ರಾಮನಗರ: ಬೆಂಗಳೂರು-ಮೈಸೂರು ಬೈಪಾಸ್ ಹೆದ್ದಾರಿ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದ್ದು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಬಾನಂದೂರು ಗ್ರಾಮದಲ್ಲಿ ಭೈರವನದೊಡ್ಡಿ-ಬಾನಂದೂರು ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಂಗಳೂರು-ಮೈಸೂರು ಬೈಪಾಸ್ ಹೆದ್ದಾರಿ ಕಾಮಗಾರಿಯ ದೋಷಗಳು, ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಮಳೆಯಿಂದ ಆಗಿರುವ ಅನಾಹುತಗಳ ಕುರಿತು ವಿಧಾನಸಭೆ ಸದನದ ಗಮನ ಸೆಳೆದಿದ್ದು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಉತ್ತರ ಕೇಳಿದ್ದೇನೆ.
ಕೇಂದ್ರ ಸರಕಾರಕ್ಕೂ ಪತ್ರ ಬರೆದಿದ್ದು ಲೋಕೋಪಯೋಗಿ ಇಲಾಖೆ ಸಚಿವರು ಸದನ ವರದಿಯನ್ನು ಪಡೆದು ಕೇಂದ್ರ ಸಾರಿಗೆ ಸಚಿವರಿಗೆ ಕಳುಹಿಸಿ ಗಮನ ಸೆಳೆದಿದ್ದಾರೆ. ನಾನು ದ್ವನಿ ಎತ್ತಿದ ನಂತರ ಇತರ ಶಾಸಕರೂ ಸದನದಲ್ಲಿ ಮಾತನಾಡಿದ್ದಾರೆ. ಪ್ರಯಾಣಿಕರ ಸಂಕಷ್ಟಗಳ ಬಗ್ಗೆ ಚರ್ಚೆ ಆಗಿವೆ. ಎಲ್ಲವೂ ಶಾಶ್ವತವಾಗಿ ಸರಿಯಾಗಬೇಕೆನ್ನುವ ಬೇಡಿಕೆ ಇಟ್ಟಿದ್ದೇವೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ದುರಂತಗಳು ಸಂಭವಿಸಲಿವೆ ಎಂಬ ಬಗ್ಗೆ ಮನದಟ್ಟು ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಕ್ಸ್‌ಪ್ರೆಸ್ ಹೈವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಿದ ನಂತರ ಸಾರಿಗೆ ಸಂಸ್ಥೆಯ ಬಸ್‌ಗಳು ರಾಮನಗರ ಮತ್ತು ಚನ್ನಪಟ್ಟಣ ನಗರಕ್ಕೆ ಬರ್‍ತಾಯಿಲ್ಲ. ಕೇವಲ ಶೆಟಲ್ ಬಸ್‌ಗಳು ಮಾತ್ರ ಬರುತ್ತಿವೆ. ಐದು ನಿಮಿಷಕ್ಕೊಂದು ಬರುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ಗಳು ಈಗ ಅರ್ಧ ಗಂಟೆ ಕಾದರೂ ಬರುತ್ತಿಲ್ಲ. ಚನ್ನಪಟ್ಟಣ, ರಾಮನಗರ ಮತ್ತು ಬಿಡದಿ ಪಟ್ಟಣದಲ್ಲಿ ನಿಲುಗಡೆ ಇತ್ತು. ಈಗ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿರುವುದರಿಂದ ವ್ಯಾಪಾರ ವಹಿವಾಟು ಸಂಪೂರ್ಣ ನೆಲಕಚ್ಚಿದೆ. ಇಲ್ಲಿ ಹೋಟೆಲ್ ಉದ್ದಿಮೆಗಳನ್ನು ನಡೆಸುವವರ ಕತೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೈಪಾಸ್ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ವೈಜ್ಞಾನಿಕ ಚಿಂತನೆ ಮಾಡಿಲ್ಲ.ಪಟ್ಟಣಗಳ ಆಸುಪಾಸಿನಲ್ಲಿ ಹೊಂದಿಕೊಳ್ಳುವ ರೀತಿಯಲ್ಲಿ ಹೆದ್ದಾರಿಯನ್ನು ಕೂಡಿಸಿ ಸರ್ಕಲ್‌ಗಳು ನಿರ್ಮಿಸಿದ್ದರೇ ಆ ಬೈಪಾಸ್‌ಗೆ ಒಂದು ಗೌರವ ಬರುತ್ತಿತ್ತು. ಬೇರೆ ರಾಜ್ಯಗಳಲ್ಲಿ ಸಿಟಿಗಳನ್ನು ಸೇರಿಸಿಕೊಂಡು ವೈಜ್ಞಾನಿಕವಾಗಿ ನಿರ್ಮಿಸಿರುವ ಬೈಪಾಸ್‌ಗಳನ್ನು ಅಧಿಕಾರಿಗಳು ಒಮ್ಮೆ ನೋಡಿಕೊಂಡು ಬರಲಿ ಎಂದು ಮಂಜುನಾಥ್ ಸಲಹೆ ನೀಡಿದರು.
ಇದಕ್ಕೂ ಮುನ್ನ 80ಲಕ್ಷ ರೂ ವೆಚ್ಚದಲ್ಲಿ ಬಾನಂದೂರು-ಭೈರವನದೊಡ್ಡಿ ರಸ್ತೆ ಹಾಗೂ 50 ಲಕ್ಷ ರೂ ವೆಚ್ಚದಲ್ಲಿ ಮೇಡನಹಳ್ಳಿ-ಬಾನಂದೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಬಿಡದಿ ಪುರಭೆ ಮಾಜಿ ಅಧ್ಯಕ್ಷೆ ವೆಂಕಟೇಶಮ್ಮ ರಾಮಕೃಷ್ಣಯ್ಯ, ಸದಸ್ಯರಾದ ಸರಸ್ವತಿ ಬಸವರಾಜು, ಲೋಹಿತ್ ಕುಮಾರ್, ರಮೇಶ್, ಹರೀಶ್‌ಪ್ರಸಾದ್, ಸೋಮಶೇಖರ್, ಜೆಡಿಎಸ್ ಮುಖಂಡರಾದ ಬಾನಂದೂರು ಜಗದೀಶ್, ನರಸಿಂಹಯ್ಯ, ಸುರೇಶ್‌ಗೌಡ, ಕಲೀಲ್, ವಸಂತ್‌ಕುಮಾರ್, ಬಿ.ಸಿ.ರಮೇಶ್, ಬಸವರಾಜು, ಪುರಸಭೆ ಮಾಜಿ ಸದಸ್ಯರಾದ ಸಂತೋಷ್, ಶಿವಕುಮಾರ್ ಪುಟ್ಟಮಾದಯ್ಯ ಮುಂತಾದವರು ಹಾಜರಿದ್ದರು.