ರಾಮನಗರ: ಸರ್ಕಾರಿ ಶಾಲೆಗಳಲ್ಲಿ ಬಿಜೆಪಿ ಪಕ್ಷದ ಹಲವು ನಾಯಕರ ಮಕ್ಕಳು ಓದಿದ್ದಾರೆ. ಆದರೆ ಅವರ ಮನೆ ಮಕ್ಕಳು ಓದುತ್ತಿದ್ದಾರಾ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಯಾವ ಮುಖಂಡರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆಂದು ಕುಮಾರಸ್ವಾಮಿ ಅವರು ಇವತ್ತು ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಹಲವು ನಾಯಕರು ಸರ್ಕಾರಿ ಶಾಲೆಯಲ್ಲಿಯೇ ಓದಿದ್ದಾರೆ. ಈಗ ಅವರ ಮಕ್ಕಳು ಸಹ ಓದುತ್ತಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಯಿವೆ. ಶಾಲಾ ಕಾಲೇಜುಗಳಲ್ಲಿ ಶಾಂತಿ ಕಾಪಾಡಲು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ ಎಂದರು.
ಶಾಲಾ ಸಮವಸ್ತ್ರ ಕುರಿತಂತೆ 1995 ರಲ್ಲಿ ಕಾನೂನು ತಂದಿರುವವರು ಯಾರು? ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದೆ. ಅಲ್ಲಿ ಏನು ನಿಲುವು ತೆಗೆದುಕೊಂಡಿದ್ದಾರೆ. ಯಾವ ಶಾಲೆಯಾದರೂ ಸಹ ಅಲ್ಲಿ ಧಾರ್ಮಿಕ ಸಮವಸ್ತ್ರಕ್ಕೆ ಅವಕಾಶ ಇಲ್ಲ. ಸರ್ಕಾರಿ ಆಗಲಿ, ಖಾಸಗಿ ಶಾಲೆಯೇ ಆಗಲಿ ಅವಕಾಶ ಇಲ್ಲ.
ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರಿಗೂ ಈ ಕಾನೂನು ಅನ್ವಯವಾಗಲಿದೆ. ಎಲ್ಲದರಲ್ಲಿಯೂ ರಾಜಕೀಯ ಮಾಡುವುದನ್ನು ಬಿಟ್ಟು ಸ್ಪಷ್ಟ ನಿಲುವು ತೆಗೆದುಕೊಳ್ಳಲಿ. ನ್ಯಾಯಾಲಯ ಸ್ಪಷ್ಟ ನಿಲುವು ಕೊಟ್ಟಿದೆ. ಮಕ್ಕಳಲ್ಲಿ ಕುತೂಹಲ ಇರುತ್ತದೆ, ಯಾರೊ ಒಬ್ಬರು ಮಾಡುತ್ತಾರೆ ಅಂತಾ ಮಕ್ಕಳು ಸಹ ಅದನ್ನೇ ಮಾಡುತ್ತಾರೆ ಎಂದರು.
ಹಿಜಾಬ್ ಗಲಾಟೆಯ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಶಾಲಾ – ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇದು ಡಿಜಿಟಲ್ ಯುಗ, ಕಲಿಕೆಗೂ ಅಗತ್ಯತೆಯಿದ್ದು ಸಕಾರಾತ್ಮಕ ಹಾಗೂ ನಕಾರಾತ್ಮಕವೂ ಇದೆ. ಕೆಲವು ಚಟುವಟಿಕೆಗಳಿಗೆ ನಿರ್ಬಂಧ ತರುವುದನ್ನು ಮಾಡುತ್ತೇವೆ ಎಂದು ಅಶ್ವತ್ಥ ನಾರಾಯಣ ಹೇಳಿದರು.