ರಾಮನಗರ: ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೀವ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವಾಗಿ ಬಿಂಬಿತವಾಗುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರಾ ನೇರ ಪೈಪೋಟಿಯಿದ್ದು. ಕಾಂಗ್ರೆಸ್ ಯಾರಿಗೆ ಸ್ಪರ್ಧೆಯೊಡ್ಡಲಿದೆ ಎಂಬ ಕುತೂಹಲದ ನಡುವೆ ಗೊಂಬೆಗಳ ಊರಿನಲ್ಲಿ ಗೊಂಬೆ ಆಡಿಸುವವರು ಯಾರು? ಎಂಬುದು ಪ್ರಶ್ನೆಯಾಗಿದೆ.
ಕ್ಷೇತ್ರದ ಶಾಸಕರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ಇವರಿಗೆ ಕ್ಷೇತ್ರದಲ್ಲಿ ಗೆಲುವು ಅನಿವಾರ್ಯವಾಗಿದೆ. ಇನ್ನು ಬಿಜೆಪಿ ಅಭ್ಯರ್ಥಿಯಾಗಿರುವ ಸಿ.ಪಿಯೋಗೇಶ್ವರ್ ಗೆ ಚನ್ನಪಟ್ಟಣದಲ್ಲಿ ಗೆಲುವು ಬಹುಮುಖ್ಯವಾಗಿದೆ.
ಯೋಗೇಶ್ವರ ಹಿಂದಿನಿಂದಲೂ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿದ್ದ ಅವರು ಗೆಲುವನ್ನು ಹೆಗಲಿಗೇರಿಸಿಕೊಂಡಿದ್ದರು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದರೂ ಸೋಲು ಕಾಣುವಂತಾಯಿತು.
ಕಳೆದ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಮತ್ತು ಚೆನ್ನಪಟ್ಟಣದಿಂದ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲದೆ ಎರಡು ಕಡೆಗಳಲ್ಲಿಯೂ ಗೆಲುವು ಕಂಡಿದ್ದರು. ನಂತರ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದರು. ಈ ಬಾರಿ ಚನ್ನಪಟ್ಟಣವನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ.
ಹಾಗೆನೋಡಿದರೆ ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರೂ ಅವರಿಗೆ ಸಿ.ಪಿ.ಯೋಗೇಶ್ವರ್ ಪ್ರಬಲ ಪೈಪೋಟಿ ನೀಡುತ್ತಾರೆ ಎಂಬುದು ಗೊತ್ತಿತ್ತು. ಹೀಗಾಗಿ ಅವರು ರಾಮನಗರದಿಂದಲೂ ಸ್ಪರ್ಧೆ ಮಾಡಿದ್ದರು. ಗೆಲುವಿನ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅದಾದ ನಂತರ ಸಮ್ಮಿಶ್ರ ಸರ್ಕಾರ ಪತನಗೊಂಡಿತು.
ಮತ್ತೆ ಮುಖ್ಯಮಂತ್ರಿಯಾಗುವ ಹಠಕ್ಕೆ ಬಿದ್ದ ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾ, ವಿವಿಧ ಕಾರ್ಯಕ್ರಮಗಳ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಲೇ ಇಲ್ಲ. ಹೀಗಾಗಿ ಅವರ ಹಿಂಬಾಲಕರ ಪೈಕಿ ಹಲವರು ಈಗಾಗಲೇ ಬಿಜೆಪಿಯನ್ನು ಸೇರಿದ್ದಾರೆ.
ಇನ್ನು ಈ ಬಾರಿ ಗೆದ್ದೇ ಗೆಲ್ಲಬೇಕೆಂದು ಪಣತೊಟ್ಟರುವ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಕಳೆದ ಒಂದು ವರ್ಷದಿಂದಲೇ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ದಲಿತರು, ಒಕ್ಕಲಿಗರು ಸೇರಿದಂತೆ ಹಲವರ ಮತಸೆಳೆಯಲು ಬೇಕಾದ ತಂತ್ರಗಳನ್ನು ಮಾಡುತ್ತಿದ್ದಾರೆ. ಇಷ್ಟಕ್ಕೂ ಸಿ.ಪಿ.ಯೋಗೇಶ್ವರ್ ಗೆ ಪಕ್ಷದ ವರ್ಚಸ್ಸಿಗಿಂತ ವೈಯಕ್ತಿಕ ವರ್ಚಸ್ಸು ಅವರನ್ನು ಗೆಲ್ಲಿಸುತ್ತಾ ಬಂದಿದೆ. ಈ ಹಿಂದೆ ಅವರು ಪಕ್ಷೇತರರಾಗಿ ಗೆದ್ದು ಹವಾ ಸೃಷ್ಟಿ ಮಾಡಿದ್ದಾರೆ.
ಕಳೆದೊಂದು ವರ್ಷದಲ್ಲಿ ಕ್ಷೇತ್ರದಾದ್ಯಂತ ಸುತ್ತಾಡಿರುವ ಸಿ.ಪಿ.ಯೋಗೇಶ್ವರ್ ಹಲವು ಜೆಡಿಎಸ್ ಮುಖಂಡರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ದಲಿತ ಸಂಘಟನೆಯ ಕೆಲವು ಮುಖಂಡರನ್ನು ಮನವೊಲಿಸಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಈ ಬಾರಿಯ ಚುನಾವಣೆಯಲ್ಲಿ ಯೋಗೇಶ್ವರ್ ಬೆಂಬಲಕ್ಕೆ ನಿಂತರೆ ಒಂದಷ್ಟು ಬಲ ಬರಬಹುದು.
ಇನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದಿಂದ ಸ್ಪರ್ಧಿಸಿದರೂ ಕ್ಷೇತ್ರದಲ್ಲಿ ಉಳಿದುಕೊಂಡು ಪ್ರಚಾರ ನಡೆಸುವುದು ಕಷ್ಟ ಸಾಧ್ಯವಾಗಿದೆ. ಅವರು ರಾಜ್ಯದಾದ್ಯಂತ ಪ್ರಚಾರ ಮಾಡಲೇ ಬೇಕಾಗಿದೆ. ಹೀಗಾಗಿ ಅವರ ಸಹಾಯಕ್ಕೆ ತಾಲೂಕು ಜೆಡಿಎಸ್ ಮಹಿಳಾ ಘಟಕ ಬಂದಿದ್ದು ಈಗಾಗಲೇ ಕ್ಷೇತ್ರದ ಗ್ರಾಮೀಣ ಪ್ರದೇಶಕ್ಕೆ ತೆರಳಿ ಘಟಕದ ಮಹಿಳೆಯರು ಪ್ರಚಾರ ಕಾರ್ಯ ನಡೆಸುತ್ತಿದ್ದು, ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಒಟ್ಟಾರೆ ಕ್ಷೇತ್ರದಲ್ಲಿ ಜೆಡಿಎಸ್ ವರ್ಸಸ್ ಬಿಜೆಪಿ ಎನ್ನುವುದಕ್ಕಿಂತಲೂ ಕುಮಾರಸ್ವಾಮಿ ವರ್ಸಸ್ ಯೋಗೇಶ್ವರ್ ಎನ್ನುವಂತಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಅವರು ಯಾವ ರೀತಿಯ ಸ್ಪರ್ಧೆ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಎದುರಾಳಿಗಳಾಗಿದ್ದರು. ಈ ಬಾರಿಯೂ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ.
ಕಳೆದ ಬಾರಿ ಇವರು ಪಡೆದಿದ್ದ ಮತವನ್ನು ನೋಡುವುದಾದರೆ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು 87,995 ಮತ ಪಡೆದಿದ್ದರೆ, ಬಿಜೆಪಿಯ ಸಿ.ಪಿ.ಯೋಗೇಶ್ವರ್ 66,465 ಮತ್ತು ಕಾಂಗ್ರೆಸ್ ನ ಎಚ್.ಎಂ.ರೇವಣ್ಣ 30,208 ಮತ ಪಡೆದಿದ್ದರು. ಈ ಬಾರಿ ಕಾಂಗ್ರೆಸ್ ನಿಂದ ಎಚ್.ಎಂ.ರೇವಣ್ಣರ ಬದಲಿಗೆ ಗಂಗಾಧರ್ ಕಣಕ್ಕಿಳಿದಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಮತದಾರರು ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.