ರಾಮನಗರ: ರಾಜ್ಯದಲ್ಲಿ ದ್ವೇಷ ಮತ್ತು ಮತಾಂಧತೆಯನ್ನು ಬಿತ್ತುವ ಮದರಸಾ ಶಿಕ್ಷಣವನ್ನು ನಿಷೇಧ ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯದಲ್ಲಿರುವ ಮದರಸಾಗಳ ತನಿಖೆ ಮಾಡಬೇಕು. ಅಲ್ಲಿ ಯಾವ ವಿಷಯ ಭೋದಿಸಲಾಗುತ್ತದೆ ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕು. ಮತಾಂಧತೆ ಪ್ರಚಾರವಾಗುವುದನ್ನು ತಡೆಯಲು ಮದರಸಾದ ಶಿಕ್ಷಣದ ಮಾನ್ಯತೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಜಿಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸಾವಿರಾರು ಮದರಸಾಗಳು ಸರ್ಕಾರದ ಅನುದಾನದಲ್ಲಿ ನಡೆಯುತ್ತಿದ್ದು ಇತ್ತೀಚೆಗೆ ಮದರಸಾಗಳಲ್ಲಿ, ದೇಶ ವಿರೋಧಿ ವಿಷಯಗಳ ಬಗ್ಗೆ ಹಾಗೂ ಬಹುಸಂಖ್ಯಾತ ಹಿಂದೂಗಳ ವಿರುದ್ಧ ದ್ವೇಷಗಳನ್ನು ಬಿತ್ತಲಾಗುತ್ತಿದೆ ಎಂಬ ವಿಷಯ ಗಮನಕ್ಕೆ ಬರುತ್ತಿವೆ. ರಾಷ್ಟ್ರೀಯ ತನಿಖಾ ದಳವು ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮದರಸಾಗಳನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿರುವ ವಿಷಯಗಳು ಕೂಡ ತಿಳಿದುಬಂದಿವೆ ಎಂದು ಆರೋಪಿಸಿದರು.
ರಾಜ್ಯದ ಸುರಕ್ಷತೆ ದೃಷ್ಟಿಯಿಂದ ಮತ್ತು ಧಾರ್ಮಿಕ ಸೌಹಾರ್ಧತೆ ಕಾಪಾಡಲು ಸರ್ಕಾರವು ಈ ಎಲ್ಲ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿರುವ ಮದರಸಾಗಳ ತನಿಖೆಯನ್ನು ಮಾಡಬೇಕು. ಅಲ್ಲಿ ಯಾವ ವಿಷಯ ಭೋದಿಸಲಾಗುತ್ತದೆ. ಅದರ ಪರಿಶೀಲನೆ ಮಾಡಬೇಕು, ಮತಾಂಧತೆ ಪ್ರಚಾರವಾಗುವುದನ್ನು ತಡೆಯಲು ಮದರಸಾದ ಶಿಕ್ಷಣದ ಮಾನ್ಯತೆಯನ್ನು ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಎಂ.ನಾಗರ್ಜುನ, ಡಿ.ಎಂ.ರಾಜೇಶ್, ನವೀನ್ ಮುಂತಾದವರು ಭಾಗವಹಿಸಿದ್ದರು.