ಬೀದರ್/ ಹುಮ್ನಾಬಾದ್: ‘ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸಮಿತಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರಿ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಂ.ಮಚ್ಚೆ ತಿಳಿಸಿದರು.
ನಗರದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸರ್ಕಾರಿ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
‘ಬೀದರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳ 20 ಹುದ್ದೆಗಳ ಪೈಕಿ 7 ಹುದ್ದೆಗಳು ಖಾಲಿ ಇವೆ. ಸಾರ್ವಜನಿಕರಿಗೆ ಸೇವೆ ಕೊಡುವ ದಿಸೆಯಲ್ಲಿ ಒಬ್ಬ ಅಧಿಕಾರಿ ಎರಡು ಕಡೆ ಕೆಲಸ ಮಾಡಬೇಕಾಗಿದೆ. ಕೆಲಸದ ಒತ್ತಡದ ಮಧ್ಯೆಯೂ ಜನರಿಗೆ ಉತ್ತಮ ಸೇವೆ ಕೊಡುತ್ತಿದ್ದಾರೆ’ ಎಂದು ತಿಳಿಸಿದರು.
‘ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ಷಕಿರಣ ಕೊಠಡಿಯ ಹೊರಗಡೆ ಗರ್ಭಿಣಿಯರು ಹಾಗೂ ಮಕ್ಕಳು ಕ್ಷಕಿರಣಗಳಿಂದ ದೂರ ಇರಬೇಕು ಎಂದು ಫಲಕ ಹಾಕಿರುತ್ತದೆ. ಸಿಬ್ಬಂದಿ ಕೊರತೆ ಇರುವ ಕಾರಣ ಮಹಿಳಾ ಸಿಬ್ಬಂದಿ ಇದಾವುದನ್ನೂ ಲೆಕ್ಕಿಸದೇ ಸಾರ್ವಜನಿಕರಿಗೆ ಸೇವೆ ಕೊಟ್ಟಿದ್ದಾರೆ’ ಎಂದು ಹೇಳಿದರು.
‘ಕ್ಷಕಿರಣ ಯಂತ್ರಗಳ ಮೇಲೆ ನಿರಂತರವಾಗಿ ಕೆಲಸ ಮಾಡುವುದರಿಂದ ಸಿಬ್ಬಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಕ್ಷಕಿರಣ ತಂತ್ರಜ್ಞರಿಗೆ ಪ್ರತ್ಯೇಕವಾದ ರಜೆಗಳು ಇವೆ. ಆದರೆ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ರಜೆ ಬಳಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಗನ್ನಾಥ ಬಿರಾದಾರ ಮಾತನಾಡಿ, ‘ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿಗಳು, ಕ್ಷಕಿರಣ ಟೆಕ್ನಿಷಿಯನ್ಗಳು ಸಿಬ್ಬಂದಿ ಕೊರತೆ ಮಧ್ಯೆಯೂ ರೋಗಿಗಳಿಗೆ ಉತ್ತಮ ಸೇವೆ ಕೊಡುತ್ತ ಬಂದಿದ್ದಾರೆ. ಜಿಲ್ಲೆಯ ರೇಡಿಯಾಲಾಜಿ ಇಮೇಜಿಂಗ್ ಅಧಿಕಾರಿ ವಿರುದ್ಧ ಇಂದಿಗೂ ಒಂದೇ ಒಂದು ದೂರು ಬಂದಿಲ್ಲ. ಅದು ಅವರ ಸೇವಾ ಭಾವವನ್ನು ಬಿಂಬಿಸಿದೆ’ ಎಂದರು.
ಚಿಂತಕ ಎಂ. ಚಂದ್ರಕಾಂತ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ‘ಸಂಘವು ಕೇವಲ ದಿನಾಂಕಗಳ ಮಾಹಿತಿಯನ್ನಷ್ಟೇ ಒದಗಿಸದೇ. ಕ್ಷಕಿರಣ ತಂತ್ರಜ್ಞರಿಗೆ ಅನುಕೂಲವಾಗುವ ಎಲ್ಲ ಅಂಶಗಳನ್ನೂ ಕ್ಯಾಲೆಂಡರ್ನಲ್ಲಿ ಪ್ರಕಟಿಸಿದೆ. ಹೀಗಾಗಿ ಇದೊಂದು ಅರ್ಥಪೂರ್ಣ ಕ್ಯಾಲೆಂಡರ್’ ಎಂದು ಬಣ್ಣಿಸಿದರು.
ಉಪಾಧ್ಯಕ್ಷರಾದ ಕಾವೇರಿ, ಜೋಷ್ವಾ, ಕಾರ್ಯದರ್ಶಿ ಜಗನ್ನಾಥ ಢಗೆ, ಖಜಾಂಚಿ ಸವಿತಾ, ಸಂಘಟನಾ ಕಾರ್ಯದರ್ಶಿ ರಾಹುಲ್, ಜಂಟಿ ಕಾರ್ಯದರ್ಶಿ ಅಂಬಿಕಾ ಮತ್ತು ಸುಧಾರಾಣಿ ಇದ್ದರು.