ರಾಮನಗರ: ರಾಜ್ಯರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಜತೆಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರೂ ಆದ ನಿಖಿಲ್ ಕುಮಾರಸ್ವಾಮಿ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಏ.17ರಂದು 12 ಗಂಟೆಗೆ ರಾಮನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಹಾಗೂ ಪಿಎಸ್‌ವಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಉಮೇದುವಾರಿಕೆ ಸಲ್ಲಿಸಿದರು.
ಬಳಿಕ ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಪಕ್ಷದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ನಗರದ ಮಿನಿ ವಿಧಾನಸೌಧಕ್ಕೆ ತೆರಳಿ ಮಧ್ಯಾಹ್ನ 12.30 ಗಂಟೆಗೆ ಚುನಾವಣಾಕಾರಿಗಳಾದ ಉಪ ವಿಭಾಗಾಧಿಕಾರಿ ಮಂಜುನಾಥ್ ಹಾಗೂ ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ತೇಜಸ್ವಿನಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಶಾಸಕಿ ಅನಿತಾಕುಮಾರಸ್ವಾಮಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಜತೆಗಿದ್ದರು.
ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಚಿರಾಸ್ತಿ 46.51 ಕೋಟಿ ಹಾಗೂ ಸ್ಥಿರಾಸ್ತಿ 28 ಕೋಟಿ ರೂ. ತಮ್ಮ ಬಳಿ 1.151 ಕೆ.ಜಿ ಚಿನ್ನವಿದ್ದು 38.94 ಕೋಟಿ ರೂ ಸಾಲ ಇರುವುದಾಗಿ ತಿಳಿಸಿದ್ದಾರೆ. ಲ್ಯಾಂಬೋರ್ಗಿನಿ ಸಹಿತ ಒಟ್ಟು 5 ಕಾರುಗಳಿದ್ದು ಇವುಗಳ ಬೆಲೆ 5.67 ಕೋಟಿ ರೂಗಳು. 2022-23 ಸಾಲಿನಲ್ಲಿ ವಾರ್ಷಿಕ ಆದಾಯ 4.28 ಕೋಟಿ ಇರುವುದಾಗಿ ಅಫಿಡವಿಟ್ ನೀಡಿದ್ದಾರೆ.