ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಕಲ್ಮಶಗೊಂಡಿರುವ ವೃಷಭಾವತಿ ನದಿನೀರು ಹರಿಯುವ ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯಲು ಕಾವೇರಿ ನೀರು ಪೂರೈಸುವ ಯೋಜನೆ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಗುಂಡುತೋಪು(ಕಂಚುಗಾರನಹಳ್ಳಿ ಕಾವಲ್) ಗ್ರಾಮದಲ್ಲಿ ಬಮ್ಮೂಲ್ ನಿಧಿಯಡಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾರೋಹಳ್ಳಿ ಮೂಲಕ ಬೆಂಗಳೂರಿಗೆ ಹಾದು ಹೋಗಿರುವ ಕಾವೇರಿ ನದಿ ನೀರನ್ನು ಕಂಚುಗಾರನಹಳ್ಳಿ ಮತ್ತು ಭೈರಮಂಗಲ ಸೇರಿದಂತೆ ಇನ್ನಿತರ ಗ್ರಾಮಗಳಿಗೂ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಸಾಯನಿಕ ಮಿಶ್ರಣದ ನೀರಿನಿಂದ ವೃಷಭಾವತಿ ನದಿ ವಿಷದ ಒಡಲಾಗಿದ್ದು, ಈ ನೀರನ್ನೇ ಕೃಷಿ ಚಟುವಟಿಕೆಗೆ ಬಳಸಲಾಗುತ್ತಿದೆ. ಅಂತರ್ಜಲ ನೀರು ಕಲುಷಿತಗೊಂಡು ಕುಡಿಯುವ ಯೋಗ್ಯವಿಲ್ಲದಂತಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ಕಾವೇರಿ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ತಿಳಿಸಿದರು.
ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಈ ಹಳ್ಳಿಯನ್ನು ನಾನು ಶಾಸಕನಾಗಿದ್ದಾಗ ಸುವರ್ಣ ಗ್ರಾಮ ಯೋಜನೆಗೆ ಸೇರಿಸಿ ಒಂದು ಕೋಟಿ ರೂ ಅನುದಾನ ಕೊಡಿಸಿದ್ದೆ. ಆದರೆ ಕೆಲಸ ಸರಿಯಾಗಿ ಆಗಲಿಲ್ಲ, ಈ ಭಾಗಕ್ಕೆ ರಸ್ತೆ, ಯುಜಿಡಿ ಸೇರಿದಂತೆ ಕಾವೇರಿ ನೀರು ಒದಗಿಸುವ ಕೆಲಸ ಮಾಡುವ ಬದ್ಧತೆ ಹೊಂದಿದ್ದೇನೆ ಇದಕ್ಕಾಗಿ ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಅಧಿಕಾರಕ್ಕೆ ಬರುವ ಶಕ್ತಿಯಿಲ್ಲ. 40 ಪರ್ಸೆಂಟ್ ಕಿಮೀಷನ್ ಆರೋಪ ಹೊತ್ತಿರುವ ಬಿಜೆಪಿ ಸರ್ಕಾರದ ಕಡು ಭ್ರಷ್ಟಾಚಾರದಿಂದ ಜನರು ರೋಸಿ ಹೋಗಿದ್ದಾರೆ. ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಲಿರುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ನನ್ನನ್ನು ಶಾಸಕನನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಬಾಲಕೃಷ್ಣ ಕೋರಿದರು.