ತುಮಕೂರು: ತುಮಕೂರು ಗ್ರಾಮಾಂತರದ ಬಿಜೆಪಿ ಅಭ್ಯರ್ಥಿ ಪರ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗ್ರಾಮಾಂತರದ ಗೂಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಪರ ಚುನಾವಣ ಪ್ರಚಾರ ಆರಂಭಿಸಿ ಮಾತನಾಡಿದ ಅವರು, ಬಿ.ಸುರೇಶ್ ಗೌಡ ಅವರು ಎರಡು ಭಾರಿ ಶಾಸಕರಾಗಿ ಆಯ್ಕೆ ಆಗಿ ಸುಮಾರು 2500 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಅಂತಹ ಅಭಿವೃದ್ಧಿ ಶಾಸಕರನ್ನು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಿ.ಸಿ ಗೌರಿಶಂಕರ್ ವಿದ್ಯಾರ್ಥಿಗಳಿಗೆ ನಕಲಿ ಬಾಂಡ್ ವಿರತಣೆ ಮಾಡಿ ಶಾಸಕರಾಗಿದ್ದಾರೆ. ಆದರೆ ನ್ಯಾಯಾಲಯ ಶಾಸಕ ಸ್ಥಾನದಿಂದ ಅನರ್ಹ ಎಂದು ಘೋಷಿಸಿದೆ. ಅನ್ಯ ಮಾರ್ಗದಿಂದ ಅಧಿಕಾರ ಹಿಡಿದಿರುವ ಗೌರಿಶಂಕರ್ ಅವರನ್ನು ಕ್ಷೇತ್ರದಿಂದ ದೂರ ಇಡುವ ಕಾರ್ಯವನ್ನು ಕ್ಷೇತ್ರದ ಜನತೆ ಮಾಡಬೇಕಿದೆ ಎಂದರು.
ಬಿ.ಸುರೇಶ್ ಗೌಡ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದ ಜನರು ಈ ಭಾರಿ ಬಿ.ಸುರೇಶ್ ಗೌಡ ಅವರನ್ನು ಗೆಲ್ಲಿಸಬೇಕಿದೆ. ಅಕ್ರಮದ ವಿರುದ್ಧ ಸಮರ ಸಾಧಿಸಿ ಸಕ್ರಮದ ಕಡೆ ಜನರು ಮುಖ ಮಾಡಬೇಕಿದೆ. ಬಿ.ಸುರೇಶ್ ಗೌಡ ಸ್ವಲ್ಪ ಕೋಪಿಷ್ಠ ಆದರೆ ಅಭಿವೃದ್ಧಿಯ ಕೋಪಿಷ್ಠ ಇಂತ ಸಜ್ಜನ ರಾಜಕಾರಣಿಗಳನ್ನು ಮತದಾರರು ಎಂದಿಗೂ ಕಳೆದುಕೊಳ್ಳಬಾರದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರಕಾರ ರೈತರಿಗೆ ಕೃಷಿ ವಿಮೆ,ಬೆಳೆ ಪರಿಹಾರ, ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಪ್ರೋತ್ಸಾಹ ಸೇರಿದಂತೆ ಹಲವಾರು ಜನಪರ ಸೌಲಭ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳ ಆಯ್ಕೆ ಆಗುವ ಮೂಲಕ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ನುಡಿದರು.
ತು.ಗ್ರಾಮಂತರ ಅಭ್ಯರ್ಥಿ ಬಿ.ಸುರೇಶ್ ಗೌಡ ಮಾತನಾಡಿ,ನಾನು ತುಮಕೂರು ಗ್ರಾಮಾಂತರದಲ್ಲಿ ಹತ್ತು ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ನಾನು ಅಂದಿನ ಬಿ.ಎಸ್ ಯಡಿಯೂರಪ್ಪ ಅವರ ಸರಕಾರದಲ್ಲಿ ಇಂದಿನ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದರು. ಅಂದು ತುಮಕೂರು ಗ್ರಾಮಾಂತರಕ್ಕೆ ನೀರಾವರಿಗೆ ವಿಶೇಷ ಅನುದಾನ ನೀಡಿದ್ದರು, ಬಿ.ಎಸ್ ಯಡಿಯೂರಪ್ಪ ಹಾಗೂ ಬೊಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಹೆಬ್ಬೂರು,ಗೂಳೂರು ಏತ ನೀರಾವರಿ ಯೋಜನೆ ಅನುಷ್ಠಾನ ಆಯಿತು. ಹಿರಿಯ ಮಹನೀಯರ ಸಹಕಾರದಿಂದ ತುಮಕೂರು ಗ್ರಾಮಾಂತರದ ನೀರಿನ ಮೂಲಗಳನ್ನು ಕಾಣದ ಹೆಬ್ಬೂರು,ನಾಗವಲ್ಲಿ,ಗೂಳೂರು ಕೆರೆಗೆ ಹೇಮಾವತಿ ನೀರು ಹರಿಯುವಂತಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ಛಲವಾದಿ ನಾರಾಯಣ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.