ಬೀದರ್: ‘ಕಾಂಗ್ರೆಸ್ ನಿರ್ದೇಶನದಂತೆ ಪಕ್ಷ ಬಲವರ್ಧನೆಗೆ ಫೆಬ್ರುವರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಸಮಾವೇಶ ನಡೆಸಲಾಗುವುದು’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾ ಮಟ್ಟದ ಸಮಾವೇಶಗಳನ್ನು ನಡೆಸಿದ ನಂತರ ಚುನಾವಣೆ ಪೂರ್ವದಲ್ಲಿ ಮಧ್ಯ ಕರ್ನಾಟಕದಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗುವುದು ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ರಾಜ್ಯದಲ್ಲಿ 186 ಹಿಂದುಳಿದ ಸಮುದಾಯಗಳಿವೆ. ಅವುಗಳನ್ನು ಒಂದುಗೂಡಿಸುವ ಪ್ರಯತ್ನ ನಡೆಯಲಿದೆ. ಇದಕ್ಕೂ ಮೊದಲು ಹಿಂದುಳಿದ ಸಮುದಾಯಕ್ಕೆ ಸೇರಿದ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುವುದು’ ಎಂದು ತಿಳಿಸಿದರು.
ಕಾಂಗ್ರೆಸ್ 70 ವರ್ಷಗಳಿಂದ ಎಲ್ಲ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಮಾಡಿಕೊಂಡು ಬಂದಿದೆ. ಅಂತೆಯೇ ಹಿಂದುಳಿದ ವರ್ಗಗಳು ಕಾಂಗ್ರೆಸ್ ಪರವಾಗಿಯೇ ಇವೆ. ರಾಜ್ಯದಲ್ಲಿ ಶೇ 55ರಷ್ಟು ಒಬಿಸಿ ಮತದಾರರಿದ್ದಾರೆ. ರಾಜ್ಯದಲ್ಲಿ ಗೆಲ್ಲುವ ಮಾನದಂಡಗಳ ಆಧಾರದ ಮೇಲೆ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು. ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ಸಮಿತಿಗೆ ಡಾ. ಪರ ಮೇಶ್ವರ ಅಧ್ಯಕ್ಷರಾಗಿದ್ದರೆ, ನಾನು ಉಪಾಧ್ಯ ಕ್ಷನಾಗಿದ್ದೇನೆ. ರಾಜ್ಯ ದಾದ್ಯಂತ ಸಂಚರಿಸಿ ಈಗಾಗಲೇ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿರುವೆ. ಎಲ್ಲ ಅಂಶಗಳನ್ನು ಕ್ರೋಢೀಕರಿಸಿ ಬಡವರಿಗೆ ಅನುಕೂ ಲವಾಗುವಂತಹ ಪ್ರಣಾಳಿಕೆ ಸಿದ್ಧಪಡಿ ಸಲಾಗುವುದು. ಜಿಲ್ಲಾವಾರು ಪ್ರಣಾಳಿಕೆ ರಚಿಸಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೂ ಒತ್ತು ಕೊಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾದ ಜನಪರ ಕಾರ್ಯಕ್ರಮ ಹಾಗೂ ಯೋಜನೆಗಳಿಂದಾಗಿ ಇಂದು ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತುಕೊಡುವ ಬದಲು ಕೇವಲ ಜಾತಿ ಜಾತಿಗಳ ನಡುವೆ ಬಿರುಕು ಮೂಡಿಸುವ ಹಾಗೂ ಒಡೆದಾಳುವ ಕೆಲಸವನ್ನು ಮಾಡುತ್ತಿದೆ. ಜನ ರಾಜ್ಯದಲ್ಲಿ ಬಿಜೆಪಿ ದುರಾಡಳಿತ ನೋಡಿದ್ದಾರೆ. ಸಹಜವಾಗಿ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಮ್ ಖಾನ್, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹಾಗೂ ಚಂದ್ರಾಸಿಂಗ್ ಇದ್ದರು.