಾಡುತ್ತಾರೆ, ಪ್ರತಿ ಬುಧವಾರ ಸಾರ್ವಜನಿಕ ಸಂತೆ ರಾತ್ರಿ ೯ ಗಂಟೆ ತನಕ ನಡೆಯುತ್ತದೆ ಈ ರೀತಿ ಇದ್ದರೂ ಬಸ್ ವ್ಯವಸ್ಥೆ ಏಕೆ ಕಲ್ಪಿಸುತ್ತಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ.
ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಸುತ್ತಮುತ್ತಲಿನ ಹಳ್ಳಿಯ ಜನರು ಬರುತ್ತಾರೆ ಬಸ್ ವ್ಯವಸ್ಥೆ ಇಲ್ಲದೆ ಅವರಿಗೂ ಸಹ ಸಮಸ್ಯೆಯಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣವಾಗಿದ್ದು ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬಂದು ಹೋಗುತ್ತಾರೆ ಅಂತಹ ವಿದ್ಯಾರ್ಥಿಗಳು ಸಹ ಅನಾನುಕೂಲವಾಗುತ್ತಿದೆ.
ಮಾಲೂರು ಘಟಕದ ತೊರ್ನಹಳ್ಳಿ ಮಾರ್ಗದ ಬಸ್ 118 ಹಾಗೂ 33 ಅನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ಕೋಲಾರ ಘಟಕದ ಬಸ್ ಮಾರ್ಗ ಸಂಖ್ಯೆ 312ನ್ನು ತೊರ್ನಹಳ್ಳಿ ಸಪಲಾಂಭ ದೇವಾಲಯದ ವರೆಗೆ ವಿಸ್ತರಿಸಬೇಕು ಎಂದು ತೊರನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮತ್ತೆ ಇದೇ ರೀತಿ ನಿರ್ಲಕ್ಷ್ಯ ತೋರಿಸಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.