ಎಂ.ಎನ್.ಕೋಟೆ: ಕುರಿ ದೊಡ್ಡಿಗೆ ನುಗ್ಗಿದ ಚಿರತೆ ಎಂಟು ಕುರಿಗಳನ್ನು ಬಲಿ ಪಡೆದು ಎರಡು ಕುರಿಗಳನ್ನು ಹೊತ್ತೊಯ್ದ ಘಟನೆ ಶನಿವಾರ ಮುಂಜಾನೆ ಗುಬ್ಬಿ ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತರಾದ ಲಕ್ಷ್ಮಮ್ಮ ಗಂಗಣ್ಣ ಅವರು ಸಾಕಿದ ಕುರಿಗಳನ್ನು ಸಾಕುವ ದೊಡ್ಡಿಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿದ್ದು ಎಂಟು ಕುರಿಗಳ ಕತ್ತು ಸೀಳಿ ಬಲಿ ಪಡೆದಿದೆ.
ಕುರಿ ಸಾಕುವ ಕಾಯಕದಲ್ಲಿರುವ ಈ ಬಡ ಕುಟುಂಬ ಜೀವನೋಪಾಯಕ್ಕೆ ಇದ್ದ ಕುರಿಗಳನ್ನು ಕಳೆದುಕೊಂಡಬೀದಿಪಾಲಾಗಿದ್ದು ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ರೂಗಳ ನಷ್ಟ ಸಂಭವಿಸಿದೆ ಎಂದು ಅಂದಾಜುಮಾಡಲಾಗಿದೆ.
ಕಳೆದ ಗುರುವಾರ ಕಸಬ ಹೋಬಳಿ ಹೇರೂರು ಗ್ರಾಮದ ಬಳಿ ಹಾಡುಹಗಲೇ ಸುಮಾರು ಮೂರು ಚಿರತೆಗಳುರಸ್ತೆ ದಾಟುವಾಗ ವಾಹನ ಸವಾರರಿಗೆ ಅಡ್ಡ ಸಿಕ್ಕ ಘಟನೆ ನಡೆದ ಬೆನ್ನಲ್ಲೇ ಚಿರತೆ ದಾಳಿ ನಡೆಸಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ.
ಪದೇ ಪದೇ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಬಗ್ಗೆ ದೂರುಗಳು ಸಾಕಷ್ಟು ಕೇಳಿಬರುತ್ತಿದ್ದು, ಚಿರತೆ ಹಾವಳಿ ಸ್ಥಳೀಯ ಕೃಷಿಕರಲ್ಲಿ ಆತಂಕ ಮೂಡಿಸಿದ್ದು ಈ ನಿಟ್ಟಿನಲ್ಲಿ ಚಿರತೆಗಳ ಉಪಟಳವನ್ನು ತಪ್ಪಿಸಬೇಕು ಎಂದು ಮುದ್ದನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.