ರಾಮನಗರ: ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇರೆಗೆ ಮಾಗಡಿಯ ಕೆಂಪೇಗೌಡ ಖಾಸಗಿ ಪ್ರೌಢಶಾಲೆಯ ಕ್ಲರ್ಕ್ ರಂಗೇಗೌಡ ಎಂಬುವವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಆರೋಪಿಯು ಪರೀಕ್ಷೆ ಅವಧಿಗೆ ಮುನ್ನವೇ ವಾಟ್ಸ್ಅಪ್ ಮೂಲಕ ಶಿಕ್ಷಕರು ಇರುವ ಗುಂಪೊಂದಕ್ಕೆ ಹಾಕಿದ್ದ.
ಬಳಿಕ ಅದನ್ನು ಡಿಲಿಟ್ ಸಹ ಮಾಡಿದ್ದ ಎನ್ನಲಾಗಿದೆ. ಮತ್ತೊಬ್ಬ ಶಿಕ್ಷಕರು ಇದನ್ನು ಗಮನಿಸಿದ್ದು, ನಂತರದಲ್ಲಿ ಇದೇ ವಿಚಾರವಾಗಿ ಶಿಕ್ಷಕ ಹಾಗೂ ಸ್ಥಳೀಯ ಪತ್ರಕರ್ತರೊಬ್ಬರು ಆತನನ್ನು ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ್ದರು ಎನ್ನಲಾಗಿದೆ.
ಪರೀಕ್ಷೆ ಮುಗಿದ ತಿಂಗಳ ಬಳಿಕ ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು, ಸೋಮವಾರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.