News Karnataka Kannada
Friday, March 29 2024
Cricket
ತುಮಕೂರು

ಅಂತರಾಷ್ಟ್ರೀಯ ಕ್ರೀಡಾಪಟುವಿಗೆ ಅನ್ಯಾಯ ಖಂಡಿಸಿ ವಿನೂತನ ಪ್ರತಿಭಟನೆ

Protest against injustice meted out to international athletes
Photo Credit : News Kannada

ತುಮಕೂರು: ಅಂತರಾಷ್ಟ್ರೀಯ ಕ್ರಿಡಾಪಟುಗಳಿಗೆ ಆಗಿರುವ ಅನ್ಯಾಯ ಹಾಗೂ ಅವಮಾನವನ್ನು ಖಂಡಿಸಿ, ಮಂಗಳವಾರ ನಗರದ ಟೌನ್‌ಹಾಲ್ (ಬಿಜಿಎಸ್) ಸರ್ಕಲ್ ಬಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಪಕ್ಷಾತೀತವಾಗಿ ಮತ್ತು ಕುಸ್ತಿ, ಕಬ್ಬಡಿ ಸೇರಿದಂತೆ ಇತರೆ ಕ್ರೀಡಾಪಟುಗಳೊಂದಿಗೆ ಸಾರ್ವಜನಿಕರಲ್ಲಿ ದೌರ್ಜನ್ಯಗಳ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಟೌನ್‌ಹಾಲ್ ವೃತ್ತದಲ್ಲಿ ಆಂಜನೇಯಸ್ವಾಮಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಕುಸ್ತಿ ಪಂದ್ಯಾವಳಿಯನ್ನು ನಡೆಸುವ ಮೂಲಕ ವಿನೂತನವಾಗಿ ಮಹಿಳಾ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ತರಬೇತುದಾರ ಬ್ರಿಜ್ ಭೂಷಣ್ ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹಿಳಾ ಕ್ರೀಡಾಪಟುಗಳನ್ನು ಪೊಲೀಸರು ಅಮಾನವೀಯವಾಗಿ ಎಳೆದೊಯ್ದ ರೀತಿ ಖಂಡನೀಯ ಎಂದರು.

ಮಹಿಳೆಯರು ಕ್ರೀಡಾ ಜಗತ್ತಿಗೆ ಬರುವುದೇ ಅಪರೂಪ. ಅಂತಹುದರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಭಾರತದ ಹಿರಿಮೆ ಸಾರಿದ ಕುಸ್ತಿಪಟುಗಳಿಗೆ ನಮ್ಮ ನೆಲದಲ್ಲಿ ಅವಮಾನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕ್ರೀಡಾಪಟುಗಳ ಮತ್ತು ಅವರ ಪೋಷಕರ ಪರವಾಗಿ ನಮ್ಮ ಧ್ವನಿ ಇಡೀ ರಾಷ್ಟ್ರಕ್ಕೆ ತಲುಪಬೇಕು ಎಂಬ ನಿಟ್ಟಿನಲ್ಲಿ ಇಂದು ಸಾಂಕೇತಿಕವಾಗಿ ಕುಸ್ತಿ ಪಂದ್ಯ ಏರ್ಪಡಿಸಿ ನಮ್ಮೆಲ್ಲರ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ಹಾಸ್ಟೆಲ್‌ಗೆ ಸೇರುವಂತಹ, ಕ್ರೀಡಾಂಗಣಕ್ಕೆ ಬರುವವರು, ರಾಷ್ಟ್ರ, ರಾಜ್ಯವನ್ನು ಪ್ರತಿನಿಧಿಸುವ ನಿಮ್ಮಗಳ ಜೊತೆ ನಾವಿದ್ದೇವೆ. ಯಾವುದೇ ಕೆಟ್ಟ ನಡುವಳಿಕೆಗಳಿಗೆ ಆಸ್ಪದ ಕೊಡಬಾರದು, ಆಯ್ಕೆ ಸಮಿತಿ, ಕೋಚ್ ಅಥವಾ ಪ್ರಾಯೋಜಕರಿಗೆ ಇದು ಎಚ್ಚರಿಕೆಯ ಸಂದೇಶ ಎಂದರು.

ದೆಹಲಿಯ ಜಂತರ್‌ಮಂಥರ್‌ನಲ್ಲಿ ಏ.೨೩ ರಿಂದ ಆರಂಭಗೊಂಡ ಹೋರಾಟಕ್ಕೆ ಇಂದಿಗೂ ನ್ಯಾಯ ಸಿಗದಿರುವುದು ಬೇಸರದ ಸಂಗತಿ. ಕುಸ್ತಿ ಒಂದೇ ಅಲ್ಲ, ಕ್ರಿಕೆಟ್, ಕಬಡ್ಡಿ, ಅಥ್ಲೆಟಿಕ್ಸ್ ಪ್ರತಿಯೊಂದರಲ್ಲೂ ಯಾರು ಧ್ವನಿ ಹೊರಗೆ ಹೇಳುವುದಕ್ಕೆ ಸಾಧ್ಯವಿಲ್ಲದೇ ಒಳಗೆಯೇ ಹೆಣ್ಣುಮಕ್ಕಳು ನೋವನ್ನು ಅನುಭವಿಸುತ್ತಿದ್ದಾರೋ ಅವರ ಪರವಾಗಿ ನಾವಿದ್ದೇವೆ ಎಂಬ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಮಹಿಳಾ ಕ್ರೀಡಾಪಟುಗಳಿಗೆ ಸುಭದ್ರತೆ ಹಾಗೂ ಆತ್ಮವಿಶ್ವಾಸವನ್ನು ನೀಡಿ ಅವರ ಸಾಧನೆಗೆ ಪೂರಕವಾದ ವಾತಾವರಣವನ್ನು ನೀಡುವ ಉದ್ದೇಶದಿಂದ ತುಮಕೂರಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಬುಧವಾರದಿಂದ ಜಿಲ್ಲೆಯಾದ್ಯಂತ ಪ್ರತೀ ತಾಲ್ಲೂಕಿನಲ್ಲೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಮುರಳೀಧರ ಹಾಲಪ್ಪ ತಿಳಿಸಿದರು.

ಹಿರಿಯ ಕುಸ್ತಿಪಟು ರೇವಣಸಿದ್ಧಯ್ಯ ಮಾತನಾಡಿ, ರಾಮಾಯಣ ಮಹಾಭಾರತದ ಕಾಲದಿಂದಲೂ ಹೆಸರುವಾಸಿಯಾದ ಕುಸ್ತಿ ಪಂದ್ಯಾವಳಿಯಲ್ಲಿ ಇಂದು ಮಹಿಳೆಯರು ಭಾಗವಹಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದು, ಇಂತಹ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಬ್ರಿಜ್ ಭೂಷಣ್ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಬಂಧಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಅಂತರಾಷ್ಟ್ರೀಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ, ಒಲಂಪಿಕ್ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದಿರುವಂತಹ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಹೋರಾಟ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ವಿರುದ್ಧ ಪೊಲೀಸರನ್ನು ಬಿಟ್ಟು ಅವರನ್ನು ಎಳೆದೊಯ್ದ ರೀತಿ ಖಂಡನೀಯ ಎಂದರು.
ರಾಷ್ಟ್ರೀಯ ಕ್ರೀಡಾಪಟು ಅನಿಲ್ ಮಾತನಾಡಿ, ಮಹಿಳಾ ಕುಸ್ತಿ ಪಟುಗಳು ಪ್ರತಿಭಟನೆ ನಡೆಸುತ್ತಿದ್ದರೂ ದೇಶದ ಪ್ರಧಾನಿಗಳು ನಾಟಕೀಯ ಮಾಡುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಸಮಸ್ಯೆ ಆಲಿಸಲು ಪ್ರಧಾನಿಗಳಿಗೆ ಪುರುಸೊತ್ತಿಲ್ಲ, ಕೂಡಲೇ ಮಹಿಳಾ ಕುಸ್ತಿಪಟುಗಳ ಸಮಸ್ಯೆ ಆಲಿಸಿ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ಸಾಂಕೇತಿಕವಾಗಿ ಕುಸ್ತಿ ನಡೆಸಲಾಯಿತು. ಸಿದ್ಧಲಿಂಗೇಗೌಡ, ಷಣ್ಮುಖಪ್ಪ, ಮೋಹನ್, ರೇವಣ ಸಿದ್ಧಯ್ಯ, ತರುಣೇಶ್, ಮಂಜುನಾಥ್, ನಟರಾಜಶೆಟ್ಟಿ, ಸಂಜೀವ್‌ಕುಮಾರ್, ಅನಿಲ್, ಗೀತಾ ರುದ್ರೇಶ್, ಸವಿತಾ, ಕವಿತಾ, ವಸುಂಧರ, ಸಿ.ಡಿ.ಜಯಶ್ರೀ, ಅನ್ನಪೂರ್ಣ, ಗೀತಾ, ಪ್ರೇಮ, ಲಕ್ಷ್ಮೀದೇವಮ್ಮ, ಟಿ.ಕೆ.ಆನಂದ್, ಪೈಲ್ವಾನ್ ಮಹೇಶ್, ಗಗನ್ ಗೌಡ, ಸಿದ್ಧರಾಜು, ಚಿಕ್ಕರಂಗಪ್ಪ, ತಾಹೇರಾ, ಪ್ರಕಾಶ್ ಸೇರಿದಂತೆ ಕುಸ್ತಿಪಟುಗಳು, ಹಲವಾರು ಕ್ರೀಡಾಪಟುಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು