ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿ ಮೇಡನಹಳ್ಳಿ ಗ್ರಾಮದ ಶ್ರೀ ಶನೇಶ್ಚರಸ್ವಾಮಿಯ 37ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಗ್ನಿಕೊಂಡ, ಜಾತ್ರಾ ಮಹೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಬಿಡದಿ ಭೈರಮಂಗಲ ರಸ್ತೆಯಲ್ಲಿರುವ ಮೇಡನಹಳ್ಳಿ ಗ್ರಾಮದ ಸಮೀಪದ ಶ್ರೀ ಶನೇಶ್ಚರಸ್ವಾಮಿ ದೇವಾಲಯದ ಬಳಿ ಪ್ರತಿವರ್ಷವೂ ಅಗ್ನಿಕೊಂಡ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಅಂತೆಯೇ ಈ ಬಾರಿಯೂ ಅಗ್ನಿಕೊಂಡ, ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ದೇವಾಲಯದ ಪ್ರಧಾನ ಅರ್ಚಕ ಮುತ್ತರಾಯಪ್ಪ ಅವರು ಭಕ್ತಾಧಿಗಳ ಜಯಘೋಷಗಳೊಂದಿಗೆ ೩೭ನೇ ಬಾರಿಗೆ ಅಗ್ನಿಕೊಂಡ ಪ್ರವೇಶಿಸಿ ಯಶಸ್ವಿಯಾಗಿ ನೆರವೇರಿಸಿದರು.
ಮೇಡನಹಳ್ಳಿ ಗ್ರಾಮದ ದಿ.ಮೋಟಪ್ಪನವರ ಮಕ್ಕಳಾದ ದಿ.ಚನ್ನಪ್ಪ ಹಾಗೂ ಚಿಕ್ಕತಿಮ್ಮಯ್ಯ ಅವರು ದಾನವಾಗಿ ನೀಡಿರುವ ಜಮೀನಿನಲ್ಲಿ ನೆಲೆಗೊಂಡಿರುವ ಶ್ರೀ ಶನೇಶ್ಚರಸ್ವಾಮಿಯ ಅಗ್ನಿಕೊಂಡ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ನಾನಾ ಪೂಜಾ ಕೈಂಕರ್ಯಗಳು ನಡೆದವು. ಮಹೋತ್ಸವದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ದೇಗುಲದ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಅನ್ನದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಶನೇಶ್ಚರಸ್ವಾಮಿ ಉತ್ಸವಮೂರ್ತಿ ಮೆರವಣಿಗೆ ನಡೆಯಿತು.
ಅಗ್ನಿಕೊಂಡ ಹಾಗೂ ಜಾತ್ರಾ ಮಹೋತ್ಸವಕ್ಕೆ ಮೇಡನಹಳ್ಳಿ, ಜೋಗರದೊಡ್ಡಿ, ಗೊಲ್ಲಹಳ್ಳಿ, ಬಾನಂದೂರು, ಇಟ್ಟಮಡು ಸೇರಿದಂತೆ ಸುತ್ತಮುತ್ತಲಿನ ನಾನಾ ಹಳ್ಳಿಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗ್ರಾಮಸ್ಥರಿಂದ ಶನಿ ಪ್ರಭಾವ ಅಥವಾ ರಾಜಾ ವಿಕ್ರಮ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶನ ಮಾಡಲಾಯಿತು.