ರಾಮನಗರ: ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಭಾವಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು ಭಾನುವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.
ರಾಮನಗರಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ವಡೇರಹಳ್ಳಿ ಬಳಿಯಿಂದ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ನೂರಾರು ಯುವಕರು ಬೈಕ್ ರಾಲಿಯಲ್ಲಿ ಸ್ವಾಗತಿಸಿದರು. ನಗರದ ಚಾಮುಂಡೇಶ್ವರಿ ದೇವಾಲಯ, ಬಲಮುರಿ ಗಣಪತಿ ದೇವಾಲಯ, ಚರ್ಚ್, ಮಸೀದಿಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು.
ಬಳಿಕ ರೈಲ್ವೆ ನಿಲ್ದಾಣದಿಂದ ಕುದುರೆ ಸಾರೋಟಿನಲ್ಲಿ ಹಳೇ ಬಸ್ನಿಲ್ದಾಣದವರೆಗೆ ಜನಪದ ಕಲಾಮೇಳದೊಂದಿಗೆ ಕರೆ ತರಲಾಯಿತು. ನಗರದ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿರುವ ಕೆಂಗಲ್ ಹನುಮಂತಯ್ಯ ಪುತ್ಥಳಿಗೆ ನಿಖಿಲ್ ಕುಮಾರಸ್ವಾಮಿ ಮಾಲಾರ್ಪಣೆ ಮಾಡಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಕೇಕ್ ಕತ್ತರಿಸಿ ಹರ್ಷ ವ್ಯಕ್ತಪಡಿಸಿದರು.
ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಇಂದು ನನ್ನ ಜೀವನದಲ್ಲಿ ಮರೆಯಲಾಗದಂತಹ ಸ್ವಾಗತ ಕೋರಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ನೋಡಿದ್ದೀರಿ. ಈ ಕ್ಷೇತ್ರಕ್ಕೆ ನನ್ನದೇ ಆದ ಪ್ರಣಾಳಿಕೆ ತಯಾರಿಸಿದ್ದೇನೆ. ಜನರು ಆಶೀರ್ವಾದ ಮಾಡಿದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರಿಗೆ ತೆಂಗಿನ ಸಸಿ ವಿತರಣೆ ಮಾಡಲಾಯಿತು. ಶಾಸಕ ಎ.ಮಂಜುನಾಥ್ ಜೊತೆಗಿದ್ದರು. ಮಂಡ್ಯ ಹಾಗೂ ರಾಮನಗರ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದು ಈ ಕ್ಷಣವನ್ನು ಸಂಭ್ರಮಿಸಿದರು.