ರಾಮನಗರ: ರಸ್ತೆ ದುರಸ್ತಿಗಾಗಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಹಿಂಭಾಗದಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಡದಿಯ ಕಲ್ಲುಗೋಪಹಳ್ಳಿ ಬಳಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ.
ಪುರುಶೋತ್ತಮ್ ಕೆ.ಪಿ(37), ನಂದಿನಿ(30) ಹಾಗೂ 8 ತಿಂಗಳ ಹೆಣ್ಣು ಮಗು ಅಪಘಾತದಲ್ಲಿ ತೀವ್ರ ಗಾಯಗೊಂಡವರು. ಇವರು ಕನಕಪುರದ ಕುಂಬಾರಬೀದಿ ನಿವಾಸಿಗಳಾಗಿದ್ದು ಬೆಂಗಳೂರಿನ ತಲಘಟ್ಟಪುರದಲ್ಲಿ ನೆಲೆಸಿದ್ದರು. ರಾಮನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಸಂಜೆ 4.30ರ ಸಮಯದಲ್ಲಿ ಕಲ್ಲುಗೋಪಹಳ್ಳಿ ಬಳಿ ದುರ್ಘಟನೆ ಸಂಭವಿಸಿದೆ.
ಬೆಂಗಳೂರು ಕಡೆಗೆ ಸಾಗುವ ರಸ್ತೆಯಲ್ಲಿ ಡಿಬಿಎಲ್ ಕಂಪೆನಿಗೆ ಸೇರಿದ ಟಿಪ್ಪರ್ ಲಾರಿ ನಿಲ್ಲಿಸಿಕೊಂಡು ರಸ್ತೆ ವಿಭಜಕದ ದುರಸ್ತಿ ಕೆಲಸ ಮಾಡುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಪುರುಷೋತ್ತಮ್ ಮತ್ತು ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಪರಿಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ತಕ್ಷಣವೇ ಬಿಡದಿಯ ಭರತ್ ಕೆಂಪಣ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ದೊರಕಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಪುರುಷೋತ್ತಮ್ ಅವರನ್ನು ಬೆಂಗಳೂರಿನ ನಿಮ್ಮಾನ್ಸ್‌ಗೆ ಹಾಗೂ ಮಗುವನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡ ಕಾರಣ ಕೆಲಕಾಲ ಎಕ್ಸ್‌ಪ್ರೆಸ್ ಹೈವೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
ಸ್ಥಳಕ್ಕೆ ಬಿಡದಿ ಠಾಣೆ ಪೊಲೀಸರು ಆಗಮಿಸಿ ಸಂಚಾರವನ್ನು ಸುಗಮಗೊಳಿಸಿದರು. ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.