ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಮೊದಲಿಗೆ ತಮ್ಮ ಮನೆದೇವರಾದ ಹದ್ದಿನಕಲ್ಲು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ, ತಮ್ಮ ತಾಯಿಯವರ ಆಶೀರ್ವಾದ ಪಡೆದ ಗೌರಿಶಂಕರ್, ತದನಂತರ ಗೂಳೂರು ಅಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ, ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ಗದ್ದುಗೆಗೆ ನಮಸ್ಕರಿಸಿ, ಪೀಠಾಧ್ಯಕ್ಷರಾದ ಶ್ರೀಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತಮ್ಮ ಲಕ್ಷಾಂತರ ಬೆಂಬಲಿಗರೊಂದಿಗೆ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮಾಂತರ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಯುದ್ದವಾಗಿದೆ. ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಕೇಳಿ, ನೇರವಾಗಿ ಚುನಾವಣೆಯಲ್ಲಿ ಎದುರಿಸಲಾಗದೆ ಹಿಂಬಾಗಿಲಿನ ಮೂಲಕ ನನ್ನನ್ನು ಸೋಲಿಸುವ ಹುನ್ನಾರ ನಡೆಸಿದ್ದಾರೆ ಎಂದರು.
ಕ್ಷೇತ್ರದ ಜನತೆ ಕಳೆದ ಐದು ವರ್ಷಗಳಿಂದ ಮಾಜಿ ಶಾಸಕರಿಗೆ ರಜೆ ನೀಡಿದ್ದರು.ಈಗ ಶಾಶ್ವತವಾಗಿ ಕ್ಷೇತ್ರದ ಜನರು ರಜೆ ನೀಡಲಿದ್ದಾರೆ. ಸುಳ್ಳೇ ನಿಮ್ಮ ಮನೆಯ ದೇವರಾಗಿದೆ.ಹಾಗಾಗಿಯೇ ನಿಮ್ಮನ್ನು ಜನರು ಮನೆಗೆ ಕಳುಹಿಸಲಿದ್ದಾರೆ. ಈ ಬಾರಿ ಪ್ರಚಾರಕ್ಕೆ ಬಂದು ಸುಳ್ಳು ಹೇಳಿದರೆ ನೀವು ಪ್ರಶ್ನೆ ಮಾಡಿ. ಇಷ್ಟೊಂದು ಜನಸ್ತೋಮ ಭಾಗಿಸಿರುವ ಈ ಚುನಾವಣೆ ಒಂದು ಐತಿಹಾಸಕ್ಕೆ ಮೈಲಿಗಲ್ಲಾಗಬೇಕು. ಕನಿಷ್ಠ ೫೦ ಸಾವಿರದಲ್ಲಿ ಗೆಲ್ಲುವಂತೆ ನೀವು ಆಶೀರ್ವಾದಿಸಬೇಕು.ನಮ್ಮದು ನಾಯಕರಿರುವ ಪಕ್ಷವಲ್ಲ. ನಮ್ಮ ಕಾರ್ಯಕರ್ತರ ಪಕ್ಷ. ಈ ಚುನಾವಣೆಯಲ್ಲಿ ಜೆಡಿಎಸ್ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ನಾನು ಚುನಾವಣೆಗೋಸ್ಕರ ಬಂದಿಲ್ಲ. ಕೋರೋನದಂತಹ ಸಂಕಷ್ಟದ ಸಂದರ್ಭದಲ್ಲಿ ಮನೆ ಮಠ ಬಿಟ್ಟು ನಿಮ್ಮ ಸೇವೆ ಮಾಡಿದ್ದೇನೆ.ಮನೆ ಮಗನಾಗಿ ಕೆಲಸ ಮಾಡಿದ್ದೇನೆ.ಶಾಸಕ ಎಂಬ ಹಮ್ಮು, ಬಿಮ್ಮು ಎಂದಿಗೂ ತೋರಿಸಿಲ್ಲ. ಆದರೆ ಮಾಜಿ ಶಾಸಕರ ಸಾಧನೆ ಎಂದರೆ ಕ್ಷೇತ್ರದ ೩೫೦೦ಜನ ಯುವಕರ ಮೇಲೆ ಕೇಸು ಹಾಕಿದ್ದು, ನಿಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ನಿಮ್ಮ ಸಾಧನೆ ಏನು ಎಂದು ಪ್ರಶ್ನೆ ಮಾಡಿ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಕರೆ ನೀಡಿದರು.
ರಾಜ್ಯದ ಇತಿಹಾಸದಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ನಾಮಿನೇಷನ್ ಫೈಲ್ ಮಾಡಿದ ರೆಕಾರ್ಡ್ ಇದ್ದರೆ ಅದು ತುಮಕೂರು ಗ್ರಾಮಾಂತರ ಮಾತ್ರ. ಹಾಗಾಗಿ ಈ ಧರ್ಮ ಯುದ್ದದಲ್ಲಿ ನಿವೆಲ್ಲರೂ ಧರ್ಮದ ಪರವಾಗಿರುವ ಜೆಡಿಎಸ್ ಪಕ್ಷಕ್ಕೆ ಮನ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು, ಡಿ.ಸಿ.ವೇಣುಗೋಪಾಲ್, ರಾಹುಲ್‌ಗೌಡ, ಹಾಲೆನೂರು ಲೇಪಾಕ್ಷ, ಹಾಲೆನೂರು ಆನಂತ, ಬೆಳಗುಂಬ ವೆಂಕಟೇಶ್, ಹಿರೇಹಳ್ಳಿ ಮಹೇಶ್, ಬೆಳಗುಂಬ ಉಸ್ತುವಾರಿ ಹರೀಶ್ ನರಸಾಪುರ, ಗೂಳೂರು ಉಸ್ತುವಾರಿ ಪಾಲನೇತ್ರಯ್ಯ, ನರುಗನಹಳ್ಳಿ ವಿಜಯಕುಮಾರ್, ಮಂಜುನಾಥ್ ಹೊನ್ನುಡಿಕೆ, ದೀಪು, ರಾಮಣ್ಣ, ಚಿಕ್ಕಣ್ಣನಹಟ್ಟಿ ದೇವಾಲಯದ ಆರ್ಚಕ ಪಾಪಣ್ಣ, ಅಲ್ಪಸಂಖ್ಯಾತರ ಘಟಕದ ತನ್ವೀರ್, ಅಜ್ಹಾಮ್, ಗೂಳೂರು ಕೃಷ್ಣೇಗೌಡ, ಚಿಕ್ಕಸಾರಂಗಿ ರವಿ, ಪುಟ್ಟರಾಜು ಗೂಳೂರು, ವಿಷ್ಣುವರ್ಧನ್, ನಗರಪಾಲಿಕೆ ಸದಸ್ಯರಾದ ಹೆಚ್.ಡಿ.ಕೆ.ಮಂಜುನಾಥ್, ಶ್ರೀನಿವಾಸ್, ಉಪಮೇಯರ್ ನರಿಸಿಂಹಮೂರ್ತಿ, ರವೀಶ್ ಜಹಂಗೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.