ಬೀದರ್: ಬೀದರ್ ಉತ್ಸವ ಯಶಸ್ವಿಯಾಗಿ ನಡೆದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಕಿಶೋರಬಾಬು ಅವರನ್ನು ಭೇಟಿಯಾಗಿ, ಸನ್ಮಾನಿಸಿ, ಅಭಿನಂದಿಸಲಾಯಿತು.
ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಾಳಜಿಯಿಂದಾಗಿ ಬೀದರ್ ಉತ್ಸವವು ಮೂರು ದಿನಗಳ ಕಾಲ ವೈಭವಪೂರ್ಣವಾಗಿ, ಶಾಂತಿಯುತವಾಗಿ ನಡೆದಿದೆ ಎಂದು ಅಧ್ಯಕ್ಷರೂ ಆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಉತ್ಸವದಲ್ಲಿ ನಾಲ್ಕೈದು ಲಕ್ಷ ಜನ ಪಾಲ್ಗೊಂಡರೂ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾ ಆಡಳಿತ ನೋಡಿಕೊಂಡಿರುವುದು ಶ್ಲಾಘನೀಯ. ಯಾವುದೇ ರೀತಿಯ ಗೊಂದಲ, ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆಯು ಕಟ್ಟೆಚ್ಚರ ವಹಿಸಿರುವುದು ಅನುಕರಣೀಯ.
ಬೀದರ್ ಉತ್ಸವ ಬರೀ ಸಾಂಸ್ಕೃತಿಕ ಚಟುವಟಿಕೆಗಷ್ಟೇ ಸೀಮಿತವಾಗಿಲ್ಲ. ಉದ್ಯೋಗ ಮೇಳ, ಕೃಷಿ ಮೇಳ, ತೋಟಗಾರಿಕೆ ಮೇಳ, ವಸ್ತುಪ್ರದರ್ಶನ ಮುಂತಾದವು ನಡೆದಿವೆ. ಸಂಗೀತ ಪ್ರತಿಭೆಗಳ ಶೋಧಕ್ಕೆ ಬೀದರ್ ಐಡಲ್ ಸ್ಪರ್ಧೆ ನಡೆಸಲಾಗಿದೆ. ಇಡೀ ಉತ್ಸವವು ಅತ್ಯಂತ ಅರ್ಥಪೂರ್ಣವಾಗಿ ನಡೆದಿರುವುದು ಸಂತಸದ ಸಂಗತಿ.