ರಾಮನಗರ: ದೇಶಿ ಕ್ರೀಡೆ ಆಗಿರುವ ಕಬಡ್ಡಿ ಭಾರತದಲ್ಲಿ ಸುಮಾರು ವರ್ಷಗಳಷ್ಟು ಪುರಾತನವಾದದ್ದು. ಭಾರತದ ಈ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ ಎಂದು ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ನಿತ್ಯಶ್ರೀ ಹೇಳಿದರು.
ತಾಲ್ಲೂಕಿನ ಬಿಡದಿ ತ್ಯಾಗರಾಜ ಸೆಂಟ್ರಲ್ ಸ್ಕೂಲ್ ಹಾಗೂ ದೆಹಲಿಯ ಸಿ.ಬಿ.ಎಸ್.ಇ ಬೋರ್ಡ್ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಅಂಡರ್-೧೯ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಕ್ರೀಡೆಯ ಕಡೆಗೆ ಹೆಚ್ಚು ಒಲವು ತೋರದೆ ಮೊಬೈಲ್ನಲ್ಲಿ ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕ್ರೀಡೆಯ ಬಗ್ಗೆ ಆಸಕ್ತಿವಹಿಸಿ ಕನಸು ಕಾಣಬೇಕು. ಕನಸು ನನಸಾಗುವ ವರೆಗಿಗೂ ತಮ್ಮ ಛಲ ಬಿಡಬಾರದೆಂದು ಕಿವಿಮಾತು ಹೇಳಿದರು.
ಕ್ರೀಡೆಯು ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ. ಹೀಗಾಗಿ ನಿತ್ಯವೂ ವ್ಯಾಯಾಮ ಮಾಡುವುದು ಉತ್ತಮ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಬಾಲ್ಯದಲ್ಲಿ ನಾನು ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೆ. ಆದರೆ ನನಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ವೈದ್ಯರು ನೀವು ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸಬಾರದೆಂದು ತಿಳಿಸಿದರೂ ಸಹ ಛಲಬಿಡದೆ ನಾನು ಇಂದು ಕ್ರೀಡೆಯಲ್ಲಿ ಸಾಧನೆ ಮಾಡಿರುವುದಾಗಿ ಎಂದು ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಞಾನವಿಕಾಸ ವಿದ್ಯಾಸಂಸ್ಥೆಯ ನಿರ್ದೇಶಕ ಸತೀಶ್ ಅವರು ಮಾತನಾಡಿ, ಬಿಡದಿ ಭಾಗದಲ್ಲಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಕ್ರೀಡಾಪಟುಗಳನ್ನು ಹುರಿದುಂಬಿಸುವ ಕೆಲಸ ನಾವೆಲ್ಲ ಮಾಡಬೇಕಿದೆ. ಬಿಡದಿಯ ಜನರಿಂದ ದೊರೆತ ಪ್ರೀತಿ ವಿಶ್ವಾಸದ ಪ್ರೋತ್ಸಾಹವು ಅವರಿಗೆ ಸದಾ ಕಾಲ ನೆನಪಿನಲ್ಲಿ ಉಳಿಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ತ್ಯಾಗರಾಜ ಸೆಂಟ್ರಲ್ ಸ್ಕೂಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂದೀಪ್ ಅವರು ಮಾತನಾಡಿ, ಆಟದಲ್ಲಿ ಸೋಲು-ಗೆಲುವು ಸಹಜ, ಆದರೆ ಎಲ್ಲರೂ ಕ್ರೀಡಾ ಸ್ಪೂರ್ತಿಯಲ್ಲಿ ಆಟವಾಡುತ್ತಾ ಗೆಲ್ಲುವ ಗುರಿ ಹೊಂದಬೇಕು ಆಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ಸೋತವರು ಕುಗ್ಗದೆ ಗೆಲುವು ಪಡೆದ ತಂಡದವರು ಹಿಗ್ಗದೆ ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಬಿ.ಎಸ್.ಸಿ ಬೋರ್ಡ್ ವೀಕ್ಷಕರಾದ ಅಜೀತ್ ಕಾವಟ್ಕರ್ ಪಾಟಿಯಾಲ, ಬಾಷ್ ಇಂಡಿಯಾ ಕಂಪನಿಯ ಯೋಜನಾ ನಿರ್ದೇಶಕ ರಂಗರಾವ್ ದೇಸಾಯಿ, ತ್ಯಾಗರಾಜ ಸೆಂಟ್ರಲ್ ಶಾಲೆಯ ಕಾರ್ಯದರ್ಶಿ ಸರ್ವೇಶ್, ಪ್ರಾಂಶುಪಾಲರಾದ ವಿದ್ಯಾಲಕ್ಷ್ಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.