ರಾಮನಗರ: ಸತ್ತೇಗಾಲದಿಂದ ಜಿಲ್ಲೆಯ ಜಲಾಶಯಗಳಿಗೆ ಕಾವೇರಿ ನದಿ ನೀರು ತುಂಬಿಸುವ ಯೋಜನೆ ಭಾಗವಾಗಿ ಮೊದಲ ಹಂತದಲ್ಲಿ ಕಣ್ವ ಜಲಾಶಯದಿಂದ ವೈ.ಜಿ.ಗುಡ್ಡ ಜಲಾಶಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ಬಿಡದಿ ಪುರಸಭೆ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಶಾಲಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ತೆಗಾಲದಿಂದ ಕಣ್ವ, ವೈ.ಜಿ.ಗುಡ್ಡ ಹಾಗೂ ಮಂಚನಬೆಲೆ ಜಲಾಶಯಗಳಿಗೆ ನದಿ ನೀರು ಹರಿಸುವುದು ಹಾಗೂ ಮಾಗಡಿ ಕ್ಷೇತ್ರದ ಜನರಿಗೆ ಕಾವೇರಿ ನೀರು ಪೂರೈಕೆ ಮಾಡುವ ಬಹುದಿನಗಳ ಕನಸು ನನಸಾಗುತ್ತಿದೆ. ಶೀಘ್ರದಲ್ಲಿ ಉಳಿದ ಕಾಮಗಾರಿ ಪೂರ್ಣಗೊಳಿಸಿ ಅಧಿಕೃತವಾಗಿ ನೀರು ಹರಿಸಲಾಗುವುದು ಎಂದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿರವರು ಅಧಿಕಾರ ಸ್ವೀಕರಿಸಿದ 10 ದಿನಗಳಲ್ಲಿ ಕಣ್ವ, ವೈ.ಜಿ.ಗುಡ್ಡ ಮತ್ತು ಮಂಚನಬೆಲೆ ಕೆರೆಗಳಿಗೆ ನೀರು ತುಂಬಿಸುವ 540 ಕೋಟಿ ರೂ ವೆಚ್ಚದ ಸತ್ತೇಗಾಲ ಯೋಜನೆಗೆ ಅನುಮೋದನೆ ನೀಡಿದ್ದರು. ಕೆಲಸವು ಶರವೇಗದಲ್ಲಿ ನಡೆದ ಕಾರಣ ವೈ.ಜಿ.ಗುಡ್ಡ ಜಲಾಶಯಕ್ಕೆ ನೀರು ಹರಿದಿದೆ. ಇದು ಶಾಸಕನಾಗಿ ನಾನು ಮಾಡುತ್ತಿರುವ ಶಾಶ್ವತವಾದ ಕೆಲಸ ಎಂದರು.
ಕೆರೆ ತುಂಬಿಸುವ ಯೋಜನೆ ಆರಂಭದಲ್ಲಿ ನೀರನ್ನು ಎಲ್ಲಿಂದ ತರುತ್ತಾರೆ. ಹೇಗೆ ತುಂಬಿಸುತ್ತಾರೆಂದು ಪ್ರಶ್ನಿಸಿದ ವಿರೋಧಿಗಳಿಗೆ ವೈ.ಜಿ.ಗುಡ್ಡ ಜಲಾಶಯಕ್ಕೆ ನೀರು ಹರಿಸುವ ಮೂಲಕ ಉತ್ತರ ನೀಡಿದ್ದೇವೆ. ಈ ವರ್ಷ ಜಲಾಶಯದಲ್ಲಿ ನೀರು ಕಡಿಮೆ ಇರುವುದರಿಂದ ಒಂದು ಮೋಟಾರ್ ರನ್ ಮಾಡಿದ್ದು ಅದರ ಮೂಲಕ ಜಲಾಶಯಕ್ಕೆ ಅವಶ್ಯಕತೆಯಿರುವ ನೀರನ್ನಷ್ಟೆ ಹರಿಸಿ ತುಂಬಿಸಲಾಗುತ್ತಿದೆ. ಎರಡು ಮೋಟಾರ್ ರನ್ ಮಾಡಿದರೆ ಕೇವಲ 60 ದಿನಗಳ ಅವಧಿಯಲ್ಲಿ ಸಂಪೂರ್ಣ ಜಲಾಶಯ ತುಂಬುತ್ತದೆ ಎಂದು ಹೇಳಿದರು.
ಮಂಚನಬೆಲೆ ಜಲಾಶಯಕ್ಕೆ ಕೇವಲ ಒಂದು ಕಿ.ಮೀ ನಷ್ಟು ಕಾಮಗಾರಿ ಬಾಕಿಯಿದ್ದು ಶೀಘ್ರದಲ್ಲಿಯೇ ಕೆಲಸ ಮುಗಿಯಲಿದೆ ನಂತರ ಅಲ್ಲಿಗೂ ನೀರು ತುಂಬಿಸಲಾಗುವುದು. ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಮತ್ತು ಮಾಡಬಾಳ್ ಹೋಬಳಿಗಳ 13 ಕೆರೆಗಳಿಗೆ ನದಿ ನೀರು ತುಂಬಿಸಲಾಗುವುದು. ಕುಡಿಯುವ ನೀರಿನ ಯೋಜನೆಯಡಿ 850 ಕೋಟಿ ರೂ ಅನುದಾನದಲ್ಲಿ ಹೊಸದಾಗಿ ಡಿಪಿಆರ್ ಸಿದ್ದಪಡಿಸಲಾಗಿದೆ.
ಮಂಚನಬೆಲೆಯಿಂದ ಮಾಗಡಿಯ ಸೋಲೂರು ಹೋಬಳಿ ಸೇರಿದಂತೆ ಬಿಡದಿ, ಕೂಟಗಲ್, ಕೈಲಾಂಚ ಮತ್ತು ಕಸಬಾ ಹೋಬಳಿಯ 1250 ಹಳ್ಳಿಗಳಿಗೆ ಪ್ರತಿ ಮನೆಮನೆಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. 150 ಕೋಟಿ ಮತ್ತು 460 ಕೋಟಿ ರೂ.ಗಳ ಎರಡು ಪ್ಯಾಕೇಜ್ಗಳ ಯೋಜನೆಗಳಿಗೆ ಟೆಂಡರ್ ಮುಗಿದಿದ್ದು. ಫೆಬ್ರವರಿ ಮೊದಲ ವಾರದಲ್ಲಿ ಮಾಗಡಿ ಕೋಟೆ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಂದ ಎರಡು ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.