ಬೀದರ್ : ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಚಾಂಗಲೇರಾ ಮತ್ತು ಕರಕನಳ್ಳಿ ಗ್ರಾಮಗಳ ಅನೇಕ ಜನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಶನಿವಾರ ರಾತ್ರಿ ಜೆಡಿಎಸ್ ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನಾವೆಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ಪಕ್ಷ ಸಂಘಟನೆ, ಬಲವರ್ಧನೆಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ಪಕ್ಷದಲ್ಲಿರುವ ಮುಖಂಡರು, ಕಾರ್ಯಕರ್ತರೆಲ್ಲರೂ ಪಕ್ಷದ ತತ್ವ ಸಿದ್ದಾಂತಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಪಕ್ಷದ ರಾಷ್ಟ್ರಾಧ್ಯಕ್ಷರು, ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಹಿರಿಯ ನಾಯಕರಾದ ಹೆಚ್.ಡಿ ಕುಮಾರಸ್ವಾಮಿರವರ ಕೈ ಬಲಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ನೂತನ ಕಾರ್ಯಕರ್ತರಿಗೆ ಕರೆ ನೀಡಿದರು.
ದೇವೇಗೌಡರು, ಕುಮಾರಸ್ವಾಮಿರವರು, ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂರವರು ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದು. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಜನತಾ ಜಲದಾರೆಯ ಬಳಿಕ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು, ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ನಾವೆಲ್ಲರೂ ತಳಮಟ್ಟದಿಂದ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ನಾವು ಅಧಿಕಾರದಲ್ಲಿ ಇದ್ದಾಗ ನೀಡಿದ ಜನಪರ ಕಾರ್ಯಕ್ರಮಗಳು, ಮುಂದಿನ ದಿನಗಳಲ್ಲಿ ಜಾರಿಗೆ ತರಲಿರುವ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನೂತನ ಕಾರ್ಯಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಸಹೋದರ ಮಾರುತಿ ಖಾಶೆಂಪುರ್, ಪ್ರವೀಣ್ ಸಾಗರ್ (ಮುನ್ನಾ ಕೋಟೆ), ಆನಂದ್ ಖಾಶೆಂಪುರ್ ಖಾಶೆಂಪುರೆ, ರಿಚಾರ್ಡ್ ಕೋಟೆ, ಜಾನ್ಸನ್ ದೊಡ್ಡಮನಿ, ಚಾಂಗಲೇರಾದ ಗಣಪತಿ ಹಸರಗುಂಡಗಿ, ದಿನೇಶ್ ಗಟೈದರ್, ಸುಂದರ್ ಮೇಲ್ಕೇರಿ, ಯೋಹನ್ ದೇವಗೀರಿ, ಶ್ಯಾಮ್ ಗಟೈದರ್, ಅರ್ಜುನ್ ಮೇಲ್ಕೇರಿ, ಹಣುಮಂತ ಮೇಲ್ಕೇರಿ, ಕರಕನಳ್ಳಿಯ ಗೌಸುದ್ದೀನ್ ಮೋಜಾ, ಇಸ್ಮಾಯಿಲ್ ಕಲಾಲ್, ಗುಡಸಾಬ್, ಸಲಿಂ, ಖಾಜಾಮೀಯಾ, ಬುಡಾನ್ ಸಾಬ್, ಅಕ್ಬರ್, ರಾಜಕುಮಾರ, ಸಂಜು, ಸುದರ್ಶನ್ ಸೇರಿದಂತೆ ಅನೇಕರಿದ್ದರು.