ಕಲಬುರಗಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಸಕ್ತ ಸಾಲಿನಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಅರಶಿನ ಗಣೇಶ ಅಭಿಯಾನವನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ಅರಶಿನ ಗಣೇಶ ವಿಗ್ರಹದ ಫೋಟೋವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‍ಸೈಟ್‍ನಲ್ಲಿ ಅಪಲೋಡ್ ಮಾಡಿ ಆಕರ್ಷಕ ಬಹುಮಾನವನ್ನು ಗೆಲ್ಲಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು 10 ಲಕ್ಷ ಅರಶಿನ ಗಣೇಶ ತಯಾರಿಕಾ ಅಭಿಯಾನ-2021ರ ಈ ವಿಶ್ವ ದಾಖಲೆಯ ಪ್ರಯತ್ನಕ್ಕೆ ಕೈಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮತ್ತು ಬಣ್ಣ ಲೇಪಿತ ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಬಳಕೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಷೇಧಿಸಿದ್ದು, ಈ ಕುರಿತು ಉಚ್ಛ ನ್ಯಾಯಾಲಯದ ನಿರ್ದೇಶನ ಕೂಡ ಇರುತ್ತದೆ.
ಕೋವಿಡ್-19 ಹಿನ್ನೆಲ್ಲೆ ಸ್ವಚ್ಛತೆ ಕಾಪಾಡುವುದು ಬಹುಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಮಂಡಳಿಯು ಅಭಿಯಾನ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಅರಶಿನ ಮಿಶ್ರಿತವಾದ ಗೋಧಿ ಹಿಟ್ಟು ಮತ್ತು ರಾಗಿ ಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶ ವಿಗ್ರಹವನ್ನು ಮನೆಯಲ್ಲಿಯೇ ತಯಾರಿಸಿ ಪೂಜಿಸಿ ಮನೆಯಲ್ಲಿಯೇ ವಿಸರ್ಜಿಸುವ ಮೂಲಕ ಪರಿಸರ ಮತ್ತು ಜಲ ಮೂಲಗಳ ಮಾಲಿನ್ಯ ತಡೆಗಟ್ಟಬಹುದಾಗಿದೆ. ಹಬ್ಬದ ಸಮಯದಲ್ಲಿ ಸಾರ್ವಜನಿಕರು ಸ್ವಚ್ಛ ಪರಿಸರವನ್ನು ಕಾಪಾಡಬೇಕೆಂದು ಅವರು ತಿಳಿಸಿದ್ದಾರೆ.