ತುಮಕೂರು: ಕೋರಟಗೆರೆ ವಿಧಾನ ಸಭಾ ಕ್ಷೇತ್ರದ ಕೋರ ಹೋಬಳಿಯ ಓಬಳಾಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮಂಜುನಾಥ್ ಅವರು ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ನ ಮಾಜಿ ಶಾಸಕ ಪಿ.ಸುಧಾಕರ್ ಲಾಲ್ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು,ಡಾ.ಜಿ ಪರಮೇಶ್ವರ್ ಅವರ ಹಿಂಬಾಲಕರು ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.
ಹದಿನೈದು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಮಂಜುನಾಥ್ ಅವರು ಕಾಂಗ್ರೆಸ್ ನ ನಾಯಕರ ಮೇಲೆ ಬೇಸರವಾಗಿ ಕೆಲವು ದಿನಗಳ ಹಿಂದೆ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಮಂಜುನಾಥ್ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆ ಯಾಗಿರುವುದನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ ಕಾರ್ಯಕರ್ತರು, ಶಾಸಕ ಡಾ. ಜಿ ಪರಮೇಶ್ವರ ಅವರ ಹಿಂಬಾಲಕರು ಮಂಜುನಾಥ್ ಅವರ ಮೇಲೆ ಹಲ್ಲೆ ನೆಡೆಸಿದ್ದಾರೆ ಎನ್ನಲಾಗುತ್ತಿದೆ.
ನಾನು ಕಳೆದ ಹದಿನೈದು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ಕೆಲ ದಿನಗಳ ಹಿಂದೆ ಮಾಜಿ.ಡಿಸಿಎಂ ಹಾಗೂ ಶಾಸಕರಾದ ಡಾ.ಜಿ ಪರಮೇಶ್ವರ್ ಅವರ ಮೇಲೆ ಬೇಜಾರಾಗಿ ಜೆಡಿಎಸ್ ಪಕ್ಷಕ್ಕೆ ಮಾಜಿ ಶಾಸಕ ಪಿ.ಸುಧಾಕರ್ ಲಾಲ್ ಅವರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದೆ. ಇದನ್ನು ಸಹಿಸಿಕೊಳ್ಳದ ಡಾ. ಜಿ ಪರಮೇಶ್ವರ್ ಅವರ ಹಿಂಬಾಲಕರು ಹಾಗೂ ಅದೇ ಸಮುದಾಯದವರು ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನಿಗಾ ಗೇಟ್ ನಲ್ಲಿ ಸೋಮವಾರ ಸಂಜೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ನನ್ನ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕ್ರಮ ಜರುಗಿಸಲು ಕಾನೂನು ಮೊರೆ ಹೋಗುತ್ತೇನೆ ಎಂದು ಹಲ್ಲೆಗೆ ಒಳಗಾದ ಮಂಜುನಾಥ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.