ರಾಮನಗರ: ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೇನೆಂದು ಹೇಳಿಕೊಳ್ಳುವ ಅವರು ” ಜಿಲ್ಲೆಗೆ ನನ್ನ ಕೊಡುಗೆಗಳು” ಎನ್ನುವ ಕೈಪಿಡಿಯನ್ನು ಹೊರಡಿಸಿ ಬಿಡುಗಡೆ ಮಾಡಲಿ ಎಂದು ಸಂಸದ ಡಿ.ಕೆ.ಸುರೇಶ್ ಅವರು ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
ತಾಲ್ಲೂಕಿನ ಕೂಟಗಲ್ ಹೋಬಳಿ ವ್ಯಾಪ್ತಿಯ ಜಾಲಮಂಗಲ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಪ್ರಜಾದ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮನಗರ ವಿಧಾನಸಭಾ ಕ್ರೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಎರಡು ಬಾರಿ ಮುಖ್ಯಮಂತ್ರಿಯಾದವರು ಜಿಲ್ಲೆಗೆ ಎಲ್ಲವನ್ನೂ ಕೊಟ್ಟಿದೇನೆಂದು ಜನರ ಮುಂದೆ ಹೇಳಿ ಕೊಳ್ಳುತ್ತಾರೆ. ಆದರೆ ನೀರಾವರಿ ಯೋಜನೆ ಬಗ್ಗೆ ಅವರಯ ಎಂದೂ ಯೋಚಿಸಿರಲಿಲ್ಲ. ಸತ್ತೇಗಾಲ ನೀರಾವರಿ ಯೋಜನೆ ಡಿ.ಕೆ.ಶಿವಕುಮಾರ್ ಅವರ ಕೊಡುಗೆ. ಜಲಸಂಪನ್ಮೂಲ ಸಚಿವರಾಗಿದ್ದಾಗ ಯೋಜನೆಗೆ ಮುನ್ನುಡಿ ಬರೆದರು. ಜಿಲ್ಲೆಗೆ ನೀರು ಎಲ್ಲಿಂದ ತರಬೇಕೆನ್ನುವ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಆದರೆ ಇಂದು ಎಲ್ಲವೂ ನನ್ನ ಯೋಜನೆಗಳೆಂದು ಜನರ ಮುಂದೆ ಹೇಳಿಕೊಳ್ಳುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರ ಹೆಸರೇಳದೆ ಟೀಕಿಸಿದರು.
ಮಾಗಡಿಯ ವೈ.ಜಿ.ಗುಡ್ಡ ಕುಡಿಯುವ ನೀರಿನ ಯೋಜನೆ ಕೂಡ ನಮ್ಮ ಕನಸಿನ ಯೋಜನೆ. ಆದರೆ ಕೆಲವರು ಪೂಜೆ ಮಾಡುವ ಮೂಲಕ ಯೋಜನೆ ನನ್ನದೆಂದು ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ಅವರ ವಿರುದ್ಧವೂ ವಾಗ್ದಾಳಿ ನಡೆಸಿದರು. ಕಳೆದ ಬಾರಿ ಚುನಾವಣೆಯಲ್ಲಿ ಭಾರಿ ಅಂತರದಿಂದ ಸೋತರೂ ಸಹ ಮನೆಯಲ್ಲಿ ಕುಳಿತುಕೊಳ್ಳದೆ ಕ್ಷೇತ್ರದ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಅಪಾರ ಜನಪರ ಕಾಳಜಿ ಇದೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಜನಸಾಮಾನ್ಯರ ಒಳಿತಿಗಾಗಿ ಆಡಳಿತ ನಡೆಸಿದೆ. ಸಾಮಾನ್ಯ ಜನರ ಕೈಯಲ್ಲಿ ಹಣಕಾಸು ಓಡಾಡುವ ರೀತಿಯಲ್ಲಿ ಕೆಲಸ ಮಾಡಿದೆ. ಮುಂದೆಯೂ ಕಾಂಗ್ರೆಸ್ ಸರ್ಕಾರದಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರೂ ಹಾಗೂ ತಲಾ ಒಬ್ಬರಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುವ ಭರವಸೆ ಕೊಟ್ಟಿದ್ದೇವೆ. ನಾವು ಮಾತಿಗೆ ಎಂದೂ ತಪ್ಪುವುದಿಲ್ಲ ಹೀಗಾಗಿ ಮಾಗಡಿಯಲ್ಲಿ ಬಾಲಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಇನ್ನೂ 550 ಬಾಕಿ ಉಳಿದಿವೆ. ಕೇವಲ 50 ಮಾತ್ರ ಈಡೇರಿಸಿದ್ದಾರೆ. ಮೋದಿ ಅವರು ಬಂದು ನನ್ನನ್ನು ಗೆಲ್ಲಿಸಿ ನಿಮ್ಮ ಖಾತೆಗೆ 15ಲಕ್ಷ ಹಾಕುತ್ತೇವೆ ಎಂದರು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಅವರು ಹೇಳಿದಂತೆ ಏನಾದರೂ ಮಾಡಿದ್ದಾರಾ? ಇಲ್ಲ. ಹೀಗಾಗಿ ಜನರಿಗೆ ಅನುಕೂಲಕರ ಕಾರ್ಯಕ್ರಮ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಕೆ.ರಾಜು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಗಂಗಾಧರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಮುನಿರಾಜು ಮುಖಂಡರಾದ ಡಿ.ಎಂ.ವಿಶ್ವನಾಥ್, ಜೆ.ಸಿ.ಚಂದ್ರಶೇಖರ್, ನರಸಿಂಹಯ್ಯ, ಕೆ.ರಮೇಶ್, ಕಾವ್ಯ, ಯರೇಹಳ್ಳಿ ಮಂಜು, ಗಾಣಕಲ್ ನಟರಾಜು ಮುಂತಾದವರು ಹಾಜರಿದ್ದರು.