News Karnataka Kannada
Friday, April 26 2024
ತುಮಕೂರು

ತುಮಕೂರು: ಕಾಡುಗೊಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ – ಬಿ.ಸುರೇಶ್‌ಗೌಡ

Social justice for Kadugolla community: B Suresh Gowda
Photo Credit : News Kannada

ತುಮಕೂರು: ತುಮಕೂರು ವಿಧಾನಸಭಾ ಕ್ಷೇತ್ರದ ೩೫ ಗ್ರಾಮಪಂಚಾಯಿತಿಗಳಲ್ಲಿ ೩ರಲ್ಲಿ ಕಾಡುಗೊಲ್ಲರಿಗೆ, ಒಂದರಲ್ಲಿ ಗೊಲ್ಲ ಸಮುದಾಯಕ್ಕೆ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ತಿಳಿಸಿದ್ದಾರೆ.

ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿಸೌಧದಲ್ಲಿಂದು ಆಯೋಜಿಸಿದ್ದ ಗೊಲ್ಲ ಸಮುದಾಯದ ಮುಖಂಡರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಕ್ಷೇತ್ರದ ಹಿರೇಹಳ್ಳಿ, ಗಳಿಗೇನಹಳ್ಳಿ, ನಿಡುವಳಲು ಗ್ರಾಮಪಂಚಾಯಿತಿಗಳಲ್ಲಿ ಕಾಡುಗೊಲ್ಲ ಸಮುದಾಯಕ್ಕೆ, ಸೀತಕಲ್ಲು ಗ್ರಾಮಪಂಚಾಯಿತಿಯಲ್ಲಿ ಗೊಲ್ಲ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿ, ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ ಎಂದರು.

ಶಿರಾ ಉಪಚುನಾವಣೆಯಲ್ಲಿ ಹಾಗೂ ಇನ್ನಿತರ ಸಂದರ್ಭದಲ್ಲಿ ನಾನು ಗೊಲ್ಲ ಸಮುದಾಯಕ್ಕೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದ್ದನ್ನು ಕಣ್ಣಾರೆ ಕಂಡು, ಇವರ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಅಭಿವೃದ್ದಿಗಾಗಿ ಕಾಡುಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿಟ್ಟು, ನಿಗಮವನ್ನು ಸ್ಥಾಪಿಸಿ, ಚಂಗಾವರ ಮಾರಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇನೆ.ಅಲ್ಲದೆ ಕ್ಷೇತ್ರದ ೩೮ ಗೊಲ್ಲರಹಟ್ಟಿಗಳಿಗೂ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಅಗತ್ಯವಿರುವರಿಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ನೀಡಿ, ಅವರ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡಿದ್ದೇನೆ.ಹಾಗಾಗಿ ಮೇ.೧೦ ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲುವು ತಂದುಕೊಡುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಗೊಲ್ಲರಹಟ್ಟಿಗಳನ್ನು ದತ್ತು ಪಡೆದು, ಅಲ್ಲಿನ ಶಾಲೆ, ಅಂಗನವಾಡಿ ಸೇರಿದಂತೆ ಗ್ರಾಮವನ್ನು ದತ್ತು ಪಡೆದು, ಅಭಿವೃದ್ದಿ ಪಡಿಸಲಾಗುವುದು.ಇದರ ಜೊತೆಗೆ ಕಾಡುಗೊಲ್ಲ ಅಭಿವೃದ್ದಿ ನಿಗಮದಿಂದ ಹೆಚ್ಚಿನ ಅನುದಾನ ತಂದು ಕಾಡುಗೊಲ್ಲ ಮತ್ತು ಗೊಲ್ಲ ಸಮುದಾಯದ ಮಕ್ಕಳ ಶೈಕ್ಷಣಿಕ, ಅರ್ಥಿಕ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಬಿ.ಸುರೇಶಗೌಡ ತಿಳಿಸಿದರು.

ಮೇ.೧೦ರಂದು ನಡೆಯುತ್ತಿರುವ ಚುನಾವಣೆ ಕುರುಕ್ಷೇತ್ರವಿದ್ದಂತೆ,ಕೃಷ್ಣನ ಮಕ್ಕಳಾದ ನೀವುಗಳ ಧರ್ಮವಾಗಿ ನಡೆದುಕೊಳ್ಳುತ್ತಿರುವ ನನಗೆ ಬೆಂಬಲವಾಗಿ ನಿಂತು ಜಯಗಳಿಸುವಂತೆ ಮಾಡಬೇಕು.ಹಾಲಿ ಶಾಸಕರು ಕಳೆದ ಬಾರಿ ಹೇಗೆ ಚುನಾವಣೆಯನ್ನು ಮೋಸದಿಂದ ಗೆದ್ದರು ಎಂಬುದು ಗೊತ್ತಿದೆ.ಹಾಗೂ ಮೋಸವೇ ತುಂಬಿರುವ, ಕುತಂತ್ರಿಗಳಿರುವ ವಿರೋಧಪಕ್ಷವನ್ನು ಬದಿಗೊತ್ತಿಗೆ ಬಿಜೆಪಿಯನ್ನು ಗೆಲ್ಲಿಸುವಂತೆ ಸುರೇಶಗೌಡ ಮನವಿ ಮಾಡಿದರು.

ಕಾಡುಗೊಲ್ಲ ಅಭಿವೃದ್ದಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಮಾತನಾಡಿ,ನಾನು ಇಂದು ಒಂದು ನಿಗಮದ ಅಧ್ಯಕ್ಷನಾಗಿದ್ದರೆ ಅದಕ್ಕೆ ಸುರೇಶಗೌಡರೇ ಕಾರಣ. ಶಿರಾ ಉಪಚುನಾವಣೆಯಲ್ಲಿ ನನ್ನೊಂದಿಗೆ ಶಿರಾಕ್ಷೇತ್ರದ ೩೭೨ ಕಾಡುಗೊಲ್ಲರ ಹಟ್ಟಿಗಳನ್ನು ಸುತ್ತಿ, ಅಲ್ಲಿನ ನಿಜಸ್ಥಿತಿ ಅರಿತ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಡುಗೊಲ್ಲ ನಿಗಮದ ಸ್ಥಾಪನೆ ಕುರಿತಂತೆ ಮನವರಿಕೆ ಮಾಡಿಕೊಟ್ಟ ಹಿನ್ನೇಲೆಯಲ್ಲಿ ನಿಗಮ ಸ್ಥಾಪನೆಯಾಯಿತು.ಅಲ್ಲದೆ ಕಾಡುಗೊಲ್ಲರ ಅರಾಧ್ಯ ಧೈವಗಳಿರುವ ಜುಂಜಪ್ಪನಗುಡ್ಡೆ, ಹೆತ್ತಪ್ಪನ ದೇವಾಲಯ,ಚಿಕ್ಕಣ್ಣನ ಹಟ್ಟಿಗಳಿಗೆ ಅನುದಾನ ನೀಡಿ ಅಭಿವೃದ್ದಿಪಡಿಸಿದ್ದಾರೆ. ಹಾಗಾಗಿ ಅವರನ್ನು ನಾವು ಈ ಚುನಾವಣೆಯಲ್ಲಿ ಕೈ ಹಿಡಿಬೇಕಾಗಿದೆ ಎಂದರು.

ತುಮಕೂರು ಗ್ರಾಮಾಂತರ ಓಬಿಸಿ ಮೋರ್ಚಾದ ಶಿವಕುಮಾರ್ ಮಾತನಾಡಿ,ಕ್ಷೇತ್ರದಲ್ಲಿ ೩೮ ಗೊಲ್ಲರಹಟ್ಟಿಗಳಿದ್ದು, ಅವುಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿಗಳನ್ನುಕಲ್ಪಿಸಲು ಸುರೇಶಗೌಡರು ಅವಿರತ ಶ್ರಮಿಸಿದ್ದಾರೆ.ಅಲ್ಲದೆ ಗೊಲ್ಲರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸುರೇಶಗೌಡರು ಶಾಸಕರಾಗಿದ್ದ ಕಾಲದಲ್ಲಿ ಮಾಡಿದ್ದು,ಕಾಡುಗೊಲ್ಲ ಸಮುದಾಯದ ಆಸೆ, ಅಮೀಷಗಳಿಗೆ ಬಲಿಯಾಗದೆ ಸುರೇಶಗೌಡರನ್ನು ಈ ಬಾರಿ ಬೆಂಬಲಿಸುವಂತೆ ಮನವಿ ಮಾಡಿದರು.

ಕಾಡುಗೊಲ್ಲ ಸಮುದಾಯದ ಯುವ ಮುಖಂಡ ಗೋವಿಂದರಾಜು ಮಾತನಾಡಿ,ಕರೋನ ಸಂದರ್ಭದಲ್ಲಿ ಸುರೇಶಗೌಡರು ಸೋಂಕಿಗೆ ಒಳಗಾದವರಿಗೆ ಬೆಡ್ ಒದಗಿಸಲು ಅವಿರತ ಶ್ರಮಿಸಿದ್ದಾರೆ.ಅಲ್ಲದೆ ಕ್ಷೇತ್ರದಾದ್ಯಂತ ದಿನಸಿ ಕಿಟ್ ವಿತರಿಸಿ ಎಲ್ಲರಿಗೂ ಅನುಕೂಲ ಕಲ್ಪಿಸಲಾಗಿದೆ.ಇದರ ಅನುಕೂಲ ಪಡೆದ ಪ್ರತಿಯೊಬ್ಬರು ಸುರೇಶಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಸಮುದಾಯದ ಯುವ ಮುಖಂಡರಾದ ಶೇಷಕುಮಾರ್,ಗ್ರಾಮಪಂಚಾಯಿತಿ ಅಧ್ಯಕ್ಷರುಗಳಾದ ಶ್ರೀಮತಿ ಭಾಗ್ಯ ಸತೀಶ್,ಅನ್ನಪೂರ್ಣ ಈರೇಗೌಡ, ಯಮುನ ಗೋವಿಂದರಾಜು, ಕೃಷ್ಣಮೂರ್ತಿ, ಸದಸ್ಯರಾದ ಶಿವಗಂಗಯ್ಯ, ವೀಣಾ ಸುರೇಶ್, ರಾಜಣ್ಣ, ಜೋತಿಕುಮಾರ್, ಚಿಕ್ಕಮ್ಮ ,ಲಲಿತ ರಂಗಸ್ವಾಮಿ, ನಳಿನ, ಶಿವಲಿಂಗಯ್ಯಮ, ಶಿವಮ್ಮ, ಶಿವರಾಜ್, ಶಿವಣ್ಣ,ಯತ್ತಪ್ಪನಹಟ್ಟಿ ಪೂಜಾರಿಗಳಾದ ಯರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾವೇಶಕ್ಕೂ ಮೊದಲು ಗೋವುಗಳಿಗೆ ಪೂಜೆ ಸಲ್ಲಿಸಿ, ಹೆಗ್ಗುಂದ ಮಲ್ಲೇಶ್ವರ ಮಹಾಸಂಸ್ಥಾನ ಮಠದ ಶ್ರೀಬಸವ ರಮಾನಂದಸ್ವಾಮೀಜಿಗಳ ಆಶೀರ್ವಾದ ಪಡೆಯಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು