ಬೀದರ್: ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಕಟ್ಟಕಡೆಯ ರೈತರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಎಲ್ಲರೂ ಸೇರಿ ಮಾಡಬೇಕಾಗಿದೆ. ಆ ಕೆಲಸ ಬಹು ಮುಖ್ಯವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನಿರ್ಣಾದ ಹೇಮರೆಡ್ಡಿ ಮಲ್ಲಮ್ಮ ದೇವಾಲಯದ ಆವರಣದಲ್ಲಿ ಸೋಮವಾರ ನಡೆದ ಬೀದರಿನ ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ (ತೋಟಗಾರಿಕೆ) ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ರೈತರಿಗೆ ಅಕ್ಷರ ಜ್ಞಾನ ಇರದ ಕಾರಣ ಅವರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ನಾನು ಸಚಿವನಾಗಿದ್ದಾಗ ತೋಟಗಾರಿಕೆ ಮಹಾವಿದ್ಯಾಲಯವನ್ನು ಬೀದರ್ ಗೆ ತಂದಿದ್ದೇನೆ. ಕೃಷಿ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ತರುವಲ್ಲಿಯೂ ನಾವು ಶ್ರಮಿಸಿದ್ದೇವೆ. ಕೃಷಿ ಸಚಿವನಾಗಿ, ಸಹಕಾರ ಸಚಿವನಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಕೆಲಸ ಮಾಡಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತರಿಗೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದೇವು.
ಮುಂದಿನ ದಿನಗಳಲ್ಲಿ ಕೂಡ ಅದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭರವಸೆ ನೀಡಿದರು.
ವಿದ್ಯಾರ್ಥಿಗಳು ರೈತರೊಟ್ಟಿಗೆ ಬೆರೆತರೆ ಒಳಿತು:
ತೋಟಗಾರಿಕೆ ಪದವಿಗೆ ಸಿದ್ದರಾಗಿರುವ ವಿದ್ಯಾರ್ಥಿಗಳು ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗಬಾರದು. ರೈತರೊಟ್ಟಿಗೆ ಬೆರೆತು ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ರೈತರಿಗೆ ಒದಗಿಸಬೇಕು.
ಅದರೊಟ್ಟಿಗೆ ಆದುನಿಕ ತಂತ್ರಜ್ಞಾನದ ಬಗ್ಗೆ ಮತ್ತು ಆಧುನಿಕ ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಈ ಮೂರು ತಿಂಗಳ ಕಾರ್ಯಾಗಾರದಲ್ಲಿ ಅವರು ಪ್ರಾಮಾಣಿಕ ಕೆಲಸ ಮಾಡಬೇಕು. ರೈತರ ಒಳಿತಿಗಾಗಿ ಶ್ರಮಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ತೋಟಗಾರಿಕಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ. ಎಸ್.ವಿ ಪಾಟೀಲ್, ನಿರ್ಣಾ ಗ್ರಾಮ ಪಂಚಾಯತಿ ಅಧ್ಯಕ್ಷ ಸಂಜೀವಕುಮಾರ್ ಕಿರಣ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಮಹ್ಮದ್ ಫಾರೂಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಜಗನ್ನಾಥರೆಡ್ಡಿ ಎಖ್ಖೇಳ್ಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣರೆಡ್ಡಿ ಲಚ್ಚಣಗಾರ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗೀತಾ ಮಂಜುನಾಥ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಸಂಜೀವರೆಡ್ಡಿ ಮೊಹನರೆಡ್ಡಿ ನಿರ್ಣಾ, ಪ್ರಗತಿ ಪರ ರೈತ ರಾಜೇಂದ್ರ ಪಾಟೀಲ್, ಡಾ. ಅಂಬ್ರೇಶ, ಡಾ. ಅಶೋಕ್ ಸುರ್ಯವಂಶಿ ಸೇರಿದಂತೆ ಅನೇಕರಿದ್ದರು. ವಿದ್ಯಾರ್ಥಿನಿ ಪೂರ್ಣಿಮಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಭಾಗ್ಯ ಮತ್ತು ಸಂಗಡಿಗರು ರೈತ ಗೀತೆ ಹಾಡಿದರು. ವಿಶಾಲ್ ರೆಡ್ಡಿ ಸ್ವಾಗತಿಸಿದರು.