News Kannada
Thursday, November 30 2023
ರಾಮನಗರ

ರಾಮನಗರ: 52 ವರ್ಷಗಳ ಬಳಿಕ ಉಕ್ಕಿ ಹರಿದ ಅರ್ಕಾವತಿ ನದಿ

Ramanagara: Arkavathy river overflows after 52 years
Photo Credit : By Author

ರಾಮನಗರ: ಎಡೆಬಿಡದೆ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಅರ್ಕಾವತಿ ನದಿ ಸುಮಾರು 52 ವರ್ಷಗಳ ಬಳಿಕ ಪ್ರವಾಹೋಪಾದಿಯಲ್ಲಿ ಹರಿದಿದೆ. ಮಂಚನಬೆಲೆ  ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವುದರಿಂದ ಅರ್ಕಾವತಿ ನದಿ ಪಾತ್ರದ ಜಮೀನುಗಳು ಮುಳುಗಡೆ ಆಗಿದ್ದು ಜನ ಪರದಾಡುವಂತಾಗಿದೆ.

ದಶಕಗಳಿಂದ ಚರಂಡಿ ನೀರಿನ ಹರಿವಿಗೆ ಸೀಮಿತವಾಗಿದ್ದ ಅರ್ಕಾವತಿ ನದಿಯು ನಿರಂತರ ಮಳೆಯಿಂದ ಇದೀಗ ಹಿಂದಿನ ವೈಭವದೊಂದಿಗೆ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ. ಒಂದು ಕಾಲಕ್ಕೆ ಬೆಂಗಳೂರು ಮಹಾನಗರದ ಜನತೆಗೆ ನೀರು ಉಣಿಸುತ್ತಿದ್ದ ಅರ್ಕಾವತಿ ನದಿ ಬಳಿಕ ಮಳೆಯ ಕೊರತೆಯಿಂದ ಬತ್ತಿಹೋಗಿ ಕೊಳಚೆ ನೀರು ಹರಿಯುವ ಚರಂಡಿಯಂತಾಗಿತ್ತು.

ಈ ಬಾರಿಯ ಮುಂಗಾರು ಮಳೆ ರಾಮನಗರ, ಮಾಗಡಿ ತಾಲೂಕಿನಲ್ಲಿ ಉತ್ತಮವಾಗಿ ಸುರಿಯುತ್ತಿದ್ದು, ಜತೆಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದು ಮಂಚನಬೆಲೆ ಜಲಾಶಯ ಭರ್ತಿಯಾಗಿರುವುದು ನದಿ ಹರಿವಿಗೆ ಕಾರಣವಾಗಿದೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯು ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ರಾಮನಗರ, ಕನಕಪುರ ಮೂಲಕ ತಮಿಳುನಾಡಿನ ಗಡಿ ಸಂಗಮದದಲ್ಲಿ(ಮೇಕೆದಾಟು) ಬಳಿ ಕಾವೇರಿ ನದಿಯಲ್ಲಿ ವಿಲೀನವಾಗುತ್ತದೆ. ಬೆಂಗಳೂರು ನಗರದ ಮೂರನೇ ಒಂದು ಭಾಗದಷ್ಟು ಜನವಸತಿ ಪ್ರದೇಶವು ಅರ್ಕಾವತಿ ಜಲಾನಯನಕ್ಕೆ ಒಳಪಡುತ್ತದೆ.

ಅರ್ಕಾವತಿ ನದಿಗೆ ಉಪನದಿಗಳಾಗಿ ಕುಮುದ್ವತಿ, ವೃಷಭಾವತಿ, ಸುವರ್ಣಮುಖಿ, ಕುಟ್ಟೆ ಹೊಳೆ ಸೇರುತ್ತವೆ. ಅರ್ಕಾವತಿ ನದಿಪಾತ್ರ ನಂದಿ ಬೆಟ್ಟದ ತಪ್ಪಲು ಪ್ರದೇಶದಿಂದ ದೇವನಹಳ್ಳಿ ದೊಡ್ಡಬಳ್ಳಾಪುರ, ಹೆಸರಘಟ್ಟದ ಮಾರ್ಗವಾಗಿ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೂ ಸುಮಾರು 60ಕಿ.ಮೀ ವ್ಯಾಪ್ತಿಯಲ್ಲಿದೆ. ಮಂಚನಬೆಲೆ ಜಲಾಶಯ ನಿರ್ಮಿಸುವುದಕ್ಕೂ ಮುನ್ನ ಅರ್ಕಾವತಿ ನದಿ ತುಂಬಿ ಹರಿಯುತ್ತಿತ್ತು. 52ವರ್ಷಗಳ ಹಿಂದೆ 1962 ಅಕ್ಟೋಬರ್ 2 ರಂದು ಅರ್ಕಾವತಿ ನದಿಯಲ್ಲಿ ಪ್ರವಾಹವೂ ಉಂಟಾಗಿತ್ತು.

ಮಂಚನಬೆಲೆಯಿಂದ ರಾಮನಗರದವರೆಗೆ ಸುಮಾರು 2ಸಾವಿರ ಎಕರೆ ಜಮೀನು ಜಲಾವೃತವಾಗಿತ್ತು. ಇದೇ ವೇಳೆ ಕಣ್ವ ನದಿಯಲ್ಲೂ ಪ್ರವಾಹ ಉಂಟಾಗಿ ಕೂಟಗಲ್ ಗ್ರಾಮದ ಸುತ್ತಮುತ್ತ ಸುಮಾರು ಒಂದು ಸಾವಿರ ಎಕರೆ ಬೆಳೆ ನಷ್ಟವಾಗಿತ್ತು. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು 1969ರಲ್ಲಿ ಮಂಚನಬೆಲೆ ಜಲಾಶಯ ನಿರ್ಮಿಸಲು ಸರ್ಕಾರ ತೀರ್ಮಾನಿಸಿತು. ಪ್ರಾಥಮಿಕ ಹಂತದ ಕಾಮಗಾರಿಯು 1970ರಲ್ಲಿ ಆರಂಭವಾಯಿತು. ಮುಖ್ಯ ಜಲಾಶಯ ನಿರ್ಮಾಣದ ಕಾಮಗಾರಿ 1976ರಲ್ಲಿ ಪ್ರಾರಂಭವಾಗಿ 1989ರ ವೇಳೆಗೆ ಕಾಮಗಾರಿ ಪೂರ್ಣಗೊಂಡಿತು.

ಜಲಾಶಯ ನಿರ್ಮಾಣದ ಬಳಿಕ ನದಿಯಲ್ಲಿ ನೀರು ಹರಿಯುವುದೇ ಕಡಿಮೆಯಾಗಿತ್ತು. ಹೀಗಾಗಿ ನದಿ ಪಾತ್ರಗಳಲ್ಲಿ ವಾಸಿಸುತ್ತಿದ್ದ ಜನರು ನದಿಯಿದೆ ಎಂಬುದನ್ನೇ ಮರೆತು ಬಿಟ್ಟಿದ್ದರು. ಈಗ ಭಾರಿಯಾಗುತ್ತಿರುವುದರಿಂದ ನದಿ ಉಕ್ಕಿ ಹರಿದಿದ್ದು ಜನ ಪರದಾಡುವಂತಾಗಿದೆ.

See also  ಕುತೂಹಲ ಕೆರಳಿಸಿದ ಹೆಚ್ಡಿಕೆ-ಇಬ್ರಾಹಿಂ ಮಾತುಕತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು